ಟೆಸ್ಟ್ ಕ್ರಿಕೆಟ್ ಲೋಕದಲ್ಲಿ ಶನಿವಾರ ಎರಡು ಪ್ರಮುಖ ದಾಖಲೆಗಳು ನಿರ್ಮಾಣವಾದವು. ಒಂದು ಐತಿಹಾಸಿಕ ದಾಖಲೆಯಾದರೆ, ಮತ್ತೊಂದು ಅತಿ ಕೆಟ್ಟ ದಾಖಲೆ. ಇವೆರಡೂ ನ್ಯೂಜಿಲೆಂಡ್ (New Zealand Cricket Team) ತಂಡದ ಕಡೆಯಿಂದ ಬಂದಿರುವುದು ಎಂಬುದು ಒಪ್ಪಿಕೊಳ್ಳಬೇಕಾದ ಸಂಗತಿ. ಹೌದು, ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಣ ಅಂತಿಮ ಎರಡನೇ ಟೆಸ್ಟ್ ಪಂದ್ಯ ಶನಿವಾರ ಕ್ರಿಕೆಟ್ ಲೋಕದ ಅಚ್ಚರಿಗೆ ಕಾರಣವಾಗಿದ್ದು ಸುಳ್ಳಲ್ಲ. ಕಿವೀಸ್ ಸ್ಪಿನ್ನರ್ ಎಜಾಜ್ ಪಟೇಲ್ (Ajaz Patel) ಭಾರತದ 10 ವಿಕೆಟ್ ಕಿತ್ತು ಇತಿಹಾಸ ನಿರ್ಮಿಸಿದರೆ, ನ್ಯೂಜಿಲೆಂಡ್ ಕೇವಲ 62 ರನ್ಗೆ ಆಲೌಟ್ ಆಗುವ ಮೂಲಕ ಟೆಸ್ಟ್ ಕ್ರಿಕೆಟ್ (Test Cricket) ಇತಿಹಾಸದಲ್ಲಿ ಕೆಟ್ಟ ದಾಖಲೆ ಬರೆಯಿತು. ಪ್ರವಾಸಿಗರನ್ನು ಇಷ್ಟು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಲು ಮೊಹಮ್ಮದ್ ಸಿರಾಜ್ (Mohammed Siraj) ಕೂಡ ಪ್ರಮುಖ ಕಾರಣ. ಈ ಬಗ್ಗೆ ಅವರು ಪಂದ್ಯ ಮುಗಿದ ಬಳಿಕ ಮಾತನಾಡಿದ್ದಾರೆ.
ಸಿರಾಜ್ಗೆ ಬೌಲಿಂಗ್ ಮಾಡಲು ಸಿಕ್ಕಿದ್ದು ಕೇವಲ 4 ಓವರ್ ಮಾತ್ರ. ಇದರಲ್ಲಿ ಕೇವಲ 19 ರನ್ ನೀಡಿದ 3 ವಿಕೆಟ್ ಕಿತ್ತರು. ಪ್ರಮುಖ ಅಪಾಯಕಾರಿ ಬ್ಯಾಟರ್ಗಳನ್ನು ಪೆವಿಲಿಯನ್ಗೆ ಅಟ್ಟಿ ನ್ಯೂಜಿಲೆಂಡ್ಗೆ ಆರಂಭದಲ್ಲೇ ಶಾಕ್ ಮೇಲೆ ಶಾಕ್ ನೀಡಿದರು. ಸ್ಟಂಪ್ ಟು ಸ್ಟಂಪ್ ಬೌಲ್ ಮಾಡಿದ್ದ ಸಿರಾಜ್, ನಾಲ್ಕನೇ ಓವರ್‌ನಲ್ಲಿ ಆರಂಭಿಕರಾದ ವಿಲ್ ಯಂಗ್(4) ಹಾಗೂ ಟಾಮ್ ಲೇಥಮ್(10) ಅವರ ವಿಕೆಟ್‌ಗಳನ್ನು ಉರುಳಿಸಿ ಕಿವೀಸ್‌ಗೆ ಆರಂಭಿಕ ಆಘಾತ ನೀಡಿದ್ದರು. ನಂತರ, ಆರನೇ ಓವರ್‌ನಲ್ಲಿ ಮತ್ತೆ ಬಂದ ಸಿರಾಜ್, ಅನುಭವಿ ಬ್ಯಾಟ್ಸ್‌ಮನ್ ರಾಸ್ ಟೇಲರ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ್ದು ಮನಮೋಹಕವಾಗಿತ್ತು. ಹೀಗೆ ಆರಂಭದಲ್ಲೇ ಪ್ರಮುಖ ಬ್ಯಾಟರ್ಗಳನ್ನು ಪೆವಿಲಿಯನ್ಗೆ ಅಟ್ಟಿ ನ್ಯೂಜಿಲೆಂಡ್ ಅಲ್ಪ ಮೊತ್ತಕ್ಕೆ ಆಲೌಟ್ ಆಗಲು ನೆರವಾದರು. ಇದಕ್ಕೆ ಇವರು ರೂಪಿಸಿದ ಮಾಸ್ಟರ್ ಪ್ಲಾನ್ ಏನು ಎಂದು ಅವರೇ ಹೇಳಿದ್ದಾರೆ ಕೇಳಿ.
ಈ ಕುರಿತು ಮಾತನಾಡಿರುವ ಸಿರಾಜ್, “ನಾನು ನ್ಯೂಜಿಲೆಂಡ್ ಬೌಲರ್‌ಗಳ ಬೌಲಿಂಗ್ ಗಮನಿಸುತ್ತಿದ್ದೆ. ಅವರ ಬೌಲಿಂಗ್ ನೋಡಿದ ಬಳಿಕ ಸ್ಟಂಪ್ ಟು ಸ್ಟಂಪ್ ಬೌಲ್ ಮಾಡಬೇಕೆಂದು ಅರಿತುಕೊಂಡೆ. ನನಗೆ ಸ್ವಿಂಗ್ ಸಿಗುತ್ತಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ನಾನು ನೋಡಲಿಲ್ಲ. ಆದರೆ, ಸಾಧ್ಯವಾದಷ್ಟು ಸ್ಥಿರವಾಗಿ ವಿಕೆಟ್ ಕಡೆ ಒಂದೇ ಜಾಗದಲ್ಲಿ ಬೌಲ್ ಮಾಡುವ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದೆ. ಈ ವೇಳೆ ಸ್ವಿಂಗ್ ಪಡೆದರೆ ಖಂಡಿತಾ ಬ್ಯಾಟ್ಸ್‌ಮನ್ ತೊಂದರೆಗೆ ಸಿಲುಕಲಿದ್ದಾರೆ. ಹಾಗಾಗಿ ಒಂದೇ ಜಾಗದಲ್ಲಿ ಬೌಲ್ ಮಾಡುವುದು ನನ್ನ ಪ್ಲಾನ್ ಆಗಿತ್ತು,” ಎಂದು ಹೇಳಿಕೊಂಡಿದ್ದಾರೆ.
“ಬ್ಯಾಟ್ಸ್‌ಮನ್ ಪ್ಯಾಡ್‌ಗೆ ಚೆಂಡು ತಗುಲುವಂತೆ ಬೌಲ್ ಮಾಡಬೇಕಾಗಿತ್ತು. ಆದರೆ, ಈ ವೇಳೆ ಒಂದೇ ಒಂದು ಔಟ್ ಸ್ವಿಂಗರ್ ಹಾಕಬೇಕೆಂದು ನನ್ನ ಮನಸಿಗೆ ಅನಿಸಿತು. ಅದರಂತೆ ಔಟ್ ಸ್ವಿಂಗ್ ಹಾಕಿ ಯಶಸ್ವಿಯಾದೆ. ಈ ಎಸೆತ ಫಾಸ್ಟ್ ಬೌಲರ್‌ಗಳಿಗೆ ಕನಸಿನ ಎಸೆತ,” ಎಂದು ಮೊಹಮ್ಮದ್ ಸಿರಾಜ್ ಹೇಳಿದ್ದಾರೆ.
IND vs NZ 2nd Test, Day 3 LIVE Score
(India vs New Zealand mohammed siraj master plan to all out kiwis for 62 here is the interesting details)