India vs New Zealand: ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತದಲ್ಲಿ ಬರೋಬ್ಬರಿ 5 ಓಪನರ್ಗಳು: ಕಿಡಿಕಾರಿದ ಮಾಜಿ ಆಟಗಾರ
India squad for New Zealand T20I Series: ರೋಹಿತ್ ಶರ್ಮಾ, ಕೆಎಲ್ ರಾಹುಲ್, ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ವೆಂಕಟೇಶ್ ಅಯ್ಯರ್. ಹೀಗೆ ಐದು ಜನ ಆರಂಭಿಕರನ್ನು ಬಿಸಿಸಿಐ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆ ಮಾಡಿದೆ. ಇದೇ ವಿಚಾರವಾಗಿ ಭಾರತದ ಮಾಜಿ ಆಟಗಾರ ಸಬಾ ಕರೀಂ ಕಿಡಿ ಕಾರಿದ್ದಾರೆ.
ಭಾರತೀಯ ಕ್ರಿಕೆಟ್ನಲ್ಲಿ (Indian Cricket Team) ಹೊಸ ಯುಗ ಪ್ರಾರಂಭವಾಗುವುದರಲ್ಲಿದೆ. ನವೆಂಬರ್ 17 ರಂದು ನ್ಯೂಜಿಲೆಂಡ್ (India vs New Zealand) ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಕಣಕ್ಕಿಳಿಯಲಿರುವ ಟೀಮ್ ಇಂಡಿಯಾ (Team India) ಹೊಸ ತಂಡವಾಗಿದೆ. ನೂತನ ಕೋಚ್, ನೂತನ ನಾಯಕ, ಯುವ ಆಟಗಾರರಿಂದ ಕೂಡಿರುವ ಭಾರತ ತಂಡ ಅಗ್ನಿ ಪರೀಕ್ಷೆಗೆ ಇಳಿಯಲಿದೆ. ಈಗಾಗಲೇ ತವರಿನಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಟಿ20 ಮತ್ತು ಟೆಸ್ಟ್ ಸರಣಿಗೆ ಭಾರತ ತಂಡವನ್ನು ಬಿಸಿಸಿಐ (BCCI) ಪ್ರಕಟ ಮಾಡಿದೆ. ಇದರಲ್ಲಿ ಕೆಲವೊಂದು ಅಚ್ಚರಿಯ ಆಯ್ಕೆ ಕೂಡ ಇದೆ. ಅದರಲ್ಲೂ ಟಿ20 ಸರಣಿಗೆ (IND vs NZ T20 Series) ಬರೋಬ್ಬರಿ ಐದು ಓಪನರ್ಗಳು ಆಯ್ಕೆಯಾಗಿದ್ದಾರೆ. ಇದರ ಬಗ್ಗೆ ಕ್ರೀಡಾ ವಲಯದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಬಾ ಕರೀಂ (Saba Karim) ಬಿಸಿಸಿಐ ಆಯ್ಕೆ ಸಮಿತಿ ವಿರುದ್ಧ ಇದೇ ವಿಚಾರವಾಗಿ ಕಿಡಿ ಕಾರಿದ್ದಾರೆ.
ಕಳೆದ 6 ತಿಂಗಳಿಂದ ಬಯೋ ಬಬಲ್ ಜೀವನ ನಡೆಸಿ ದಣಿಸಿರುವ ಅನುಭವಿಗಳಾದ ವಿರಾಟ್ ಕೊಹ್ಲಿ, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಆಲ್‌ರೌಂಡರ್ ರವೀಂದ್ರ ಜಡೇಜಾ ಈ ಸರಣಿಯಿಂದ ವಿಶ್ರಾಂತಿ ಪಡೆದಿದ್ದಾರೆ. ಇವರ ಜಾಗಕ್ಕೆ ಕೆಲ ಹೊಸ ಆಟಗಾರರು ಸ್ಥಾನ ಪಡೆದಿದ್ದಾರೆ. ಹೀಗೆ ಆಯ್ಕೆಯಾಗಿರುವವರ ಪೈಕಿ ಐದು ಜನ ಓಪನರ್ಗಳೇ ಇದ್ದಾರೆ ಎಂಬುದು ವಿಶೇಷ.
ರೋಹಿತ್ ಶರ್ಮಾ, ಕೆಎಲ್ ರಾಹುಲ್, ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ವೆಂಕಟೇಶ್ ಅಯ್ಯರ್. ಹೀಗೆ ಐದು ಜನ ಆರಂಭಿಕರನ್ನು ಬಿಸಿಸಿಐ ಆಯ್ಕೆ ಮಾಡಿದೆ. ಇದೇ ವಿಚಾರವಾಗಿ ಮಾತನಾಡಿರುವ ಸಬಾ ಕರೀಂ ಈ ಐದು ಜನ ಓಪನರ್ಗಳನ್ನು ಬಿಸಿಸಿಐ ಆಯ್ಕೆ ಮಾಡಿದರೆ ಪ್ಲೇಯಿಂಗ್ ಇಲೆವೆನ್ ಕಟ್ಟುವುದು ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.
“ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಿದ್ದು ಆತುರದಲ್ಲಿ ಎಂದೆನಿಸುತ್ತದೆ. ರಾಹುಲ್, ಕಿಶನ್, ಅಯ್ಯರ್, ಗಾಯಕ್ವಾಡ್, ರೋಹಿತ್ ಹೀಗೆ ಅನೇಕ ಓಪನರ್ಗಳಿದ್ದಾರೆ. ಇವರೆಲ್ಲ ಯಾವ ಸ್ಥಾನದಲ್ಲಿ ಆಡುತ್ತಾರೆ?, ರಾಹುಲ್-ರೋಹಿತ್ ಓಪನರ್ ಆದರೆ, ರುತುರಾಜ್ ಕತೆ ಏನು, ಐಪಿಎಲ್ನಲ್ಲಿ ಅವರ ಅಮೋಘ ಪ್ರದರ್ಶನ ನಾವೆಲ್ಲ ಕಂಡಿದ್ದೇವೆ. ನೀವು ವಿಶ್ವಕಪ್ನಲ್ಲೂ ಕಿಶನ್ಗೆ ಓಪನಿಂಗ್ ಆಯ್ಕೆ ನೀಡಿದಿರಿ. ಹಾಗಾದ್ರೆ ವೆಂಕಟೇಶ್ ಅಯ್ಯರ್ರನ್ನು ಯಾವ ಜಾಗದಲ್ಲಿ ಆಡಿಸುತ್ತೀರಿ. ಆಟಗಾರರ ಜೊತೆ ಚರ್ಚೆಸಿ ಅವರಿಗೆ ಯಾವ ಸ್ಥಾನ ಎಂದು ಖಚಿತ ಪಡಿಸಬೇಕಿದೆ” ಎಂದು ಸಬಾ ಹೇಳಿದ್ದಾರೆ.
ಕಿವೀಸ್ ವಿರುದ್ಧ ಮೊದಲು ಭಾರತ ಟಿ20 ಸರಣಿ ಆಡಲಿದೆ. ಇದು ನವೆಂಬರ್ 17, 19 ಮತ್ತು 21ರಂದು ಕ್ರಮವಾಗಿ ಜೈಪುರ, ರಾಂಚಿ ಮತ್ತು ಕೋಲ್ಕತಾದಲ್ಲಿ ನಡೆಯಲಿದೆ. ಇದಾದ ಬಳಿಕ ಮೊದಲ ಟೆಸ್ಟ್ ಕಾನ್ಪುರದಲ್ಲಿ ನವೆಂಬರ್ 25ರಿಂದ 29ರವರೆಗೆ ನಡೆಯಲಿದ್ದರೆ, 2ನೇ ಹಾಗೂ ಅಂತಿಮ ಟೆಸ್ಟ್ ಮುಂಬೈನಲ್ಲಿ ಡಿಸೆಂಬರ್ 3ರಿಂದ 7ರವರೆಗೆ ನಡೆಯಲಿದೆ.
ನ್ಯೂಜಿಲೆಂಡ್ ವಿರುದ್ಧದ ಟಿ20 ಕ್ರಿಕೆಟ್ ಸರಣಿಗೆ ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಋತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್‌ಕೀಪರ್), ಇಶಾನ್ ಕಿಶನ್ (ವಿಕೆಟ್‌ಕೀಪರ್), ವೆಂಕಟೇಶ್ ಅಯ್ಯರ್, ಯುಜ್ವೇಂದ್ರ ಚಹಲ್, ಆರ್ ಅಶ್ವಿನ್, ಅಕ್ಷರ್ ಪಟೇಲ್, ಅವೇಶ್ ಖಾನ್, ಭುವನೇಶ್ವರ್ ಕುಮಾರ್, ದೀಪಕ್ ಚಹರ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್.
T20 World Cup Final: ಆಸ್ಟ್ರೇಲಿಯಾ-ನ್ಯೂಜಿಲೆಂಡ್: ಮೊದಲ ಟಿ20 ವಿಶ್ವಕಪ್ ಕಿರೀಟ ಯಾರ ಮುಡಿಗೆ?, ಯಾವ ತಂಡ ಬಲಿಷ್ಠ?
(India vs New Zealand BCCI selectors named as many as Five Indian openers for New Zealand T20 Series)