
ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಿನ ಐದು ಪಂದ್ಯಗಳ ಟಿ20 ಸರಣಿ ಅಂತಿಮ ಹಂತಕ್ಕೆ ಬಂದು ನಿಂತಿದೆ. ಸರಣಿಯಲ್ಲಿ 3-1 ಅಂತರದ ಮುನ್ನಡೆ ಸಾಧಿಸಿರುವ ಟೀಂ ಇಂಡಿಯಾ ಟಿ20 ವಿಶ್ವಕಪ್ಗೂ (T20 World Cup) ಮುನ್ನ ಆಡುತ್ತಿರುವ ಕೊನೆಯ ಸರಣಿಯ ಕೊನೆಯ ಪಂದ್ಯವನ್ನು ಗೆಲ್ಲುವ ಮೂಲಕ ಮಿನಿ ವಿಶ್ವ ಸಮರಕ್ಕೆ ಕಾಲಿಡಲು ಯತ್ನಿಸಲಿದೆ. ಇತ್ತ ಸರಣಿ ಸೋತಿರುವ ನ್ಯೂಜಿಲೆಂಡ್ ಸರಣಿ ಸೋಲಿನ ಅಂತರವನ್ನು ಕಡಿಮೆ ಮಾಡಲು ನೋಡುತ್ತಿದೆ. ಉಭಯ ತಂಡಗಳ ನಡುವಿನ ಅಂತಿಮ ಪಂದ್ಯ ತಿರುವನಂತಪುರದ ಗ್ರೀನ್‌ಫೀಲ್ಡ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಕಣಕ್ಕಿಳಿಯುವ ತಂಡವೇ ಟಿ20 ವಿಶ್ವಕಪ್‌ನಲ್ಲಿ ಆಡುವುದರಿಂದ ಈ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ 11 ಹೇಗಿರಲಿದೆ ಎಂಬುದನ್ನು ನೋಡಲು ಕುತೂಹಲಕಾರಿಯಾಗಿದೆ.
ಐದನೇ ಟಿ20 ಪಂದ್ಯಕ್ಕೆ ಭಾರತ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಎರಡು ಬದಲಾವಣೆಗಳನ್ನು ಮಾಡುವ ನಿರೀಕ್ಷೆಯಿದೆ. ಇಶಾನ್ ಕಿಶನ್ ತಂಡಕ್ಕೆ ಮರಳಬಹುದು ಎಂದು ವರದಿಯಾಗುತ್ತಿದ್ದು, ವರುಣ್ ಚಕ್ರವರ್ತಿ ಕೂಡ ಈ ಪಂದ್ಯದಲ್ಲಿ ಆಡಬಹುದು. ಗಾಯದ ಸಮಸ್ಯೆಯಿಂದಾಗಿ ಇಶಾನ್ ಕಿಶನ್ ಹಿಂದಿನ ಪಂದ್ಯವನ್ನು ತಪ್ಪಿಸಿಕೊಂಡಿದ್ದರೆ, ಹಿಂದಿನ ಎರಡು ಪಂದ್ಯಗಳಿಂದ ವರುಣ್ ಚಕ್ರವರ್ತಿಗೆ ವಿಶ್ರಾಂತಿ ನೀಡಲಾಗಿತ್ತು. ಇವರಿಬ್ಬರ ಆಗಮನದಿಂದಾಗಿ ಬುಮ್ರಾ ಹಾಗೂ ರವಿ ಬಿಷ್ಣೋಯ್ ಅವರನ್ನು ತಂಡದಿಂದ ಕೈಬಿಡಬಹುದು.
ತಿರುವನಂತಪುರಂ ಸಂಜು ಸ್ಯಾಮ್ಸನ್ ಅವರ ತವರು ಮೈದಾನವಾಗಿದ್ದು, ಅವರಿಗೆ ಅವಕಾಶ ನೀಡಲಾಗುತ್ತದೆಯೇ ಎಂಬುದು ಪ್ರಶ್ನೆ. ಕಳೆದ ನಾಲ್ಕು ಪಂದ್ಯಗಳಲ್ಲಿ ಸಂಜು ರನ್ ಗಳಿಸಲು ವಿಫಲರಾಗಿದ್ದು, ಅವರ ಪ್ರದರ್ಶನವನ್ನು ನಿರಂತರವಾಗಿ ಪ್ರಶ್ನಿಸಲಾಗುತ್ತಿದೆ. ಕಳೆದ 15 ಟಿ20 ಇನ್ನಿಂಗ್ಸ್‌ಗಳಲ್ಲಿ ಸಂಜು ಸ್ಯಾಮ್ಸನ್ ಕೇವಲ ಒಂದು ಅರ್ಧಶತಕ ಮಾತ್ರ ಗಳಿಸಿದ್ದಾರೆ. ಆದಾಗ್ಯೂ, ಸಂಜುಗೆ ಕೊನೆಯ ಅವಕಾಶ ನೀಡುವ ಸಾಧ್ಯತೆಗಳಿವೆ. ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಉತ್ತಮ ಪ್ರದರ್ಶನ ನೀಡಿದರೆ, ಟಿ20 ವಿಶ್ವಕಪ್‌ನಲ್ಲಿ ಆಡುವುದು ಅವರಿಗೆ ಸುಲಭವಾಗಬಹುದು, ಇಲ್ಲದಿದ್ದರೆ ಅವರ ಸ್ಥಾನದಲ್ಲಿ ಇಶಾನ್ ಕಿಶನ್ ಆಡುವುದನ್ನು ಕಾಣಬಹುದು.
ಭಾರತದ ಸಂಭಾವ್ಯ XI: ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್, ಇಶನ್ ಕಿಶನ್, ಶಿವಂ ದುಬೆ, ರಿಂಕು ಸಿಂಗ್, ಹರ್ಷಿತ್ ರಾಣಾ, ಕುಲ್ದೀಪ್ ಯಾದವ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್ ಮತ್ತು ವರುಣ್ ಚಕ್ರವರ್ತಿ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ