IND vs NZ: 7 ವರ್ಷದ ಹಿಂದಿನ ಕರಾಳ ಇತಿಹಾಸ ಮತ್ತೆ ಮರುಕಳಿಸುತ್ತಾ? ಪುಣೆ ಟೆಸ್ಟ್ನಲ್ಲಿ ಹೀಗೊಂದು ಕಾಕತಾಳೀಯ
IND vs NZ: ಪುಣೆಯಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಶೂನ್ಯಕ್ಕೆ ಔಟ್ ಆಗಿರುವುದು 7 ವರ್ಷಗಳ ಹಿಂದೆ ಇದೇ ಮೈದಾನದಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ಪಂದ್ಯವನ್ನು ನೆನಪಿಸುತ್ತದೆ. ಆಗಲೂ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟ್ ಆಗಿದ್ದರು. ಎರಡೂ ಪಂದ್ಯಗಳಲ್ಲಿ ಭಾರತದ ನಾಯಕನ ಶೂನ್ಯಕ್ಕೆ ಔಟ್ ಆಗುವುದು ಕಾಕತಾಳೀಯವಾಗಿದೆ ಮತ್ತು ಭಾರತ ತಂಡಕ್ಕೆ ಆತಂಕವನ್ನುಂಟು ಮಾಡಿದೆ. ನ್ಯೂಜಿಲೆಂಡ್ ತಂಡವನ್ನು 259 ರನ್‌ಗಳಿಗೆ ಆಲೌಟ್ ಮಾಡಿದರೂ, ಭಾರತದ ಆರಂಭಿಕ ಆಘಾತವು ಕಳವಳಕಾರಿಯಾಗಿದೆ.
ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಪುಣೆಯಲ್ಲಿ ನಿನ್ನೆಯಿಂದ ಆರಂಭವಾಗಿದೆ. ಸರಣಿಯಲ್ಲಿ ಕಿವೀಸ್ ಪಡೆ 1-0 ಅಂತರದ ಮುನ್ನಡೆ ಕಾಯ್ದುಕೊಂಡಿರುವುದರಿಂದ ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲುವುದು ರೋಹಿತ್ ಪಡೆಗೆ ಅತ್ಯವಶ್ಯಕವಾಗಿದೆ. ಆ ನಿಟ್ಟಿನಲ್ಲೇ ಪುಣೆ ಟೆಸ್ಟ್ನಲ್ಲಿ ಸಾಂಫೀಕ ಹೋರಾಟ ನೀಡುತ್ತಿರುವ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಕಿವೀಸ್ ತಂಡವನ್ನು 259 ರನ್‌ಗಳಿಗೆ ಆಲೌಟ್ ಮಾಡಿದೆ. ಆದರೆ ನ್ಯೂಜಿಲೆಂಡ್ ತಂಡವನ್ನು ಅಲ್ಪ ರನ್‌ಗಳಿಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾಕ್ಕೆ ಆರಂಭಿಕ ಆಘಾತ ಎದುರಾಗಿದೆ. ನಾಯಕ ರೋಹಿತ್ ಶರ್ಮಾ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದ್ದಾರೆ. ಈ ಮೂಲಕ 7ವರ್ಷಗಳ ಹಿಂದೆ ಇದೇ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿನ ಕಾಕತಾಳೀಯ ಘಟನೆಯೊಂದು ಈಗ ನಡೆಯುತ್ತಿರುವ ಪಂದ್ಯದಲ್ಲೂ ಸಂಭವಿಸಿದ್ದು, ಟೀಂ ಇಂಡಿಯಾ ಅಭಿಮಾನಿಗಳಲ್ಲಿ ಆತಂಕ ಹೆಚ್ಚಿಸಿದೆ.
ಹೀಗೊಂದು ಕರಾಳ ಕಾಕತಾಳೀಯ
ವಾಸ್ತವವಾಗಿ ಇದೇ ಪುಣೆಯಲ್ಲಿ 7 ವರ್ಷಗಳ ಹಿಂದೆ ಮೊದಲ ಟೆಸ್ಟ್ ಪಂದ್ಯವನ್ನು ಆಡಲಾಗಿತ್ತು. ಆ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿಯೂ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಮೊದಲ ದಿನ 9 ವಿಕೆಟ್ ಕಳೆದುಕೊಂಡು 259 ರನ್ ಗಳಿಸಿತ್ತು. ಅಂತಿಮವಾಗಿ ಆಸ್ಟ್ರೇಲಿಯನ್ ಇನ್ನಿಂಗ್ಸ್ ಕೇವಲ 260 ರನ್‌ಗಳಿಗೆ ಅಂತ್ಯಗೊಂಡಿತ್ತು. ಅಂದರೆ ಪ್ರಸ್ತುತ ನಡೆಯುತ್ತಿರುವ ಪಂದ್ಯದಲ್ಲಿ ಕಿವೀಸ್ ತಂಡ ಕಲೆಹಾಕಿರುವ (259 ರನ್) ಮೊತ್ತಕ್ಕಿಂತ 1 ರನ್ ಅನ್ನು ಆಸ್ಟ್ರೇಲಿಯಾ ತಂಡ ಹೆಚ್ಚಾಗಿ ಬಾರಿಸಿತ್ತು.
ನಾಯಕರಿಬ್ಬರೂ ಶೂನ್ಯಕ್ಕೆ ಔಟ್
ಆ ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ್ದ ಟೀಂ ಇಂಡಿಯಾ ಕೇವಲ 105 ರನ್‌ಗಳಿಗೆ ಆಲೌಟ್ ಆಗಿತ್ತು. ಕಾಕತಾಳೀಯ ಎಂಬಂತೆ ಆ ಇನ್ನಿಂಗ್ಸ್ನಲ್ಲೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಖಾತೆ ತೆರೆಯದೆ ಔಟಾಗಿದ್ದರು. ಇದೀಗ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿರುವ ರೋಹಿತ್ ಶರ್ಮಾ ಕೂಡ ಮೊದಲ ಇನ್ನಿಂಗ್ಸ್‌ನಲ್ಲಿ ಖಾತೆ ತೆರೆಯದೆ ಔಟಾಗಿದ್ದಾರೆ. ಎರಡೂ ಪಂದ್ಯಗಳಲ್ಲಿ, ಟೀಂ ಇಂಡಿಯಾದ ನಾಯಕ ಮೊದಲ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾಗಿದ್ದಾರೆ. ಅಂದರೆ ಈ ಎರಡು ಪಂದ್ಯಗಳಲ್ಲಿ ಒಂದೇ ರೀತಿಯ ಎರಡು ಘಟನೆಗಳು ಈಗಾಗಲೇ ಸಂಭವಿಸಿವೆ. ಇದೀಗ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಎಷ್ಟು ರನ್ ಕಲೆಹಾಕುತ್ತದೆ ಎಂಬುದರ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ.
ಭಾರತಕ್ಕೆ ಹೀನಾಯ ಸೋಲು
ಇನ್ನು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದ ಬಗ್ಗೆ ಹೇಳುವುದಾದರೆ, ಆ ಪಂದ್ಯವನ್ನು ಆಸ್ಟ್ರೇಲಿಯಾ 333 ರನ್‌ಗಳ ದೊಡ್ಡ ಅಂತರದಿಂದ ಗೆದ್ದುಕೊಂಡಿತು. ಆಸ್ಟ್ರೇಲಿಯಾದ ಈ ಗೆಲುವಿನಲ್ಲಿ ಎಡಗೈ ಸ್ಪಿನ್ನರ್ ಸ್ಟೀವ್ ಓಕೀಫ್ ಪ್ರಮುಖ ಪಾತ್ರವಹಿಸಿದ್ದರು. ಅವರು ಎರಡೂ ಇನ್ನಿಂಗ್ಸ್‌ಗಳಲ್ಲಿ ತಲಾ 6 ವಿಕೆಟ್ ಪಡೆದಿದ್ದರು. ಈಗ ನಾವು ನ್ಯೂಜಿಲೆಂಡ್ ಬಗ್ಗೆ ಮಾತನಾಡುವುದಾದರೆ, ಈ ತಂಡವು ಮಿಚೆಲ್ ಸ್ಯಾಂಟ್ನರ್ ಮತ್ತು ಅಜಾಜ್ ಪಟೇಲ್ ರೂಪದಲ್ಲಿ ಇಬ್ಬರು ಎಡಗೈ ಸ್ಪಿನ್ನರ್ಗಳನ್ನು ಹೊಂದಿದ್ದು, ಈಗಾಗಲೇ ಸ್ಯಾಂಟ್ನರ್ ಈ ಸುದ್ದಿ ಬರೆಯುವ ಹೊತ್ತಿಗೆ ಭಾರತದ ಇಬ್ಬರು ಪ್ರಮುಖ ಬ್ಯಾಟ್ಸ್ಮನ್ಗಳನ್ನು ಬಲಿ ಪಡೆದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:31 am, Fri, 25 October 24