India vs New Zealand: ಮೊದಲ ಟಿ20 ಪಂದ್ಯಕ್ಕಾಗಿ ಜೈಪುರಕ್ಕೆ ಬಂದಿಳಿದ ಕೋಚ್ ದ್ರಾವಿಡ್ ಹಾಗೂ ಟೀಮ್ ಇಂಡಿಯಾ ಆಟಗಾರರು

| Updated By: Vinay Bhat

Updated on: Nov 14, 2021 | 11:48 AM

ನವೆಂಬರ್ 17 ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ಭಾರತ ತಂಡದ ಆಟಗಾರರು ಜೈಪುರಕ್ಕೆ ಬಂದಿಳಿದಿದ್ದಾರೆ. ಕೋಚ್ ರಾಹುಲ್ ದ್ರಾವಿಡ್ ಕೂಡ ಆಗಮಿಸಿದ್ದಾರೆ.

India vs New Zealand: ಮೊದಲ ಟಿ20 ಪಂದ್ಯಕ್ಕಾಗಿ ಜೈಪುರಕ್ಕೆ ಬಂದಿಳಿದ ಕೋಚ್ ದ್ರಾವಿಡ್ ಹಾಗೂ ಟೀಮ್ ಇಂಡಿಯಾ ಆಟಗಾರರು
Team India arrive in Jaipur
Follow us on

ಟಿ20 ವಿಶ್ವಕಪ್​ನಿಂದ (T20 World Cup) ಹೊರಬಿದ್ದ ಬಳಿಕ ತವರಿಗೆ ಮರಳಿರುವ ಟೀಮ್ ಇಂಡಿಯಾ ಸದ್ಯ ನ್ಯೂಜಿಲೆಂಡ್ (India vs New Zealand) ವಿರುದ್ಧದ ಟಿ20 ಸರಣಿಗೆ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದರ ಪ್ರಯುಕ್ತ ಭಾರತ ತಂಡದ ನೂತನ ಕೋಚ್ ರಾಹುಲ್ ದ್ರಾವಿಡ್ (Rahul Dravid), ನೂತನ ನಾಯಕ ರೋಹಿತ್ ಶರ್ಮಾ (Rohit Sharma) ಸೇರಿದಂತೆ ಟೀಮ್ ಇಂಡಿಯಾ (Team India) ಆಟಗಾರರು ಜೈಪುರಕ್ಕೆ ಬಂದಿಳಿದಿದ್ದು, ಇಲ್ಲಿ ನವೆಂಬರ್ 17 ರಂದು ಮೊದಲ ಟಿ20 ಪಂದ್ಯವನ್ನು ಆಡಲಿದ್ದಾರೆ. ಎಲ್ಲಾ ಆಟಗಾರರು ಬಯೋ ಬಬಲ್‌ ಪ್ರವೇಶಿಸಿದ್ದು, ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದಾರೆ. ಜೊತೆಗೆ ಆಟಗಾರರು 3 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಲಿದ್ದಾರೆ. ನ್ಯೂಜಿಲೆಂಡ್ ಆಟಗಾರರು ನೇರವಾಗಿ ಟಿ20 ವಿಶ್ವಕಪ್​ನಿಂದ ಇಲ್ಲಿನ ಬಯೋ ಬಬಲ್​ಗೆ ಪ್ರವೇಶ ಪಡೆಯಲಿದ್ದಾರೆ.

ಇನ್ನು ಜೈಪುರದಲ್ಲಿ ಆರಂಭವಾಗಲಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಮೊದಲ ಟಿ-20 ಅಂತರರಾಷ್ಟ್ರೀಯ ಪಂದ್ಯಕ್ಕೆ ಪ್ರೇಕ್ಷಕರ ಹಾಜರಾತಿಗೆ ಯಾವುದೇ ನಿರ್ಬಂಧವಿಲ್ಲದಿರುವುದರಿಂದ  ಸಾಕಷ್ಟು ಪ್ರೇಕ್ಷಕರ ಸಮ್ಮುಖದಲ್ಲಿ ನಡೆಯಲಿದೆ. ಕೋವಿಡ್ ಲಸಿಕೆ ಪಡೆಯದವರು ಪಂದ್ಯ ಆರಂಭಕ್ಕೂ 48 ಗಂಟೆ ಮುಂಚಿನ ಕೋವಿಡ್ ನೆಗೆಟಿವ್ ಪರೀಕ್ಷಾ ವರದಿಯನ್ನು ಹೊಂದಿರಬೇಕಾಗುತ್ತದೆ.  25 ಸಾವಿರ ಪ್ರೇಕ್ಷಕರು ಕುಳಿತುಕೊಳ್ಳುವ ಸಾಮರ್ಥ್ಯವಿರುವ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಎಂಟು ವರ್ಷಗಳ ನಂತರ ಅಂತರರಾಷ್ಟ್ರೀಯ ಪಂದ್ಯವನ್ನು ಆಯೋಜಿಸಲಾಗಿದೆ. ಮಾಸ್ಕ್ ಇಲ್ಲದೆ ಸ್ಟೇಡಿಯಂ ಒಳಗೆ ಪ್ರವೇಶಿಸುವಂತಿಲ್ಲ, ಕೋವಿಡ್-19 ಅವಧಿಯಲ್ಲಿ ಯಾವುದೇ ನಿರ್ಬಂಧ ವಿಲ್ಲದೆ ನಡೆಯುತ್ತಿರುವ ಮೊದಲ ಅಂತರರಾಷ್ಟ್ರೀಯ ಪಂದ್ಯ ಇದಾಗಿದೆ. 1 ಸಾವಿರದಿಂದ 15 ಸಾವಿರ ರೂ. ವರೆಗೂ ಟಿಕೆಟ್ ಬೆಲೆ ನಿಗದಿಪಡಿಸಲಾಗಿದೆ.

ನಿರಂತರ ಕ್ರಿಕೆಟ್‌ನಿಂದ ಬಳಲಿರುವ ಕೆಲವು ತಾರಾ ಆಟಗಾರರಿಗೆ ಕಿವೀಸ್‌ ಎದುರಿನ ಟಿ20 ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಅದರಲ್ಲಿ ಪ್ರಮುಖವಾಗಿ ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ಜಸ್​ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿಗೆ ವಿಶ್ರಾಂತಿ ನೀಡಲಾಗಿದೆ. ಇದೇ ಮೊದಲ ಬಾರಿಗೆ ಟಿ20 ಸರಣಿಗೆ ರೋಹಿತ್ ಶರ್ಮಾ ಪೂರ್ಣ ಪ್ರಮಾಣದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಇನ್ನು ರಾಹುಲ್ ದ್ರಾವಿಡ್‌ ಮಾರ್ಗದರ್ಶನದಲ್ಲಿ ರೋಹಿತ್ ಶರ್ಮಾ ಪಡೆ ಯಾವ ರೀತಿ ಪ್ರದರ್ಶನ ನೀಡಲಿದೆ ಎನ್ನುವ ಕುತೂಹಲ ಜೋರಾಗಿದೆ.

ಇನ್ನು ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಆಯ್ಕೆಯಾಗಿರುವ ಪ್ರತಿಯೊಬ್ಬ ಆಟಗಾರನ ಜೊತೆ ಪ್ರತ್ಯೇಕವಾಗಿ ದ್ರಾವಿಡ್ ಅವರು ಚರ್ಚೆಯನ್ನು ನಡೆಸಲಿದ್ದಾರೆ. ನೂತನ ಕೋಚ್ ಆಗಿ ಆಯ್ಕೆಯಾದ ಕೂಡಲೇ ತಂಡದ ಎಲ್ಲ ಆಟಗಾರರನ್ನು ಗುಂಪು ಸೇರಿಸಿ ಮಾತನಾಡುವ ಬದಲಾಗಿ ಒಬ್ಬೊಬ್ಬರನ್ನೇ ಭೇಟಿಯಾಗುವುದರ ಮೂಲಕ ಚರ್ಚೆ ನಡೆಸಲು ರಾಹುಲ್ ದ್ರಾವಿಡ್ ಮುಂದಾಗಿದ್ದಾರೆ. ಪ್ರಮುಖವಾಗಿ ಆಟಗಾರರ ಫಿಟ್‌ನೆಸ್ ಮತ್ತು ಮಾನಸಿಕ ಸ್ಥಿತಿಯ ಕುರಿತು ಚರ್ಚೆ ನಡೆಸಲಿದ್ದಾರಂತೆ. ಈ ವೇಳೆ ಆಟಗಾರರಿಗೆ ವಿಶ್ರಾಂತಿಯ ಅಗತ್ಯವಿದ್ದರೆ ತೆಗೆದುಕೊಳ್ಳಬಹುದು ಎಂಬ ಚರ್ಚೆಯನ್ನು ಕೂಡ ದ್ರಾವಿಡ್ ನಡೆಸಲಿದ್ದಾರೆ.

ಕಿವೀಸ್ ವಿರುದ್ಧ ಮೊದಲು ಭಾರತ ಟಿ20 ಸರಣಿ ಆಡಲಿದೆ. ಇದು ನವೆಂಬರ್‌ 17, 19 ಮತ್ತು 21ರಂದು ಕ್ರಮವಾಗಿ ಜೈಪುರ, ರಾಂಚಿ ಮತ್ತು ಕೋಲ್ಕತಾದಲ್ಲಿ ನಡೆಯಲಿದೆ. ಇದಾದ ಬಳಿಕ ಮೊದಲ ಟೆಸ್ಟ್ ಕಾನ್ಪುರದಲ್ಲಿ ನವೆಂಬರ್ 25ರಿಂದ 29ರವರೆಗೆ ನಡೆಯಲಿದ್ದರೆ, 2ನೇ ಹಾಗೂ ಅಂತಿಮ ಟೆಸ್ಟ್ ಮುಂಬೈನಲ್ಲಿ ಡಿಸೆಂಬರ್ 3ರಿಂದ 7ರವರೆಗೆ ನಡೆಯಲಿದೆ.

ನ್ಯೂಜಿಲೆಂಡ್ ವಿರುದ್ಧದ ಟಿ20 ಕ್ರಿಕೆಟ್‌ ಸರಣಿಗೆ ಭಾರತ ತಂಡ:

ರೋಹಿತ್‌ ಶರ್ಮಾ (ನಾಯಕ), ಕೆಎಲ್‌ ರಾಹುಲ್ (ಉಪನಾಯಕ), ಋತುರಾಜ್‌ ಗಾಯಕ್ವಾಡ್‌, ಶ್ರೇಯಸ್‌ ಅಯ್ಯರ್‌, ಸೂರ್ಯಕುಮಾರ್‌ ಯಾದವ್‌, ರಿಷಭ್ ಪಂತ್‌ (ವಿಕೆಟ್‌ಕೀಪರ್‌), ಇಶಾನ್‌ ಕಿಶನ್‌ (ವಿಕೆಟ್‌ಕೀಪರ್‌), ವೆಂಕಟೇಶ್‌ ಅಯ್ಯರ್‌, ಯುಜ್ವೇಂದ್ರ ಚಹಲ್‌, ಆರ್‌ ಅಶ್ವಿನ್‌, ಅಕ್ಷರ್‌ ಪಟೇಲ್‌, ಅವೇಶ್ ಖಾನ್‌, ಭುವನೇಶ್ವರ್‌ ಕುಮಾರ್‌, ದೀಪಕ್ ಚಹರ್‌, ಹರ್ಷಲ್‌ ಪಟೇಲ್‌, ಮೊಹಮ್ಮದ್‌ ಸಿರಾಜ್‌.

ICC Hall Of Fame: ಐಸಿಸಿ ಹಾಲ್ ಆಫ್ ಫೇಮ್‌ಗೆ ಮಹೇಲಾ ಜಯವರ್ಧನಾ, ಶಾನ್ ಪೊಲಾಕ್, ಜಾನೆಟ್ ಬ್ರಿಟಿನ್

(India vs New Zealand Rahul Dravid Rohit Sharma and other Team India players arrive in Jaipur)