ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಆರಂಭವಾಗಿರುವ ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಣ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ (Team India) ನಾಯಕ ಅಜಿಂಕ್ಯಾ ರಹಾನೆ (Ajinkya Rahane) ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಅಂದುಕೊಂಡಂತೆ ಭಾರತದಲ್ಲಿ ಮೂವರು ಸ್ಪಿನ್ನರ್ಗಳನ್ನು ಕಣಕ್ಕಿಳಿಸಲಾಗಿದೆ. ಜೊತೆಗೆ ಶ್ರೇಯಸ್ ಅಯ್ಯರ್ (Shreyas Iyer) ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದು, ಕ್ರಿಕೆಟ್ ದಿಗ್ಗಜ ಸುನೀಲ್ ಗವಾಸ್ಕರ್ ಕ್ಯಾಪ್ ಕೊಟ್ಟು ಆಹ್ವಾನಿಸಿದರು. ಕಾನ್ಪುರದ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡಲಿದೆ. ಮೊದಲ ಎರಡು ದಿನ ಬ್ಯಾಟ್ಸ್‌ಮನ್‌ಗಳ ಪರವಾಗಿ ವರ್ತಿಸುವ ಸಾಧ್ಯತೆ ದಟ್ಟವಾಗಿದ್ದು, ಚಳಿಗಾಲವಾದ ಕಾರಣ ಆರಂಭಿಕ ಅವಧಿಯಲ್ಲಿ ವೇಗದ ಬೌಲರ್‌ಗಳಿಗೆ ನೆರವಾಗಬಹುದು. ಮೊದಲು ಬ್ಯಾಟ್ ಮಾಡಿರುವ ತಂಡಗಳೇ ಇಲ್ಲಿ ಹೆಚ್ಚಿನ ಗೆಲುವ ಸಾಧಿಸಿರುವ ಕಾರಣ ಟೀಮ್ ಇಂಡಿಯ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಭಾರತದ ಪ್ಲೇಯಿಂಗ್ XI:
ಶುಭ್ಮನ್ ಗಿಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಶ್ರೇಯಸ್ ಅಯ್ಯರ್, ಅಜಿಂಕ್ಯಾ ರಹಾನೆ (ನಾಯಕ), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಇಶಾಂತ್ ಶರ್ಮಾ, ಉಮೇಶ್ ಯಾದವ್.
ನ್ಯೂಜಿಲೆಂಡ್ ಪ್ಲೇಯಿಂಗ್ XI:
ಟಾಮ್ ಲ್ಯಾಥಮ್, ವಿಲ್ ಯಂಗ್, ಕೇನ್ ವಿಲಿಯಮ್ಸನ್ (ನಾಯಕ), ರಾಸ್ ಟೇಲರ್, ಹೆನ್ರಿ ನಿಕೋಲಸ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ರಚಿನ್ ರವೀಂದ್ರ, ಅಜಾಜ್ ಪಟೇಲ್, ಟಿಮ್ ಸೌಥಿ, ಕೈಲ್ ಜೇಮಿಸನ್, ವಿಲಿಯಮ್ ಸೋಮರ್ವಿಲ್ಲೆ.
ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯ ಸ್ಟಾರ್ ಸ್ಫೋರ್ಟ್ಸ್ ನೆಟ್ವರ್ಕ್ನಲ್ಲಿ ಲೈವ್ ವೀಕ್ಷಿಸಬಹುದು. ಡಿಸ್ನಿ+ ಹಾಟ್ಸ್ಟಾರ್ನಲ್ಲೂ ನೇರಪ್ರಸಾರ ಕಾಣಲಿದೆ.
ಟಿವಿ9 ಕನ್ನಡ ವೆಬ್ಸೈಟ್ನಲ್ಲೂ ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯದ ಲೈವ್ ಅಪ್ಡೇಟ್ ಅನ್ನು ನೋಡಬಹುದು.
ಭಾರತ ತಂಡ ಕೊನೇ ಬಾರಿ 2016ರಲ್ಲಿ ಕಾನ್ಪುರದಲ್ಲಿ ಕಿವೀಸ್ ವಿರುದ್ಧ ಆಡಿದಾಗ ಅಶ್ವಿನ್-ಜಡೇಜಾ ಜೋಡಿ 16 ವಿಕೆಟ್ ಹಂಚಿಕೊಂಡಿತ್ತು. ಗ್ರೀನ್ ಪಾರ್ಕ್ ಪಿಚ್ ಎಷ್ಟರ ಮಟ್ಟಿಗೆ ಸ್ಪಿನ್ ಸ್ನೇಹಿ ಎಂಬುದನ್ನು ಈ ಅಂಕಿ-ಅಂಶವೇ ಸಾರುತ್ತಿದೆ. ಅಲ್ಲದೆ ಕಾನ್ಪುರದಲ್ಲಿ ಭಾರತ ಇದುವರೆಗೆ 22 ಟೆಸ್ಟ್ ಆಡಿದ್ದು, 7ರಲ್ಲಿ ಗೆದ್ದು, 3ರಲ್ಲಿ ಸೋತಿದೆ. 12 ಟೆಸ್ಟ್ ಡ್ರಾಗೊಂಡಿದೆ. ನ್ಯೂಜಿಲೆಂಡ್ ತಂಡ ಕಾನ್ಪುರದಲ್ಲಿ ಇದುವರೆಗೆ 3 ಟೆಸ್ಟ್ ಆಡಿದ್ದು, 2ರಲ್ಲಿ ಸೋತು, 1ರಲ್ಲಿ ಡ್ರಾ ಸಾಧಿಸಿದೆ.
ಒಟ್ಟಾರೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳುವ ಮಹತ್ವಾಕಾಂಕ್ಷೆಯೊಂದಿಗೆ ಭಾರತ ತಂಡ 2 ಪಂದ್ಯಗಳ ಟೆಸ್ಟ್ ಸರಣಿ ಪೈಕಿ ಮೊದಲ ಪಂದ್ಯಕ್ಕೆ ಸಜ್ಜಾಗಿದೆ. ನಾಯಕ ವಿರಾಟ್ ಕೊಹ್ಲಿ ಸಹಿತ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿರುವ ನಡುವೆಯೂ ಭಾರತ ತಂಡ ತವರಿನ ಲಾಭವನ್ನು ಹೊಂದಿದ್ದು, ಗ್ರೀನ್ ಪಾರ್ಕ್‌ನಲ್ಲಿ ನಡೆಯಲಿರುವ ಈ ಟೆಸ್ಟ್ ಸಾಕಷ್ಟು ಕುತೂಹಲ ಕೆರಳಿಸಿದೆ.
(India vs New Zealand 1st Test India have won the toss and have opted to bat)
Published On - 9:16 am, Thu, 25 November 21