India vs Pakistan: ತಂಡದ ಪ್ರದರ್ಶನದ ಬಗ್ಗೆ ಬೇಸರ ಹೊರಹಾಕಿದ ರೋಹಿತ್ ಶರ್ಮಾ

|

Updated on: Jun 10, 2024 | 7:57 AM

India vs Pakistan ICC T20 World Cup 2024: ಟಿ20 ವಿಶ್ವಕಪ್​ನ 19ನೇ ಪಂದ್ಯದಲ್ಲಿ ಭಾರತ ತಂಡವು ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನೀಡಿದ 120 ರನ್​ಗಳ ಸುಲಭ ಗುರಿ ಬೆನ್ನತ್ತಿದ ಪಾಕಿಸ್ತಾನ್ ತಂಡವು ಭಾರತೀಯ ಬೌಲರ್​ಗಳು ಕರಾರುವಾಕ್ ದಾಳಿಗೆ ರನ್​ ಗಳಿಸಲು ಪರದಾಡಿದರು. ಅಲ್ಲದೆ ಅಂತಿಮವಾಗಿ ಪಾಕ್ ಪಡೆ 6 ರನ್​ಗಳಿಂದ ಸೋಲೊಪ್ಪಿಕೊಂಡಿತು.

India vs Pakistan: ತಂಡದ ಪ್ರದರ್ಶನದ ಬಗ್ಗೆ ಬೇಸರ ಹೊರಹಾಕಿದ ರೋಹಿತ್ ಶರ್ಮಾ
Rohit Sharma
Follow us on

T20 World Cup 2024: ಟಿ20 ವಿಶ್ವಕಪ್​ನ 19ನೇ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ಭಾರತ ತಂಡ ಜಯಗಳಿಸಿದೆ. ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) 6 ರನ್​ಗಳ ಗೆಲುವು ದಾಖಲಿಸಿತು. ಈ ಗೆಲುವಿನ ಹೊರತಾಗಿಯೂ ನಾಯಕ ರೋಹಿತ್ ಶರ್ಮಾ ತಂಡದ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಬೇಸರ ಹೊರಹಾಕಿದ್ದಾರೆ.

ಪಂದ್ಯದ ಬಳಿಕ ಮಾತನಾಡಿದ ರೋಹಿತ್ ಶರ್ಮಾ, ಪಾಕ್ ವಿರುದ್ಧದ ಗೆಲುವು ಖುಷಿ ನೀಡಿದೆ. ಆದರೆ ನಾವು ಈ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಿಲ್ಲ ಎಂಬುದೇ ಸತ್ಯ. ನಮ್ಮ ಅರ್ಧ ಇನಿಂಗ್ಸ್ ಉತ್ತಮವಾಗಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ್ದೇವೆ. ಯಾರೂ ಸಹ ಉತ್ತಮ ಜೊತೆಯಾಟವಾಡಲಿಲ್ಲ.

ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಕಳೆದ ಪಂದ್ಯಕ್ಕೆ ಹೋಲಿಸಿದರೆ ಈ ಬಾರಿ ಉತ್ತಮ ಪಿಚ್ ಹೊಂದಿತ್ತು. ಹೀಗಾಗಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಬಹುದಾಗಿತ್ತು. ಆದರೆ ನಮ್ಮ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ವಿಫಲವಾದೆವು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಬೌಲರ್​ಗಳಿಗೆ ಬಹುಪರಾಕ್:

ನಮ್ಮ ಬೌಲಿಂಗ್ ವಿಭಾಗವು ಅತ್ಯುತ್ತಮ ಪ್ರದರ್ಶನ ನೀಡಿದೆ. ಇಂತಹ ಪ್ರದರ್ಶನ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ನಾವು ಬ್ಯಾಟಿಂಗ್​ನಲ್ಲಿ ಹೇಗೆ ಸಾಂಘಿಕ ಪ್ರದರ್ಶನ ನೀಡಬಲ್ಲದೊ, ಅದೇ ರೀತಿ ಬೌಲಿಂಗ್​ನಲ್ಲೂ ನೀಡಬಹುದು. ಇದಕ್ಕೆ ಸಾಕ್ಷಿ ಈ ಪಂದ್ಯ.

ಇಲ್ಲಿ ಪ್ರತಿಯೊಬ್ಬರ ಸಣ್ಣ ಕೊಡುಗೆಯು ದೊಡ್ಡ ಬದಲಾವಣೆಯನ್ನು ತರುತ್ತದೆ. ಅದರಲ್ಲೂ ಜಸ್​ಪ್ರೀತ್ ಬುಮ್ರಾ ಏನು ಮಾಡಬಹುದು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಾಗಿ ಅವರ ಬಗ್ಗೆ ಮಾತನಾಡಲು ಇಚ್ಛಿಸುವುದಿಲ್ಲ. ಇದೇ ಫಾರ್ಮ್​ ಅನ್ನು ಬುಮ್ರಾ ವಿಶ್ವಕಪ್​ನ ಉದ್ಧಕ್ಕೂ ಪ್ರದರ್ಶಿಸಲಿ ಎಂದು ಬಯಸುತ್ತೇನೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಇದು ಪ್ರಾರಂಭವಷ್ಟೇ, ಇನ್ನೂ ಬಹಳ ದೂರ ಕ್ರಮಿಸಬೇಕಿದೆ. ಹೀಗಾಗಿ ಭಾರತ ತಂಡವು ಇದೇ ಲಯವನ್ನು ಮುಂಬರುವ ಪಂದ್ಯಗಳಲ್ಲೂ ಮುಂದುವರೆಸುವ ವಿಶ್ವಾಸವಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಗೆದ್ದು ಬೀಗಿದ ಭಾರತ:

ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 19 ಓವರ್​ಗಳಲ್ಲಿ 119 ರನ್​ಗಳಿಸಿ ಆಲೌಟ್ ಆಯಿತು.

ಇದನ್ನೂ ಓದಿ: India vs Pakistan: ಪಾಕ್​ನ ಬಗ್ಗು ಬಡಿದು ವಿಶ್ವ ದಾಖಲೆ ಬರೆದ ಟೀಮ್ ಇಂಡಿಯಾ

120 ರನ್​ಗಳ ಸುಲಭ ಗುರಿ ಬೆನ್ನತ್ತಿದ ಪಾಕಿಸ್ತಾನ್ ವಿರುದ್ಧ ಭಾರತೀಯ ಬೌಲರ್​ಗಳು ಕರಾರುವಾಕ್ ದಾಳಿ ಸಂಘಟಿಸಿದ್ದರು. ಪರಿಣಾಮ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು ಪಾಕಿಸ್ತಾನ್ ತಂಡ ಕೇವಲ 113 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಟೀಮ್ ಇಂಡಿಯಾ 6 ರನ್​ಗಳ ರೋಚಕ ಜಯ ಸಾಧಿಸಿದೆ.