IND vs PAK: ಭಾರತ vs ಪಾಕಿಸ್ತಾನ್ ಮುಖಾಮುಖಿಗೆ ಡೇಟ್ ಫಿಕ್ಸ್

Asia Cup 2025: ಏಷ್ಯಾಕಪ್ ಟೂರ್ನಿಯ 17ನೇ ಆವೃತ್ತಿಗೆ ಸಿದ್ಧತೆಗಳು ಶುರುವಾಗಿದೆ. ಅದರ ಮೊದಲ ಹೆಜ್ಜೆಯಾಗಿ ಇದೀಗ ಟೂರ್ನಿ ಆರಂಭಕ್ಕೆ ದಿನಾಂಕ ಫಿಕ್ಸ್ ಮಾಡಲಾಗಿದೆ. ಅದರಂತೆ ಸೆಪ್ಟೆಂಬರ್​ ಮೊದಲ ವಾರದಿಂದ ಏಷ್ಯಾಕಪ್ ಶುರುವಾಗುವುದು ಬಹುತೇಕ ಖಚಿತವಾಗಿದೆ. ಅಲ್ಲದೆ ಈ ಬಾರಿ 6 ತಂಡಗಳನ್ನು ಕಣಕ್ಕಿಳಿಸಲು ಎಸಿಸಿ ನಿರ್ಧರಿಸಿದೆ.

IND vs PAK: ಭಾರತ vs ಪಾಕಿಸ್ತಾನ್ ಮುಖಾಮುಖಿಗೆ ಡೇಟ್ ಫಿಕ್ಸ್
Ind Vs Pak

Updated on: Jul 02, 2025 | 9:38 AM

ಏಷ್ಯಾಕಪ್ 2025 ಕ್ಕಾಗಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಕರುಡು ವೇಳಾಪಟ್ಟಿ ಸಿದ್ಧಪಡಿಸಿದೆ. ಈ ವೇಳಾಪಟ್ಟಿಯ ಪ್ರಕಾರ, ಸೆಪ್ಟೆಂಬರ್ 5 ರಿಂದ 17ನೇ ಆವೃತ್ತಿಯ ಏಷ್ಯಾಕಪ್ ಶುರುವಾಗಲಿದೆ. ಅಲ್ಲದೆ ಫೈನಲ್ ಪಂದ್ಯವು ಸೆಪ್ಟೆಂಬರ್ 21 ರಂದು ಆಯೋಜಿಸಲು ನಿರ್ಧರಿಸಲಾಗಿದೆ. ಇನ್ನು ಈ ಬಾರಿಯ ಟೂರ್ನಿಯನ್ನು ಯುಎಇನಲ್ಲಿ ಆಯೋಜಿಸುವ ಸಾಧ್ಯತೆಯಿದೆ.

ಏಷ್ಯಾಕಪ್ 2025ರ ಆಯೋಜನೆಯ ಹಕ್ಕು ಭಾರತೀಯ ಕ್ರಿಕೆಟ್ ಮಂಡಳಿಯ ಕೈಯಲ್ಲಿದೆ. ಹೀಗಾಗಿ ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿಯನ್ನು ಆಯೋಜಿಸಬೇಕಾಗುತ್ತದೆ. ಏಕೆಂದರೆ ಭಾರತದಲ್ಲಿ ಪಂದ್ಯವಾಡಲು ಪಾಕಿಸ್ತಾನ್ ತಂಡ ಆಗಮಿಸುವುದಿಲ್ಲ. ಈ ಹಿಂದೆ ಚಾಂಪಿಯನ್ಸ್ ಟ್ರೋಫಿ ಆಡಲು ಭಾರತ ತಂಡ ಪಾಕಿಸ್ತಾನಕ್ಕೆ ತೆರಳಿರಲಿಲ್ಲ.

ಇದೇ ಕಾರಣದಿಂದಾಗಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಿತ್ತು. ಅದರಂತೆ ಟೀಮ್ ಇಂಡಿಯಾ ತನ್ನೆಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಿತ್ತು.

ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸುವ ಬಗ್ಗೆ ನಡೆದ ಐಸಿಸಿ ಸಭೆಯಲ್ಲಿ  ಬಿಸಿಸಿಐ ಹಾಗೂ ಪಿಸಿಬಿ ನಡುವೆ ಒಪ್ಪಂದವಾಗಿದ್ದು, ಈ ಒಪ್ಪಂದದಂತೆ ಉಭಯ ತಂಡಗಳ ಪಂದ್ಯಗಳನ್ನು ಮುಂಬರುವ ದಿನಗಳಲ್ಲಿ ತಟಸ್ಥ ಮೈದಾನದಲ್ಲಿ ಆಯೋಜಿಸಬೇಕಾಗುತ್ತದೆ. ಅಂದರೆ ಭಾರತ ಪಾಕಿಸ್ತಾನದಲ್ಲಿ ಆಡದೇ ಇರುವ ತನಕ, ಪಾಕಿಸ್ತಾನ್ ತಂಡ ಭಾರತದಲ್ಲಿ ಯಾವುದೇ ಪಂದ್ಯವಾಡುವುದಿಲ್ಲ ಎಂದು ತಿಳಿಸಿದೆ.

ಹೀಗಾಗಿ ಈ ಬಾರಿಯ ಏಷ್ಯಾಕಪ್ ಅನ್ನು ಬಿಸಿಸಿಐ ಹೈಬ್ರಿಡ್ ಮಾದರಿಯಲ್ಲೇ ಆಯೋಜಿಸಬೇಕಾಗುತ್ತದೆ. ಅದರಂತೆ ಪಾಕಿಸ್ತಾನ್ ತಂಡದ ಪಂದ್ಯಗಳು ಯುಎಇ ನಲ್ಲಿ ಆಯೋಜಿಸುವುದು ಅನಿವಾರ್ಯ. ಇದೇ ಕಾರಣದಿಂದಾಗಿ ಸಂಪೂರ್ಣ ಟೂರ್ನಿಯನ್ನು ಯುಎಇನಲ್ಲಿ ಆಯೋಜಿಸಲು ಬಿಸಿಸಿಐ ಚಿಂತಿಸಿದೆ.

ಭಾರತ vs ಪಾಕಿಸ್ತಾನ್ ಕದನಕ್ಕೆ ಡೇಟ್ ಫಿಕ್ಸ್:

ಏಷ್ಯಾಕಪ್ 2025ರ ಮೊದಲ ಸುತ್ತಿನಲ್ಲೇ ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗಲಿದೆ. ಸಾಂಪ್ರದಾಯಿಕ ಎದುರಾಳಿಗಳ ಕದನವನ್ನು ಸೆಪ್ಟೆಂಬರ್ 7 ರಂದು ಆಯೋಜಿಸಲು ನಿರ್ಧರಿಸಲಾಗಿದ್ದು, ಈ ಪಂದ್ಯವು ದುಬೈ ಇಂಟರ್​ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಟಿ20 ಟೂರ್ನಿ:

ಈ ಬಾರಿ ಏಷ್ಯಾಕಪ್ ಟೂರ್ನಿಯು ಟಿ20 ಮಾದರಿಯಲ್ಲಿ ನಡೆಯಲಿದೆ. ಮುಂಬರುವ ಟಿ20 ವಿಶ್ವಕಪ್​ ಅನ್ನು ಗಮನದಲ್ಲಿಟ್ಟುಕೊಂಡು ಟಿ20 ಸ್ವರೂಪದಲ್ಲಿ ಟೂರ್ನಿಯನ್ನು ಆಯೋಜಿಸಲಾಗುತ್ತದೆ. ಅಂದರೆ ಏಷ್ಯಾಕಪ್​ ನಂತರ ಯಾವುದೇ ಐಸಿಸಿ ಟೂರ್ನಿ ಇದ್ದರೆ, ಅದಕ್ಕನುಗುಣವಾಗಿ ಟೂರ್ನಿಯ ಸ್ವರೂಪವನ್ನು ಬದಲಿಸಲಾಗುತ್ತದೆ.

2023 ರಲ್ಲಿ ಏಷ್ಯಾಕಪ್ ಅನ್ನು ಏಕದಿನ ಸ್ವರೂಪದಲ್ಲಿ ಆಡಲಾಗಿತ್ತು. 2023ರ ಏಕದಿನ ವಿಶ್ವಕಪ್ ಅನ್ನು​ ಕೇಂದ್ರೀಕರಿಸಿ ಒಡಿಐ ಸ್ವರೂಪದಲ್ಲಿ ಏಷ್ಯಾಕಪ್​ ಟೂರ್ನಿಯನ್ನು ಆಯೋಜಿಸಲಾಗಿತ್ತು. ಇದೀಗ 2026ರ ಟಿ20 ವಿಶ್ವಕಪ್​ ಹಿನ್ನಲೆಯಲ್ಲಿ ಏಷ್ಯಾಕಪ್ ಅನ್ನು ಟಿ20 ಮಾದರಿಯಲ್ಲಿ ಆಡಲಾಗುತ್ತದೆ.

ಇದನ್ನೂ ಓದಿ: IPL 2026: CSK ತಂಡಕ್ಕೆ ಸಂಜು ಸ್ಯಾಮ್ಸನ್ ಎಂಟ್ರಿ ಬಹುತೇಕ ಖಚಿತ

ಏಷ್ಯಾಕಪ್​ನಲ್ಲಿ ಕಣಕ್ಕಿಳಿಯುವ ತಂಡಗಳಾವುವು?

  • ಭಾರತ
  • ಪಾಕಿಸ್ತಾನ್
  • ಅಫ್ಘಾನಿಸ್ತಾನ್
  • ಶ್ರೀಲಂಕಾ
  • ಬಾಂಗ್ಲಾದೇಶ್
  • ಯುಎಇ