
ಭಾರತ ಮತ್ತು ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಗೆ ತೆಂಡೂಲ್ಕರ್-ಅ್ಯಂಡರ್ಸನ್ ಎಂದು ಹೆಸರಿಡಲು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಹಿಂದೆ ಇದ್ದ ಪಟೌಡಿ ಟ್ರೋಫಿ ಹೆಸರನ್ನು ಕೈ ಬಿಡಲು ನಿರ್ಧರಿಸಲಾಗಿದ್ದು, ಬದಲಿಗೆ ಆ ಹೆಸರಿನಲ್ಲಿ ವಿಶೇಷ ಪ್ರಶಸ್ತಿ ನೀಡಲಿದ್ದಾರೆ ಎಂದು ವರದಿಯಾಗಿದೆ. ಇದಕ್ಕೂ ಮುನ್ನ ಭಾರತ-ಇಂಗ್ಲೆಂಡ್ ಸರಣಿಗೆ ತನ್ನ ಹೆಸರನ್ನು ಇಡುವುದಾದರೆ, ಪಟೌಡಿ ಪರಂಪರೆಯನ್ನು ಮುಂದುವರೆಸಬೇಕೆಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಬಿಸಿಸಿಐಗೆ ಮನವಿ ಮಾಡಿದ್ದರು.
ಈ ಮನವಿಯನ್ನು ಪುರಸ್ಕರಿಸಿರುವ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಹಾಗೂ ಬಿಸಿಸಿಐ, ಇದೀಗ ಭಾರತ ಮತ್ತು ಇಂಗ್ಲೆಂಡ್ ನಡುವಣ ಸರಣಿಗೆ ತೆಂಡೂಲ್ಕರ್-ಅ್ಯಂಡರ್ಸನ್ ಟ್ರೋಫಿ ಎಂದು ಹೆಸರಿಡಲು ತೀರ್ಮಾನಿಸಿದ್ದಾರೆ. ಅಲ್ಲದೆ ಭಾರತದ ಕ್ರಿಕೆಟ್ ದಂತಕಥೆಗಳಾದ ಇಫ್ತಿಕರ್ ಅಲಿ ಖಾನ್ ಪಟೌಡಿ ಮತ್ತು ಮನ್ಸೂರ್ ಅಲಿ ಖಾನ್ ಪಟೌಡಿ ಅವರ ಗೌರವಾರ್ಥಕವಾಗಿ ಟ್ರೋಫಿಗೆ ಗೆದ್ದ ತಂಡದ ನಾಯಕನಿಗೆ ಪಟೌಡಿ ಹೆಸರಿನಲ್ಲಿ ಪದಕ ನೀಡಲಿದ್ದಾರೆ.
ಈ ಮೂಲಕ ಸಚಿನ್ ತೆಂಡೂಲ್ಕರ್ ಅವರ ಆಗ್ರಹದಂತೆ ಭಾರತ-ಇಂಗ್ಲೆಂಡ್ ಸರಣಿಯಲ್ಲಿ ಪಟೌಡಿ ಪರಂಪರೆಯನ್ನು ಮುಂದುವರೆಸಲು ಭಾರತೀಯ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ.
2007 ರಲ್ಲಿ ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿಗೆ ಪಟೌಡಿ ಟ್ರೋಫಿ ಎಂದು ಹೆಸರಿಡಲಾಗಿತ್ತು. ಆದರೆ ಈ ಬಾರಿ ಸರಣಿಯ ಹೆಸರನ್ನು ಬದಲಿಸಲು ಉಭಯ ತಂಡಗಳ ಕ್ರಿಕೆಟ್ ಮಂಡಳಿಗಳು ನಿರ್ಧರಿಸಿದ್ದರು.
ಅಲ್ಲದೆ ಈ ಶತಮಾನದ ಶ್ರೇಷ್ಠ ಕ್ರಿಕೆಟಿಗರೆನಿಸಿಕೊಂಡಿರುವ ಸಚಿನ್ ತೆಂಡೂಲ್ಕರ್ ಹಾಗೂ ಜೇಮ್ಸ್ ಅ್ಯಂಡರ್ಸನ್ ಹೆಸರನ್ನು ಟ್ರೋಫಿಗೆ ಇಡಲು ನಿರ್ಧರಿಸಲಾಯಿತು. ಆದರೆ ಪಟೌಡಿ ಹೆಸರನ್ನು ತೆಗೆದು ಹಾಕುವುದು ಅಗೌರವ ಎಂದು ಸುನಿಲ್ ಗವಾಸ್ಕರ್ ಸೇರಿದಂತೆ ಕೆಲ ಮಾಜಿ ಆಟಗಾರರು ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಸೋಲಿನ ಸರಪಳಿ ಬ್ರೇಕ್… 3 ತಂಡಗಳಿಗೆ ಒಲಿದ ಚಾಂಪಿಯನ್ ಪಟ್ಟ
ಇದರ ಬೆನ್ನಲ್ಲೇ ಸಚಿನ್ ತೆಂಡೂಲ್ಕರ್ ಕೂಡ ಭಾರತ ಮತ್ತು ಇಂಗ್ಲೆಂಡ್ ಸರಣಿಯಲ್ಲಿ ಪಟೌಡಿ ಪರಂಪರೆಯನ್ನು ಮುಂದುವರೆಸುವುದಾದರೆ ಮಾತ್ರ, ನನ್ನ ಹೆಸರಿಡುವಂತೆ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿರುವ ಇಸಿಬಿ-ಬಿಸಿಸಿಐ ಇದೀಗ ಇಂಡೊ-ಇಂಗ್ಲೆಂಡ್ ಸರಣಿ ಗೆಲ್ಲುವ ತಂಡದ ನಾಯಕನಿಗೆ ಪಟೌಡಿ ಮೆಡಲ್ ನೀಡುವ ಮೂಲಕ ಟೀಮ್ ಇಂಡಿಯಾದ ಮಾಜಿ ಆಟಗಾರನಿಗೆ ಗೌರವ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.