AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊಹಮ್ಮದ್ ಶಮಿ ನಿವೃತ್ತಿ ಸುದ್ದಿ ಕ್ಲೀನ್ ಬೌಲ್ಡ್..!

Mohammed Shami: ಮೊಹಮ್ಮದ್ ಶಮಿ ಟೀಮ್ ಇಂಡಿಯಾ ಪರ ಈವರೆಗೆ 64 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 122 ಇನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿರುವ ಅವರು 229 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಇದೀಗ ಎರಡು ವರ್ಷಗಳ ಬಳಿಕ ಮತ್ತೊಮ್ಮೆ ಟೀಮ್ ಇಂಡಿಯಾ ಪರ ಟೆಸ್ಟ್ ಆಡುವ ಅವಕಾಶವನ್ನು ಶಮಿ ಎದುರು ನೋಡುತ್ತಿದ್ದಾರೆ.

ಮೊಹಮ್ಮದ್ ಶಮಿ ನಿವೃತ್ತಿ ಸುದ್ದಿ ಕ್ಲೀನ್ ಬೌಲ್ಡ್..!
Mohammed Shami
ಝಾಹಿರ್ ಯೂಸುಫ್
|

Updated on: May 14, 2025 | 2:03 PM

Share

ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟೆಸ್ಟ್ ನಿವೃತ್ತಿ ಬೆನ್ನಲ್ಲೇ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ (Mohammed Shami) ಕೂಡ ದೀರ್ಘಾವಧಿಯ ಕ್ರಿಕೆಟ್​ಗೆ ವಿದಾಯ ಹೇಳಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಅಲ್ಲದೆ ಈ ಸುದ್ದಿಯೊಂದಿಗೆ ಶಮಿ ಅವರನ್ನು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆ ಮಾಡಲಾಗುತ್ತಿಲ್ಲ. ಹೀಗಾಗಿ ಅವರು ನಿವೃತ್ತಿ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿತ್ತು. ಆದರೀಗ ಇವೆಲ್ಲವೂ ಕೇವಲ ವದಂತಿ ಎಂದು ಖುದ್ದು ಮೊಹಮ್ಮದ್ ಶಮಿ ಸ್ಪಷ್ಟಪಡಿಸಿದ್ದಾರೆ.

ಖಾರವಾಗಿ ಪ್ರತಿಕ್ರಿಯಿಸಿದ ಶಮಿ:

ಪ್ರಮುಖ ವೆಬ್​ ಪೋರ್ಟಲ್​ವೊಂದು ಮೊಹಮ್ಮದ್ ಶಮಿ ಅವರು ಶೀಘ್ರದಲ್ಲೇ ಟೆಸ್ಟ್ ಕ್ರಿಕೆಟ್​ಗೆ ಗುಡ್ ಬೈ ಹೇಳಲಿದ್ದಾರೆ ಎಂಬ ಶೀರ್ಷಿಕೆಯಡಿಯಲ್ಲಿ ಸುದ್ದಿಯೊಂದನ್ನು ಪ್ರಕಟಿಸಿತ್ತು. ಈ ಸುದ್ದಿಯನ್ನು ಓದಿರುವ ಟೀಮ್ ಇಂಡಿಯಾ ವೇಗಿ, ಇದು ಸಂಪೂರ್ಣ ಸತ್ಯಕ್ಕೆ ದೂರ ಎಂದಿದ್ದಾರೆ. ಅಲ್ಲದೆ ಈ ಸುದ್ದಿಯ ಸ್ಕ್ರೀನ್ ಶಾಟ್​ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಆಕ್ರೋಶವನ್ನು ಹೊರಹಾಕಿದ್ದಾರೆ.

‘ತುಂಬಾ ಚೆನ್ನಾಗಿದೆ ಮಹಾರಾಜ್, ನಿಮ್ಮ ಕೆಲಸದ ದಿನಗಳನ್ನು ಎಣಿಸಿ ಮತ್ತು ಯಾವಾಗ ವಿದಾಯ ಹೇಳಬೇಕೆಂದು ಲೆಕ್ಕ ಹಾಕಿ, ನೀವು ನಂತರ ನಮ್ಮನ್ನು ನೋಡಿಕೊಳ್ಳಬಹುದು.’ ನಿಮ್ಮಂತಹ ಜನರು ಹಲವರ ಭವಿಷ್ಯವನ್ನು ಹಾಳು ಮಾಡಿದ್ದಾರೆ. ಕೆಲವೊಮ್ಮೆ ಒಳ್ಳೆಯದನ್ನು ಹೇಳಿ. ಇದು ಈ  ದಿನದ ಕೆಟ್ಟ ಸುದ್ದಿ ಎಂದು ಮೊಹಮ್ಮದ್ ಶಮಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯ ಸ್ಕ್ರೀನ್ ಶಾಟ್ ಹಂಚಿಕೊಂಡು ಆಕ್ರೋಶ ಹೊರಹಾಕಿದ್ದಾರೆ.

ಸದ್ಯ ಸನ್​ರೈಸರ್ಸ್ ಹೈದರಾಬಾದ್ ಪರ ಐಪಿಎಲ್ ಆಡುತ್ತಿರುವ ಮೊಹಮ್ಮದ್ ಶಮಿ ಇಂಗ್ಲೆಂಡ್ ವಿರುದ್ಧದ ಸರಣಿಗೆ ಆಯ್ಕೆಯಾಗುವ ವಿಶ್ವಾಸದಲ್ಲಿದ್ದಾರೆ. ಆದರೆ ಇತ್ತ ತಂಡದಲ್ಲಿದ್ದ ಹಿರಿಯ ಆಟಗಾರರು ನಿವೃತ್ತಿ ನೀಡಿರುವ ಕಾರಣ ಶಮಿಗೆ ಅವಕಾಶ ಸಿಗಲಿದೆಯಾ ಎಂಬುದೇ ಪ್ರಶ್ನೆ.

ಏಕೆಂದರೆ ಮೊಹಮ್ಮದ್ ಶಮಿ ಟೆಸ್ಟ್ ಕ್ರಿಕೆಟ್ ಆಡಿ ವರ್ಷಗಳೇ ಕಳೆದಿವೆ. 2023ರ ಏಕದಿನ ವಿಶ್ವಕಪ್ ವೇಳೆ ಗಾಯಗೊಂಡ ಬಳಿಕ ಶಮಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದಾದ ಬಳಿಕ ಅವರು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ.

ಇದನ್ನೂ ಓದಿ: IPL 2025: RCBಗೆ ಆಘಾತದ ಮೇಲೆ ಆಘಾತ: ಪ್ಲೇಆಫ್​ ಪಂದ್ಯಗಳಿಗೆ ಐವರು ಅಲಭ್ಯ!

2023 ರಲ್ಲಿ ಕೊನೆಯ ಟೆಸ್ಟ್ ಪಂದ್ಯವಾಡಿರುವ ಮೊಹಮ್ಮದ್ ಶಮಿ ಈವರೆಗೆ 64 ಮ್ಯಾಚ್​ಗಳಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ. ಈ ವೇಳೆ ಒಟ್ಟು 229 ವಿಕೆಟ್ ಕಬಳಿಸಿದ್ದಾರೆ. ಇದೀಗ 2 ವರ್ಷಗಳ ಬಳಿಕ ಮತ್ತೊಮ್ಮೆ ರೆಡ್ ಬಾಲ್ ಕ್ರಿಕೆಟ್​ನಲ್ಲಿ ಕಣಕ್ಕಿಳಿಯಲು ಶಮಿ ಸಜ್ಜಾಗಿದ್ದು, ಅದರಂತೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರಾ ಕಾದು ನೋಡಬೇಕಿದೆ.