MLC 2025: ಸತತ ಸೋಲು, ನಾಯಕತ್ವದಿಂದ ಕೆಳಗಿಳಿದ ಹೆನ್ರಿಕ್ ಕ್ಲಾಸೆನ್; ಕೋಚ್ಗೂ ಗೇಟ್ಪಾಸ್
Major League Cricket 2025: ಅಮೆರಿಕಾದ ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಸಿಯಾಟಲ್ ಓರ್ಕಾಸ್ ತಂಡ ಸತತ ಸೋಲುಗಳನ್ನು ಅನುಭವಿಸುತ್ತಿತ್ತು. ಇದರಿಂದಾಗಿ ಮುಖ್ಯ ಕೋಚ್ ಮ್ಯಾಥ್ಯೂ ಮೋಟ್ ಅವರನ್ನು ವಜಾಗೊಳಿಸಲಾಯಿತು ಮತ್ತು ನಾಯಕ ಹೆನ್ರಿಕ್ ಕ್ಲಾಸೆನ್ ಕೂಡ ರಾಜೀನಾಮೆ ನೀಡಿದರು. ಆದರೆ ಹೊಸ ನಾಯಕ ಸಿಕಂದರ್ ರಾಝಾ ಅವರ ನೇತೃತ್ವದಲ್ಲಿ ತಂಡವು ಮೊದಲ ಗೆಲುವನ್ನು ಸಾಧಿಸಿದೆ.

ಅಮೆರಿಕಾದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ 2025 (MLC 2025) ಅರ್ಧ ಪ್ರಯಾಣ ಮುಗಿದಿದ್ದು, ಪಂದ್ಯಾವಳಿ ರೋಚಕ ಘಟ್ಟ ತಲುಪಿದೆ. ಈ ನಡುವೆ ಸತತ ಸೋಲುಗಳಿಗೆ ಕೊರಳೊಡ್ಡಿ ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಸಿಯಾಟಲ್ ಓರ್ಕಾಸ್ (Seattle Orcas) ತಂಡದಲ್ಲಿ ಬದಲಾವಣೆಯ ಬಿರುಗಾಳಿ ಎದ್ದಿದೆ. ಇತ್ತೀಚೆಗೆ, ಫ್ರಾಂಚೈಸಿ ಮುಖ್ಯ ಕೋಚ್ ಮ್ಯಾಥ್ಯೂ ಮೋಟ್ ಅವರನ್ನು ಅವರ ಹುದ್ದೆಯಿಂದ ತೆಗೆದುಹಾಕಿತ್ತು. ಇದೀಗ ತಂಡದ ನಾಯಕತ್ವ ವಹಿಸಿರುವ ಹೆನ್ರಿಕ್ ಕ್ಲಾಸೆನ್ (Heinrich Klaasen) ಕೂಡ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ವಾಸ್ತವವಾಗಿ ಹೆನ್ರಿಕ್ ಕ್ಲಾಸೆನ್ ನಾಯಕತ್ವದಲ್ಲಿ ಸಿಯಾಟಲ್ ಓರ್ಕಾಸ್ ತಂಡದ ಪ್ರದರ್ಶನವು ತುಂಬಾ ಕಳಪೆಯಾಗಿತ್ತು. ಕ್ಲಾಸೆನ್ ನಾಯಕತ್ವದಲ್ಲಿ ಆಡಿದ ಎಲ್ಲಾ ಐದು ಪಂದ್ಯಗಳಲ್ಲಿ ತಂಡ ಸೋಲನುಭವಿಸಿತ್ತು.
ನಾಯಕತ್ವ ತೊರೆದ ಹೆನ್ರಿಕ್ ಕ್ಲಾಸೆನ್
ಹೆನ್ರಿಕ್ ಕ್ಲಾಸೆನ್ ನಾಯಕತ್ವದಿಂದ ಕೆಳಗಿಳಿದ ನಂತರ, ಜಿಂಬಾಬ್ವೆಯ ಅನುಭವಿ ಆಲ್‌ರೌಂಡರ್ ಸಿಕಂದರ್ ರಾಝಾ ಅವರಿಗೆ ತಂಡದ ನಾಯಕತ್ವ ವಹಿಸಲಾಗಿದೆ. ಅಚ್ಚರಿಯ ಸಂಗತಿಯೆಂದರೆ ಸಿಕಂದರ್ ರಾಝಾ ನಾಯಕತ್ವವಹಿಸಿಕೊಂಡ ಕೂಡಲೇ ತಂಡ ಗೆಲುವಿನ ಲಯಕ್ಕೆ ಮರಳಿದೆ. ಎಂಐ ನ್ಯೂಯಾರ್ಕ್ ವಿರುದ್ಧದ ಪಂದ್ಯದಲ್ಲಿ ಸಿಯಾಟಲ್ ಓರ್ಕಾಸ್ ತಂಡ ಕೊನೆಯ ಎಸೆತದಲ್ಲಿ ರೋಚಕ ಜಯ ಸಾಧಿಸಿದೆ. ಕ್ಲಾಸೆನ್ ನಾಯಕತ್ವದಿಂದ ಕೆಳಗಿಳಿಯುವುದಕ್ಕೂ ಮೊದಲು, ಫ್ರಾಂಚೈಸಿ ಮ್ಯಾಥ್ಯೂ ಮೋಟ್ ಅವರನ್ನು ಮುಖ್ಯ ಕೋಚ್ ಹುದ್ದೆಯಿಂದ ತೆಗೆದುಹಾಕಿತ್ತು. ತರಬೇತಿ ಮತ್ತು ನಿರ್ವಹಣಾ ತಂತ್ರಗಳಲ್ಲಿನ ವ್ಯತ್ಯಾಸಗಳಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಫ್ರಾಂಚೈಸಿ ಹೇಳಿತ್ತು.
ಮೊದಲ ಗೆಲುವು ಸಾಧಿಸಿದ ಸಿಯಾಟಲ್ ಓರ್ಕಾಸ್
ಇಂದು ನಡೆದ ಪಂದ್ಯದಲ್ಲಿ, ಮೊದಲು ಬ್ಯಾಟಿಂಗ್ ಮಾಡಿದ MI ನ್ಯೂಯಾರ್ಕ್ ತಂಡವು 20 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳ ನಷ್ಟಕ್ಕೆ 237 ರನ್ ಗಳಿಸಿತು. ತಂಡದ ಪರವಾಗಿ ನಾಯಕ ನಿಕೋಲಸ್ ಪೂರನ್ 108* ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರೆ, ತಜಿಂದರ್ ಧಿಲ್ಲೋನ್ 95* ರನ್‌ಗಳ ಕೊಡುಗೆ ನೀಡಿದರು. ಸಿಯಾಟಲ್ ಓರ್ಕಾಸ್ ಪರ ಜೆರಾಲ್ಡ್ ಕೋಟ್ಜೀ ಮತ್ತು ಕೈಲ್ ಮೇಯರ್ಸ್ ತಲಾ ಎರಡು ವಿಕೆಟ್ ಪಡೆದರು.
IPL 2025: ವಿಕೆಟ್ ಮುಂದೆ ಕೈಚಾಚಿದ ಕ್ಲಾಸೆನ್; ಕ್ಯಾಚ್ ಹಿಡಿದರೂ ನಾಟೌಟ್ ನೀಡಿದ ಅಂಪೈರ್
ಕೊನೆಯ ಎಸೆತದಲ್ಲಿ ಗೆಲುವಿನ ಸಿಕ್ಸರ್
ಗುರಿಯನ್ನು ಬೆನ್ನಟ್ಟಿದ ಓರ್ಕಾಸ್ ತಂಡವು ಕೊನೆಯ ಎಸೆತದಲ್ಲಿ ಈ ಪಂದ್ಯವನ್ನು ಗೆದ್ದುಕೊಂಡಿತು. ತಂಡದ ಪರ ಏಕಾಂಗಿ ಹೋರಾಟ ನೀಡಿದ ಶಿಮ್ರಾನ್ ಹೆಟ್ಮೆಯರ್ ಕೇವಲ 40 ಎಸೆತಗಳಲ್ಲಿ 5 ಬೌಂಡರಿ ಮತ್ತು 9 ಸಿಕ್ಸರ್‌ಗಳ ಸಹಾಯದಿಂದ 97* ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಅದರಲ್ಲೂ ಕೊನೆಯ ಎಸೆತದಲ್ಲಿ ತಂಡದ ಗೆಲುವಿಗೆ 6 ರನ್ ಬೇಕಿದ್ದಾಗ ಸಿಕ್ಸರ್ ಸಿಡಿಸುವ ಮೂಲಕ ಹೆಟ್ಮೆಯರ್ ತಂಡಕ್ಕೆ ಗೆಲುವು ತಂದುಕೊಟ್ಟರು. ಹೆಟ್ಮೆಯರ್ ಹೊರತುಪಡಿಸಿ, ನಾಯಕ ಸಿಕಂದರ್ ರಾಝಾ 30 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರೆ, ಕ್ಲಾಸೆನ್ 26 ರನ್‌ಗಳ ಕೊಡುಗೆ ನೀಡಿದರು. ಈ ಗೆಲುವಿನೊಂದಿಗೆ 2 ಅಂಕ ಪಡೆದಿರುವ ಸಿಯಾಟಲ್ ಓರ್ಕಾಸ್ ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಸಿಕಂದರ್ ರಾಝಾ ನಾಯಕತ್ವದ ತಂಡವು ಉಳಿದ ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ಲೇಆಫ್‌ಗೆ ತಲುಪಲು ಸಾಧ್ಯವಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
