AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದೂ ಧರ್ಮೀಯನಾಗಿದ್ದರೂ ‘ಸುಂದರ್’​ ಹೆಸರಿಗೆ ‘ವಾಷಿಂಗ್ಟನ್’ ಸೇರಿದ್ದೇಗೆ?

Washington Sundar: ಟೀಮ್ ಇಂಡಿಯಾ ಪರ ಮೂರು ಸ್ವರೂಪಗಳಲ್ಲೂ ಕಣಕ್ಕಿಳಿದ ಕೆಲವೇ ಕೆಲವು ಆಟಗಾರರಲ್ಲಿ ವಾಷಿಂಗ್ಟನ್ ಸುಂದರ್ ಕೂಡ ಒಬ್ಬರು. ಸುಂದರ್​ ಈಗಾಗಲೇ ಭಾರತದ ಪರ 13 ಟೆಸ್ಟ್, 23 ಏಕದಿನ ಹಾಗೂ 54 ಟಿ20 ಪಂದ್ಯಗಳನ್ನಾಡಿದ್ದಾರೆ. ಅಲ್ಲದೆ 25 ವರ್ಷದ ವಾಷಿಂಗ್ಟನ್ ಸುಂದರ್ ಭರವಸೆಯ ಯುವ ಆಲ್​ರೌಂಡರ್ ಆಗಿ ಗುರುತಿಸಿಕೊಂಡಿದ್ದಾರೆ.

ಹಿಂದೂ ಧರ್ಮೀಯನಾಗಿದ್ದರೂ 'ಸುಂದರ್'​ ಹೆಸರಿಗೆ 'ವಾಷಿಂಗ್ಟನ್' ಸೇರಿದ್ದೇಗೆ?
Washington Sundar
ಝಾಹಿರ್ ಯೂಸುಫ್
|

Updated on:Aug 02, 2025 | 12:55 PM

Share

ವಾಷಿಂಗ್ಟನ್… ಈ ಹೆಸರು ಕೇಳಿದೊಡನೆ ಕ್ರಿಕೆಟ್ ಪ್ರೇಮಿಗಳಿಗೆ ಟೀಮ್ ಇಂಡಿಯಾ ಆಟಗಾರ ವಾಷಿಂಗ್ಟನ್ ಸುಂದರ್ ಅವರ ಚಿತ್ರ ಕಣ್ಮುಂದೆ ಬರಬಹುದು. ಇನ್ನುಳಿದವರಿಗೆ ಅಮೆರಿಕದ ಮೊದಲ ಅಧ್ಯಕ್ಷ ಜಾರ್ಜ್​ ವಾಷಿಂಗ್ಟನ್ ಹೆಸರು ನೆನಪಾಗಬಹುದು. ವಾಷಿಂಗ್ಟನ್ ಸುಂದರ್ ಪರಿಚಿತರಾಗುವ ಮುನ್ನ, ಜಾರ್ಜ್ ವಾಷಿಂಗ್ಟನ್ ಹೆಸರು ಕೇಳಿದ್ದರಿಂದ, ಬಹುತೇಕರು ಸುಂದರ್​ ಕ್ರಿಶ್ಚಿಯನ್ ಎಂದು ಭಾವಿಸಿದ್ದಾರೆ. ಆದರೆ ಕುತೂಹಲಕಾರಿ ವಿಷಯ ಎಂದರೆ ವಾಷಿಂಗ್ಟನ್ ಸುಂದರ್ ಹಿಂದೂ ಧರ್ಮದವರು. ಸನಾತನ ಧರ್ಮದ ಪರಿಪಾಲಕರು. ಇದಾಗ್ಯೂ ಸುಂದರ್​ ಹೆಸರಿನ ಮುಂದೆ ಕ್ರಿಶ್ಚಿಯನ್ ಹೆಸರು ಹೇಗೆ ಸೇರಿಕೊಂಡಿತು ಎಂಬ ಪ್ರಶ್ನೆ ಮೂಡುವುದು ಸಹಜ. ಇದಕ್ಕೆ ಉತ್ತರವಾಗಿ 25 ವರ್ಷಗಳ ಹಿಂದಿನ ಕಥೆಯೊಂದು ತೆರೆದುಕೊಳ್ಳುತ್ತದೆ.

ವಾಷಿಂಗ್ಟನ್ ಸುಂದರ್ ಅವರ ತಂದೆ ಎಂ ಸುಂದರ್ ತನ್ನ ಬಾಲ್ಯದಲ್ಲಿ ಕ್ರಿಕೆಟ್ ಆಟಗಾರನಾಗಬೇಕೆಂಬ ಕನಸು ಕಟ್ಟಿಕೊಂಡಿದ್ದರು. ಅದಕ್ಕಾಗಿ ಉತ್ತಮವಾಗಿ ಕ್ರಿಕೆಟ್ ಕೂಡ ಆಡುತ್ತಿದ್ದರು. ಹೀಗೆ ಚಿಕ್ಕವರಿದ್ದಾಗ ಪ್ರತಿ ದಿನ ಕ್ರಿಕೆಟ್ ಆಡಲು ಮೈದಾನಕ್ಕೆ ತೆರಳುತ್ತಿದ್ದರು.

ಇದೇ ವೇಳೆ ನಿವೃತ್ತ ಸೇನಾಧಿಕಾರಿಯೊಬ್ಬರು ಆ ಮೈದಾನಕ್ಕೆ ಬರುತ್ತಿದ್ದರು. ಅವರು ಪ್ರತಿ ದಿನ ಮಕ್ಕಳ ಕ್ರಿಕೆಟ್ ವೀಕ್ಷಿಸುತ್ತಿದ್ದರು. ಹೀಗೆ ವೀಕ್ಷಿಸುತ್ತಿದ್ದಾಗ ಅವರ ಕಣ್ಣಿಗೆ ಎಂ. ಸುಂದರ್ ಬಿದ್ದರು.

ಅತ್ತ ಬಡಪಾಯಿ ಹುಡುಗನೊಬ್ಬ ಅತ್ಯುತ್ತಮವಾಗಿ ಆಡುತ್ತಿರುವುದನ್ನು ನೋಡಿ ನಿವೃತ್ತ ಸೇನಾ ಅಧಿಕಾರಿ ಪ್ರಭಾವಿತರಾದರು. ಅಲ್ಲದೆ ಎಂ ಸುಂದರ್ ಅವರನ್ನು ಕರೆದು, ನಾನು ನಿನಗೆ ಕ್ರಿಕೆಟ್ ಕಿಟ್ ಕೊಡುತ್ತೇನೆ. ಕ್ರಿಕೆಟ್ ಆಡಬೇಕಾದ ವ್ಯವಸ್ಥೆ ಮಾಡಿಕೊಡುವುದಾಗಿ ತಿಳಿಸಿದರು. ಅಲ್ಲಿಂದ ಎಂ ಸುಂದರ್ ಹಾಗೂ ನಿವೃತ್ತ ಸೇನಾಧಿಕಾರಿ ನಡುವೆ ಒಡನಾಟ ಶುರುವಾಯಿತು.

ಈ ಒಡನಾಟದಿಂದ ಎಂ ಸುಂದರ್ ಮತ್ತಷ್ಟು ಕ್ರಿಕೆಟ್ ಕಲಿಯಲು ಸಹಾಯವಾಯಿತು. ಅದರಲ್ಲೂ ಸುಂದರ್ ಅವರ ಶಿಕ್ಷಣ ಮತ್ತು ಕ್ರಿಕೆಟ್ ವೆಚ್ಚವನ್ನು ಸೇನಾಧಿಕಾರಿಯೇ ನೋಡಿಕೊಂಡರು.

ಶಿಕ್ಷಣದ ಜೊತೆ ಕ್ರಿಕೆಟ್ ಅನ್ನು ಉಸಿರಾಗಿಸಿಕೊಂಡ ಎಂ ಸುಂದರ್ ಯೌವ್ವನದಲ್ಲಿ ಉತ್ತಮ ಆಟಗಾರ ಎನಿಸಿಕೊಂಡರೂ ತಮಿಳುನಾಡು ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ಕಾಲ ಉರುಳಿತು. ಎಂ ಸುಂದರ್​ ಅವರಿಗೆ ಬಾಲ್ಯದಲ್ಲಿ ಬೆನ್ನೆಲುಬಾಗಿ ನಿಂತಿದ್ದ ನಿವೃತ್ತ ಸೇನಾಧಿಕಾರಿ 1999 ರಲ್ಲಿ ನಿಧನರಾದರು.

ಹೀಗೆ ಎಂ ಸುಂದರ್ ಅವರ ಜೀವನದ ಪ್ರತಿಯೊಂದು ಹಂತದಲ್ಲೂ ಜೊತೆಯಾಗಿ ನಿಂತಿದ್ದ ನಿವೃತ್ತ ಸೇನಾಧಿಕಾರಿಯ ಹೆಸರು ಪಿ.ಡಿ. ವಾಷಿಂಗ್ಟನ್. ಅವರು ನಿಧನರಾದ ಅದೇ ವರ್ಷ, ಅಂದರೆ 1999 ರಲ್ಲಿ ಎಂ. ಸುಂದರ್ ಅವರ ಪತ್ನಿ ಸುಂದರವಾದ ಗಂಡು ಮಗುವಿಗೆ ಜನ್ಮ ನೀಡಿದರು.

ಎಂ ಸುಂದರ್ ಗಂಡು ಮಗುವಿನ ಕಿವಿಯಲ್ಲಿ “ಶ್ರೀನಿವಾಸನ್”, “ಶ್ರೀನಿವಾಸನ್”, “ಶ್ರೀನಿವಾಸನ್” ಹೆಸರು ಪಿಸುಗುಟ್ಟಿದರು. ಆದರೆ ಅದಾದ ಬಳಿಕ ಅವರಿಗೆ ಪಿ.ಡಿ ವಾಷಿಂಗ್ಟನ್ ಅವರು ನೆನಪಾಗಿದ್ದಾರೆ. ತನ್ನ ಜೀವನದ ಒಂದು ಪ್ರಮುಖ ಹಂತದಲ್ಲಿ ಸಹಾಯ ಮಾಡಿದ ವ್ಯಕ್ತಿಯನ್ನು ಸದಾ ನೆನಪಿಟ್ಟುಕೊಳ್ಳಬೇಕು ಎಂದು ಎಂ ಸುಂದರ್ ನಿರ್ಧರಿಸಿದರು.

ಇದನ್ನೂ ಓದಿ: ಮಾಜಿ ಆಟಗಾರನಿಗೆ ವಿಶೇಷ ಗೌರವ… ಹೆಡ್​ಬ್ಯಾಂಡ್ ಧರಿಸಿ ಕಣಕ್ಕಿಳಿದ ಸಿರಾಜ್

ತಕ್ಷಣವೇ ಶ್ರೀನಿವಾಸನ್ ಸುಂದರ್ ಆಗಿದ್ದ ಮಗುವಿಗೆ ವಾಷಿಂಗ್ಟನ್ ಸುಂದರ್ ಎಂದು ಮರುನಾಮಕರಣ ಮಾಡಿದರು. ಇದೀಗ ಸುಂದರ್ ಕ್ರಿಕೆಟ್​ ಅಂಗಳದಲ್ಲಿ ಮಿಂಚುತ್ತಿದ್ದಾರೆ. ಪ್ರತಿ ಬಾರಿಯೂ ಸುಂದರ್​ ಮಿಂಚಿದಾಗಲೂ ಅವರೊಂದಿಗೆ ‘ವಾಷಿಂಗ್ಟನ್’ ಹೆಸರು ಸಹ ರಾರಾಜಿಸುತ್ತಿದೆ. ಈ ಮೂಲಕ ಎಂ ಸುಂದರ್​ ತನಗೆ ಸಹಾಯ ಮಾಡಿದ ವ್ಯಕ್ತಿಯನ್ನು ಕ್ರಿಕೆಟ್​ ಪುಟಗಳಲ್ಲಿ ಸದಾ ಕಾಲ ಉಳಿಯುವಂತೆ ಮಾಡಿದ್ದಾರೆ.

Published On - 12:55 pm, Sat, 2 August 25