IND vs ENG: ಟಾಸ್ ಗೆದ್ದ ಇಂಗ್ಲೆಂಡ್‌ ಬೌಲಿಂಗ್ ಆಯ್ಕೆ; ಮೊದಲ ಪಂದ್ಯದಿಂದ ಹರ್ಮನ್​ಪ್ರೀತ್ ಔಟ್

India vs England Women's T20 Series: ಭಾರತ ಮತ್ತು ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡಗಳ ನಡುವಿನ ಐದು ಪಂದ್ಯಗಳ ಟಿ20 ಸರಣಿ ಜೂನ್ 28 ರಿಂದ ಆರಂಭವಾಗಿದೆ. ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ, ಹರ್ಮನ್‌ಪ್ರೀತ್ ಕೌರ್ ಗಾಯದಿಂದ ಹೊರಗುಳಿದಿದ್ದಾರೆ, ಆದ್ದರಿಂದ ಸ್ಮೃತಿ ಮಂಧಾನ ನಾಯಕತ್ವ ವಹಿಸಿದ್ದಾರೆ. ಇಂಗ್ಲೆಂಡ್ ತಂಡವು ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಈ ಸರಣಿಯು 2026ರ ಮಹಿಳಾ ವಿಶ್ವಕಪ್‌ಗೂ ಮುನ್ನ ಇಂಗ್ಲೆಂಡ್ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಭಾರತಕ್ಕೆ ಅವಕಾಶ ನೀಡುತ್ತದೆ.

IND vs ENG: ಟಾಸ್ ಗೆದ್ದ ಇಂಗ್ಲೆಂಡ್‌ ಬೌಲಿಂಗ್ ಆಯ್ಕೆ; ಮೊದಲ ಪಂದ್ಯದಿಂದ ಹರ್ಮನ್​ಪ್ರೀತ್ ಔಟ್
Ind Vs Eng

Updated on: Jun 28, 2025 | 7:22 PM

ಭಾರತ ಮಹಿಳಾ ತಂಡ ಮತ್ತು ಇಂಗ್ಲೆಂಡ್ ಮಹಿಳಾ ತಂಡಗಳ (India Women Vs England Women) ನಡುವಿನ ಐದು ಪಂದ್ಯಗಳ ಟಿ20 ಸರಣಿ ಜೂನ್ 28 ರಿಂದ ಪ್ರಾರಂಭವಾಗಿದೆ. ಉಭಯ ತಂಡಗಳ ನಡುವಿನ ಮೊದಲ ಪಂದ್ಯ ನಾಟಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿದೆ. ವಾಸ್ತವವಾಗಿ ಮೊದಲ ಬಾರಿಗೆ, ಮಹಿಳಾ ಟಿ20 ಪಂದ್ಯವನ್ನು ನಾಟಿಂಗ್‌ಹ್ಯಾಮ್‌ನಲ್ಲಿ ಆಯೋಜಿಸಲಾಗುತ್ತಿದೆ. ಈ ಟಿ20 ಸರಣಿಯು ಎರಡೂ ತಂಡಗಳಿಗೆ ಬಹಳ ಮುಖ್ಯವಾಗಿದೆ. ಏಕೆಂದರೆ 2026 ರ ಮಹಿಳಾ ವಿಶ್ವಕಪ್ ಜೂನ್ 12 ರಿಂದ ಲಂಡನ್‌ನಲ್ಲಿ ಪ್ರಾರಂಭವಾಗುತ್ತಿದೆ. ಅದಕ್ಕೂ ಮೊದಲು ಭಾರತೀಯ ಮಹಿಳಾ ತಂಡವು ಇಂಗ್ಲೆಂಡ್‌ನ ಪರಿಸ್ಥಿತಿಯ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಲು ಇದು ಉತ್ತಮ ಅವಕಾಶವಾಗಿದೆ.

ಹರ್ಮನ್​ಪ್ರೀತ್ ಕೌರ್ ಅಲಭ್ಯ

ಇನ್ನು ಈ ಪಂದ್ಯದಲ್ಲಿ ಟಾಸ್ ಕೂಡ ನಡೆದಿದ್ದು ಟಾಸ್ ಗೆದ್ದ ಇಂಗ್ಲೆಂಡ್‌ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್‌ ಮಾಡಿದೆ. ಆದರೆ ಭಾರತ ತಂಡಕ್ಕೆ ಆಘಾತಕ್ಕಾರಿ ಸುದ್ದಿಯೆಂದರೆ ತಂಡದ ನಿಯಮಿತ ನಾಯಕಿ ಹರ್ಮನ್​ಪ್ರೀತ್ ಕೌರ್ ಇಂಜುರಿಯಿಂದಾಗಿ ಈ ಪಂದ್ಯದಿಂದ ಹೊರಗುಳಿದಿದ್ದಾರೆ. ವಾಸ್ತವವಾಗಿ ಟಿ20 ಅಭ್ಯಾಸ ಪಂದ್ಯದ ವೇಳೆ ಹರ್ಮನ್‌ಪ್ರೀತ್ ಕೌರ್ ತಲೆಗೆ ಗಾಯ ಮಾಡಿಕೊಂಡಿದ್ದರು. ಹೀಗಾಗಿ ಅವರಿಗೆ ಮೊದಲ ಪಂದ್ಯಕ್ಕೆ ವಿಶ್ರಾಂತಿ ನೀಡಲಾಗಿದೆ. ಅವರ ಅನುಪಸ್ಥಿತಿಯಲ್ಲಿ ಉಪನಾಯಕಿ ಸ್ಮೃತಿ ಮಂಧಾನ ಅವರು ನಾಯಕಿಯಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಉಭಯ ತಂಡಗಳು

ಇಂಗ್ಲೆಂಡ್ ತಂಡ: ಸೋಫಿಯಾ ಡಂಕ್ಲಿ, ಡ್ಯಾನಿ ವ್ಯಾಟ್-ಹಾಡ್ಜ್, ನ್ಯಾಟ್ ಸಿವರ್-ಬ್ರಂಟ್ (ನಾಯಕಿ), ಟ್ಯಾಮಿ ಬ್ಯೂಮಾಂಟ್, ಆಮಿ ಜೋನ್ಸ್ (ವಿಕೆಟ್ ಕೀಪರ್), ಆಲಿಸ್ ಕ್ಯಾಪ್ಸೆ, ಎಮ್ ಆರ್ಲಾಟ್, ಸೋಫಿ ಎಕ್ಲೆಸ್ಟೋನ್, ಲಾರೆನ್ ಫೈಲರ್, ಲಿನ್ಸೆ ಸ್ಮಿತ್, ಲಾರೆನ್ ಬೆಲ್.

ಭಾರತ ತಂಡ: ಶಫಾಲಿ ವರ್ಮಾ, ಸ್ಮೃತಿ ಮಂಧಾನ (ನಾಯಕಿ), ಹರ್ಲೀನ್ ಡಿಯೋಲ್, ಜೆಮಿಮಾ ರೋಡ್ರಿಗಸ್, ಅಮನ್ಜೋತ್ ಕೌರ್, ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ರಾಧಾ ಯಾದವ್, ಅರುಂಧತಿ ರೆಡ್ಡಿ, ಸ್ನೇಹ ರಾಣಾ, ಎನ್ ಶ್ರೀ ಚರಣಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:17 pm, Sat, 28 June 25