ತಿಂಗಳಿಗೆ 4 ಲಕ್ಷ ರೂ. ಜೀವನಾಂಶ ನೀಡಲು ಮೊಹಮ್ಮದ್ ಶಮಿಗೆ ಕೋರ್ಟ್ ಆದೇಶ
Mohammed Shami: ಟೀಮ್ ಇಂಡಿಯಾ ಮೊಹಮ್ಮದ್ ಶಮಿ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದೇ ಕಾರಣದಿಂದಾಗಿ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅವರು ಕಾಣಿಸಿಕೊಳ್ಳುತ್ತಿಲ್ಲ. ಅತ್ತ ಫಿಟ್ನೆಸ್ನತ್ತ ಗಮನ ಕೇಂದ್ರೀಕರಿಸಿರುವ ಶಮಿ ಮುಂಬರುವ ಸರಣಿಗಳ ಮೂಲಕ ಕಂಬ್ಯಾಕ್ ಮಾಡುವ ವಿಶ್ವಾಸದಲ್ಲಿದ್ದಾರೆ.

ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಅವರು ಸುದ್ದಿಯಲ್ಲಿರುವುದು ಆಟದಿಂದಲ್ಲ. ಬದಲಾಗಿ ವೈಯುಕ್ತಿಕ ಕಾರಣಗಳಿಂದ. ಅದು ಕೂಡ ಕೋರ್ಟ್ ಆದೇಶದೊಂದಿಗೆ. ಮೊಹಮ್ಮದ್ ಶಮಿ ತನ್ನ ಪರಿತ್ಯಕ್ತ ಪತ್ನಿ ಹಸಿನ್ ಜಹಾನ್ ಮತ್ತು ಮಗಳು ಐರಾಗೆ ತಿಂಗಳಿಗೆ 4 ಲಕ್ಷ ರೂಪಾಯಿ ಜೀವನಾಂಶ ನೀಡಬೇಕೆಂದು ಕೊಲ್ಕತ್ತಾ ಹೈಕೋರ್ಟ್ ಆದೇಶಿಸಿದೆ.
ಮೊಹಮ್ಮದ್ ಶಮಿ 2014 ರಲ್ಲಿ ಹಸಿನ್ ಜಹಾನ್ ಅವರನ್ನು ವಿವಾಹವಾಗಿದ್ದರು. 2015 ರಲ್ಲಿ ಈ ದಂಪತಿಗೆ ಮಗಳು ಜನಿಸಿದ್ದರು. ಆದರೆ 2018 ರಲ್ಲಿ ಶಮಿ ವಿರುದ್ಧ ಕೌಟುಂಬಿಕ ಹಿಂಸೆ, ವರದಕ್ಷಿಣೆ ಕಿರುಕುಳ ಮತ್ತು ಮ್ಯಾಚ್ ಫಿಕ್ಸಿಂಗ್‌ನಂತಹ ಗಂಭೀರ ಆರೋಪಗಳನ್ನು ಮಾಡುವ ಮೂಲಕ ಹಸಿನ್ ಜಹಾನ್ ಸುದ್ದಿಯಾಗಿದ್ದರು.
ಅಷ್ಟೇ ಅಲ್ಲದೆ ಶಮಿ ಮತ್ತು ಅವರ ಕುಟುಂಬದ ವಿರುದ್ಧ ಹಸಿನ್ ಕೋಲ್ಕತ್ತಾದ ಜಾದವ್‌ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೇ ವೇಳೆ ಮಾಸಿಕ 10 ಲಕ್ಷ ರೂ. ಜೀವನಾಂಶವನ್ನು ಸಹ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು.
ಇದೀಗ ಈ ಪ್ರಕರಣದ ತೀರ್ಪು ಬಂದಿದ್ದು, ತನ್ನಿಂದ ದೂರವಾಗಿರುವ ಪತ್ನಿ ಹಸಿನ್ ಜಹಾನ್ ಮತ್ತು ಅವರ ಮಗಳಿಗೆ ತಿಂಗಳಿಗೆ 4 ಲಕ್ಷ ರೂಪಾಯಿ ಜೀವನಾಂಶ ನೀಡುವಂತೆ ಕೊಲ್ಕತ್ತಾ ಹೈಕೋರ್ಟ್ ಆದೇಶಿಸಿದೆ. ಈ ಮೊತ್ತವು ಕಳೆದ ಏಳು ವರ್ಷಗಳವರೆಗೆ ಅನ್ವಯವಾಗುತ್ತದೆ. ಅಂದರೆ ಶಮಿ ಈ ಅವಧಿಗೆ ಬಾಕಿ ಹಣವನ್ನು ಸಹ ಪಾವತಿಸಬೇಕಾಗುತ್ತದೆ. ಅಂದರೆ ಅವರು ಹಸಿನ್ ಜಹಾನ್ ಗೆ 3 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ಪಾವತಿಸಬೇಕಾಗುತ್ತದೆ.
ಕೋಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ ಅಜಯ್ ಕುಮಾರ್ ಮುಖರ್ಜಿ ಅವರ ಪೀಠವು ಜುಲೈ 1, 2025 ರಂದು ಈ ತೀರ್ಪು ನೀಡಿದ್ದು. ಶಮಿ ತನ್ನ ಪತ್ನಿ ಹಸಿನ್ ಜಹಾನ್‌ಗೆ ಪ್ರತಿ ತಿಂಗಳು 1.5 ಲಕ್ಷ ರೂ. ಮತ್ತು ಮಗಳು ಐರಾಗೆ 2.5 ಲಕ್ಷ ರೂ. ಪಾವತಿಸಬೇಕಾಗುತ್ತದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಿದ್ದ ಹಸಿನ್:
ಮೊಹಮ್ಮದ್ ಶಮಿಯಿಂದ ದೂರವಾಗಿದ್ದ ಹಸಿನ್ ಜಹಾನ್, ಈ ಹಿಂದೆ ಟೀಮ್ ಇಂಡಿಯಾ ವೇಗಿ ವಿರುದ್ಧ ಮ್ಯಾಚ್ ಫಿಕ್ಸಿಂಗ್‌ನಂತಹ ಗಂಭೀರ ಆರೋಪ ಮಾಡಿದ್ದರು. ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ್ದ ಬಿಸಿಸಿಐ, ಶಮಿ ವಿರುದ್ಧದ ಭ್ರಷ್ಟಾಚಾರದ ಆರೋಪಗಳನ್ನು ತನಿಖೆ ಮಾಡಿತು. ಆದರೆ ಮೊಹಮ್ಮದ್ ಶಮಿ ಅಂತಹ ಯಾವುದೇ ಕಳ್ಳಾಟದಲ್ಲಿ ಭಾಗಿಯಾಗಿರದ ಕಾರಣ, ಬಿಸಿಸಿಐ ಅವರನ್ನು ಈ ಆರೋಪಗಳಿಂದ ಖುಲಾಸೆಗೊಳಿಸಿತು.
ಇದನ್ನೂ ಓದಿ: IPL 2026: CSK ತಂಡಕ್ಕೆ ಸಂಜು ಸ್ಯಾಮ್ಸನ್ ಎಂಟ್ರಿ ಬಹುತೇಕ ಖಚಿತ
ಇದಾದ ಬಳಿಕ ಮೊಹಮ್ಮದ್ ಶಮಿ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಿದ್ದರು. ಅಲ್ಲದೆ ಕಳೆದ ಬಾರಿಯ ಚಾಂಪಿಯನ್ಸ್ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಫಿಟ್ನೆಸ್ ಸಮಸ್ಯೆಯ ಕಾರಣ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದಾರೆ. ಹೀಗಾಗಿ ಅವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ.
