ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ಮೂರನೇ ಟೆಸ್ಟ್ ಪಂದ್ಯ ನಾಳೆ ಆಗಸ್ಟ್ 25 ರಿಂದ ಲೀಡ್ಸ್ನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಮೊದಲ ಟೆಸ್ಟ್ ಡ್ರಾನಲ್ಲಿ ಅಂತ್ಯಕಂಡಿದ್ದರೆ, ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ 151 ರನ್ಗಳ ಭರ್ಜರಿ ಜಯ ಸಾಧಿಸಿ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಸದ್ಯ ಮೂರನೇ ಟೆಸ್ಟ್ ಉಭಯ ತಂಡಗಳಿಗೆ ಮುಖ್ಯವಾಗಿದೆ. ಇದರ ನಡುವೆ ನಾಯಕ ವಿರಾಟ್ ಕೊಹ್ಲಿ (Virat kohli) ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ (Rishabh Pant) ನೂತನ ದಾಖಲೆಯ ಹೊಸ್ತಿಲಲ್ಲಿದ್ದಾರೆ.
ವಿರಾಟ್ ಕೊಹ್ಲಿ ಮೂರನೇ ಟೆಸ್ಟ್ನಲ್ಲಿ 63 ರನ್ ಗಳಿಸಿದರೆ 23,000 ಅಂತರರಾಷ್ಟ್ರೀಯ ರನ್‌ಗಳನ್ನು ಪೂರೈಸಿದ ಸಾಧನೆ ಮಾಡಲಿದ್ದಾರೆ. ಒಟ್ಟು 437 ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿರುವ ಕಿಂಗ್ ಕೊಹ್ಲಿ ಈವರೆಗೆ 22,937 ಅಂತರರಾಷ್ಟ್ರೀಯ ರನ್ ಬಾರಿಸಿದ್ದಾರೆ. ಈ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತ ಪರ ಅತಿ ಹೆಚ್ಚು ರನ್ ಕಲೆಹಾಕಿದ ಮೂರನೇ ಬ್ಯಾಟ್ಸ್ಮನ್ ಕೊಹ್ಲಿ ಆಗಲಿದ್ದಾರೆ. ಸದ್ಯ ಈ ಸಾಲಿನಲ್ಲಿ ಮೊದಲನೆಯವರಾಗಿ ಸಚಿನ್ ತೆಂಡೂಲ್ಕರ್ (34,357) ಮತ್ತು ಎರಡನೇ ಸ್ಥಾನದಲ್ಲಿ ರಾಹುಲ್ ದ್ರಾವಿಡ್ (24,208) ಇದ್ದಾರೆ.
ಇನ್ನೂ ಸ್ಫೋಟಕ ಬ್ಯಾಟ್ಸ್ಮನ್ ರಿಷಭ್ ಪಂತ್ 2018ರಲ್ಲಿ 16 ಟೆಸ್ಟ್ ಸಿಕ್ಸರ್ ಬಾರಿಸುವ ಮೂಲಕ ನೂತನ ದಾಖಲೆಯನ್ನು ನಿರ್ಮಿಸಿದ್ದರು. ವರ್ಷವೊಂದರಲ್ಲಿ ಅತಿ ಹೆಚ್ಚು ಟೆಸ್ಟ್ ಸಿಕ್ಸರ್ ಬಾರಿಸಿದ ಭಾರತದ ವಿಕೆಟ್ ಕೀಪರ್ ಎಂಬ ಹೊಸ ಮೈಲಿಗಲ್ಲನ್ನು ರಿಷಭ್ ಪಂತ್ ನಿರ್ಮಿಸಿದ್ದರು. ಸದ್ಯ ಈ ವರ್ಷ 15 ಸಿಕ್ಸರ್ ಬಾರಿಸಿರುವ ಪಂತ್ ಇನ್ನೆರಡು ಸಿಕ್ಸರ್ ಬಾರಿಸಿದರೆ 2018ರಲ್ಲಿ ತಾನು ನಿರ್ಮಿಸಿದ ತನ್ನದೇ ದಾಖಲೆಯನ್ನು ಮುರಿದು ಹಾಕಲಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲೂ ಕೊಹ್ಲಿ ಹಾಗೂ ಪಂತ್ ಹೇಳಿಕೊಳ್ಳುವಂತಹ ಆಟ ಪ್ರದರ್ಶಿಸಿಲ್ಲ. ಇಬ್ಬರೂ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದಾರೆ.
ನಾಳೆಯಿಂದ ಆರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯ ಲೀಡ್ಸ್ನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತದ ಕಾಲಮಾನದ ಪ್ರಕಾರ ಪಂದ್ಯ ಮಧ್ಯಾಹ್ನ 3:30ಕ್ಕೆ ಆರಂಭವಾಗಲಿದೆ. ಹೆಡಿಂಗ್ಲೆ ಪಿಚ್ ಪಂದ್ಯದುದ್ದಕ್ಕೂ ವೇಗದ ಬೌಲರ್‌ಗಳಿಗೆ ಹೆಚ್ಚಿನ ಸಹಕಾರಿಯಾಗುವ ಸಾಧ್ಯತೆಯಿದೆ. ಇದರ ಜೊತೆಗೆ ಬ್ಯಾಟ್ಸ್‌ಮನ್‌ಗಳಿಗೂ ಪೂರಕವಾಗಿ ವರ್ತಿಸಲಿದೆ. ನಾಲ್ಕು ಮತ್ತು ಐದನೇ ದಿನದಲ್ಲಿ ಸ್ಪಿನ್ನರ್‌ಗಳು ಕೂಡ ಪಿಚ್‌ನ ಲಾಭವನ್ನು ಪಡೆಯುವ ಅವಕಾಶಗಳಿದೆ.
ಇನ್ನೂ ಈ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ತುಂಬಾ ಕಡಿಮೆಯಿದೆ. ಐದು ದಿನಗಳ ಕಾಲವೂ ಪಂದ್ಯ ನಡೆಯಲು ಪೂರಕವಾದ ವಾತಾವರಣವಿರುವುದು ಕ್ರಿಕೆಟ್ ಪ್ರೇಮಿಗಳಿಗೆ ಸಂತಸದ ಸುದ್ದಿ. ಸರಾಸರಿ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ವರದಿಗಳು ಹೇಳುತ್ತಿದೆ. ಪಂದ್ಯ ನಡೆಯುವ ಐದು ದಿನಗಳಲ್ಲಿಯೂ ಮಳೆಯಾಗುವ ಸಾಧ್ಯತೆ ತುಂಬಾ ವಿರಳವಾಗಿದೆ.
ವಿನೇಶ್ ಫೋಗಟ್ ಬಳಿಕ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಿಂದ ಹಿಂದೆ ಸರಿದ ಭಜರಂಗ್ ಪುನಿಯಾ! ಕಾರಣವೇನು ಗೊತ್ತಾ?
(India vs England Virat Kohli and Rishabh Pant on verge of achieving new record in ind vs eng 3rd test)
Published On - 8:26 am, Tue, 24 August 21