IND vs NZ: ಭಾರತಕ್ಕೆ ಆರಂಭಿಕ ಆಘಾತ; ಮತ್ತೊಮ್ಮೆ ಸೊನ್ನೆಗೆ ಬಲಿಯಾದ ರೋಹಿತ್ ಶರ್ಮಾ
IND vs NZ: ಪುಣೆಯಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದ ಆಟದಲ್ಲಿ, ನ್ಯೂಜಿಲೆಂಡ್ ತಂಡ 259 ರನ್‌ಗಳಿಗೆ ಆಲೌಟ್ ಆಯಿತು. ಅಶ್ವಿನ್ ಮತ್ತು ವಾಷಿಂಗ್ಟನ್ ಸುಂದರ್ ಜೊತೆಗೂಡಿ ಕಿವೀಸ್ ಪಡೆಯ ಎಲ್ಲಾ 10 ವಿಕೆಟ್ ಪಡೆದರು. ಇತ್ತ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಭಾರತ ತಂಡ ಮೊದಲ ದಿನದಾಟದಂತ್ಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 16 ರನ್ ಗಳಿಸಿದೆ. ರೋಹಿತ್ ಶರ್ಮಾ ಮತ್ತೊಮ್ಮೆ ಶೂನ್ಯಕ್ಕೆ ಔಟ್ ಆದರೆ, ಗಿಲ್ ಮತ್ತು ಜೈಸ್ವಾಲ್ ಎರಡನೇ ದಿನದ ಆಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯವು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರದಿಂದ ಆರಂಭವಾಗಿದೆ. ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ 259 ರನ್‌ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದೆ. ಮೊದಲ ದಿನದಾಟದ ಮೂರನೇ ಸೆಷನ್ನಲ್ಲಿ ಕಿವೀಸ್ ಪಡೆಯನ್ನು ಆಲೌಟ್ ಮಾಡಿದ ಟೀಂ ಇಂಡಿಯಾ ಕೂಡ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದೆ. ಆದರೆ ತಂಡಕ್ಕೆ ಮತ್ತೊಮ್ಮೆ ಆರಂಭಿಕ ಆಘಾತ ಎದುರಾಗಿದೆ. ನಾಯಕ ರೋಹಿತ್ ಶರ್ಮಾ ಮತ್ತೊಮ್ಮೆ ನಿರಾಸೆ ಮೂಡಿಸಿದ್ದು, ಬೆಂಗಳೂರು ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 2 ರನ್‌ಗಳಿಗೆ ಇನ್ನಿಂಗ್ಸ್ ಮುಗಿಸಿದ್ದ ರೋಹಿತ್, ಈ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಖಾತೆ ತೆರೆಯದೆ ಔಟಾಗಿದ್ದಾರೆ. ಉಳಿದಂತೆ ತಂಡದ ಪರ ಅಜೇಯರಾಗಿ ಉಳಿದಿರುವ ಶುಭ್ಮನ್ ಗಿಲ್ ಹಾಗೂ ಯಶಸ್ವಿ ಜೈಸ್ವಾಲ್ ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದು, ದಿನದಾಟದಂತ್ಯಕ್ಕೆ ಟೀಂ ಇಂಡಿಯಾ 1 ವಿಕೆಟ್ ಕಳೆದುಕೊಂಡು 16 ರನ್ ಕಲೆಹಾಕಿದೆ.
ತಂಡದಲ್ಲಿ 3 ಬದಲಾವಣೆ
ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಕಿವೀಸ್ ತಂಡದಲ್ಲಿ ಮ್ಯಾಟ್ ಹೆನ್ರಿ ರೂಪದಲ್ಲಿ ಒಂದು ಬದಲಾವಣೆ ಮಾಡಿದ್ದರೆ, ಭಾರತ ತಂಡದಲ್ಲಿ 3 ಬದಲಾವಣೆ ಮಾಡಲಾಗಿತ್ತು. ಅದರಂತೆ ಕೆಎಲ್ ರಾಹುಲ್, ಮೊಹಮ್ಮದ್ ಸಿರಾಜ್ ಮತ್ತು ಕುಲ್ದೀಪ್ ಯಾದವ್ರನ್ನು ತಂಡದಿಂದ ಕೈಬಿಟ್ಟಿದ್ದರೆ, ಅವರ ಬದಲಿಗೆ ವಾಷಿಂಗ್ಟನ್ ಸುಂದರ್, ಶುಭ್ಮನ್ ಗಿಲ್ ಮತ್ತು ಆಕಾಶ್ ದೀಪ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು.
Southee bowls Rohit! The skipper falls early in the Indian innings. IND 1/1 (3) Follow play LIVE in NZ on @skysportnz 📺 or @SENZ_Radio 📻 LIVE scoring https://t.co/VJzmDakk7y 📲 #INDvNZ #CricketNation pic.twitter.com/XycvneNune
— BLACKCAPS (@BLACKCAPS) October 24, 2024
10 ವಿಕೆಟ್ ಉರುಳಿಸಿದ ಇಬ್ಬರು
ಇನ್ನು ಮೊದಲ ಇನ್ನಿಂಗ್ಸ್ ಆರಂಭಿಸಿದ ಕಿವೀಸ್ ಪಡೆಗೆ ಆರಂಭಿಕ ಆಘಾತ ನೀಡುವಲ್ಲಿ ಅಶ್ವಿನ್ ಯಶಸ್ವಿಯಾದರು. ಅಶ್ವಿನ್, ನ್ಯೂಜಿಲೆಂಡ್ ತಂಡದ ಮೊದಲ ಮೂರು ವಿಕೆಟ್ಗಳನ್ನು ಉರುಳಿಸಿದರೆ, ಇದಾದ ನಂತರ ವಾಷಿಂಗ್ಟನ್ ಸುಂದರ್ ಜವಾಬ್ದಾರಿ ವಹಿಸಿಕೊಂಡು ಕಿವೀಸ್ ಬ್ಯಾಟ್ಸ್‌ಮನ್‌ಗಳಿಗೆ ಪೆವಿಲಿಯನ್ ಹಾದಿ ತೋರಿಸಿದರು. ಆದಾಗ್ಯೂ ಅಶ್ವಿನ್ ಮತ್ತು ಸುಂದರ್ ಅವರ ಬಿರುಗಾಳಿಯ ನಡುವೆಯೂ ಕಿವೀಸ್ ಪರ ಡೆವೊನ್ ಕಾನ್ವೆ ಅತ್ಯಧಿಕ 76 ರನ್ಗಳ ಇನ್ನಿಂಗ್ಸ್ ಆಡಿದರೆ, ರಚಿನ್ ರವೀಂದ್ರ 65 ರನ್ಗಳ ಕಾಣಿಕೆ ನೀಡಿದರು. ಕೊನೆಯಲ್ಲಿ ಮಿಚೆಲ್ ಸ್ಯಾಂಟ್ನರ್ 33 ರನ್ಗಳ ಕಾಣಿಕೆ ನೀಡಿದರು. ಉಳಿದಂತೆ ಕಿವೀಸ್ ಪಡೆಯ ಐವರು ಬ್ಯಾಟ್ಸ್‌ಮನ್‌ಗಳಿಗೆ ಎರಡಂಕಿ ದಾಟಲು ಸಾಧ್ಯವಾಗದಿದ್ದರೆ, ಇತ್ತ ಟೀಂ ಇಂಡಿಯಾ ಪರ ಜಸ್ಪ್ರೀತ್ ಬುಮ್ರಾ, ಆಕಾಶ್ ದೀಪ್ ಮತ್ತು ರವೀಂದ್ರ ಜಡೇಜಾಗೆ ಯಾವುದೇ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:10 pm, Thu, 24 October 24