India vs Pakistan: ಟೀಮ್ ಇಂಡಿಯಾ ಕೈಯಲ್ಲಿ ಪಾಕಿಸ್ತಾನ್ ತಂಡದ ಟಿ20 ವಿಶ್ವಕಪ್ ಭವಿಷ್ಯ
ಟಿ20 ವಿಶ್ವಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಒಟ್ಟು 7 ಬಾರಿ ಸೆಣಸಿದೆ. ಈ ವೇಳೆ ಟೀಮ್ ಇಂಡಿಯಾ 5 ಬಾರಿ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಪಾಕಿಸ್ತಾನ್ ತಂಡ ಗೆದ್ದಿರುವುದು ಕೇವಲ ಒಂದು ಬಾರಿ ಮಾತ್ರ. ಇನ್ನೊಂದು ಪಂದ್ಯವು ಟೈನಲ್ಲಿ ಅಂತ್ಯಗೊಂಡಿತ್ತು. ಈ ಟೈ ಪಂದ್ಯದಲ್ಲಿ ಬೌಲ್ ಔಟ್ ಮೂಲಕ ಭಾರತ ತಂಡ ಜಯ ಸಾಧಿಸಿತ್ತು.
T20 World Cup 2024: ಟಿ20 ವಿಶ್ವಕಪ್ನ ಬಹುನಿರೀಕ್ಷಿತ ಪಂದ್ಯಕ್ಕಾಗಿ ಕ್ಷಣಗಣನೆ ಶುರುವಾಗಿದೆ. ನ್ಯೂಯಾರ್ಕ್ನ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಕಣಕ್ಕಿಳಿಯಲಿದೆ. ವಿಶೇಷ ಎಂದರೆ ಈ ಪಂದ್ಯವು ಪಾಕ್ ಪಾಲಿಗೆ ನಿರ್ಣಾಯಕ. ಏಕೆಂದರೆ ಈ ಮ್ಯಾಚ್ನಲ್ಲಿ ಪಾಕಿಸ್ತಾನ್ ತಂಡ ಸೋತರೆ ಟಿ20 ವಿಶ್ವಕಪ್ನಿಂದ ಹೊರಬೀಳುವುದು ಬಹುತೇಕ ಖಚಿತವಾಗಲಿದೆ.
ಅಂದರೆ ಯುಎಸ್ಎ ವಿರುದ್ಧ ಸೋತಿರುವ ಪಾಕ್ ಪಾಲಿಗೆ ಇಂದಿನ ಪಂದ್ಯವು ನಿರ್ಣಾಯಕ. ಭಾರತದ ವಿರುದ್ಧ ಗೆದ್ದರೆ ಮಾತ್ರ ಮುಂದಿನ ಹಂತಕ್ಕೇರುವುದನ್ನು ಎದುರು ನೋಡಬಹುದು.
ಅಂಕಪಟ್ಟಿಯ ಲೆಕ್ಕಾಚಾರ:
ಭಾರತದ ವಿರುದ್ಧ ಪಾಕಿಸ್ತಾನ್ ಸೋತರೆ ಟಿ20 ವಿಶ್ವಕಪ್ನಿಂದ ಹೊರಬೀಳುವ ಸಾಧ್ಯತೆ ಹೆಚ್ಚು. ಏಕೆಂದರೆ ಗ್ರೂಪ್-ಎ ಅಂಕ ಪಟ್ಟಿಯಲ್ಲಿ 2 ಗೆಲುವು ದಾಖಲಿಸಿರುವ ಯುಎಸ್ಎ ತಂಡ ಅಗ್ರಸ್ಥಾನದಲ್ಲಿದೆ.
ಇನ್ನು 1 ಗೆಲುವಿನೊಂದಿಗೆ ಭಾರತ ತಂಡ ದ್ವಿತೀಯ ಸ್ಥಾನದಲ್ಲಿದೆ. ಇಂದು ಪಾಕ್ ವಿರುದ್ಧ ಭಾರತ ತಂಡ ಗೆದ್ದರೆ 2 ಜಯಗಳೊಂದಿಗೆ ಮೊದಲ ಸ್ಥಾನಕ್ಕೇರಲಿದೆ. ಅತ್ತ 2 ಸೋಲುಗಳೊಂದಿಗೆ ಪಾಕಿಸ್ತಾನ್ ತಂಡ 4ನೇ ಅಥವಾ 5ನೇ ಸ್ಥಾನಕ್ಕೆ ಕುಸಿಯಬಹುದು. ಅಲ್ಲದೆ ಕೊನೆಯ ಎರಡು ಪಂದ್ಯಗಳಲ್ಲಿ ಪಾಕಿಸ್ತಾನ್ ತಂಡ ಗೆದ್ದರೂ ಯುಎಸ್ಎ ಗಿಂತ ಹೆಚ್ಚಿನ ನೆಟ್ ರನ್ ರೇಟ್ ಹೊಂದಿದ್ದರೆ ಮಾತ್ರ ಮುಂದಿನ ಹಂತಕ್ಕೇರಬಹುದು.
ಆದರೆ ಅತ್ತ ಟೀಮ್ ಇಂಡಿಯಾ ಮತ್ತು ಯುಎಸ್ಎ ತಂಡಗಳು 3 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಪಾಕಿಸ್ತಾನ್ ತಂಡ ಹೊರಬೀಳುವುದು ಖಚಿತವಾಗಲಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಪಾಕಿಸ್ತಾನ್ ಗೆದ್ದರೆ ಮಾತ್ರ ಸೂಪರ್-8 ಹಂತಕ್ಕೇರಲು ಅವಕಾಶ ಇರಲಿದೆ ಎನ್ನಬಹುದು.
ಸೂಪರ್-8 ಹಂತ ಪ್ರವೇಶ ಹೇಗೆ?
ಈ ಬಾರಿಯ ವಿಶ್ವಕಪ್ನಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿದಿದೆ. ಈ ತಂಡಗಳನ್ನು 4 ಗುಂಪುಗಳಾಗಿ ವಿಂಗಡಿಸಲಾಗಿದೆ. ಈ ನಾಲ್ಕು ಗುಂಪುಗಳಿಗೂ ಪ್ರತ್ಯೇಕ ಪಾಯಿಂಟ್ಸ್ ಟೇಬಲ್ ಇದ್ದು, ಈ ಅಂಕ ಪಟ್ಟಿಗಳಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಸೂಪರ್-8 ಹಂತಕ್ಕೇರಲಿದೆ.
ಇದನ್ನೂ ಓದಿ: ಬಾಬರ್ ದಾಖಲೆ ಮುರಿಯುವವರು ಯಾರು? ವಿರಾಟ್ ಕೊಹ್ಲಿ ಅಥವಾ ರೋಹಿತ್ ಶರ್ಮಾ
ಇದೀಗ ಗ್ರೂಪ್-ಎ ಪಾಯಿಂಟ್ಸ್ ಟೇಬಲ್ನ ಮೊದಲೆರಡು ಸ್ಥಾನಗಳಲ್ಲಿ ಯುಎಸ್ಎ ಮತ್ತು ಭಾರತ ತಂಡವಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಪಾಕಿಸ್ತಾನ್ ಗೆಲ್ಲುವುದು ಅನಿವಾರ್ಯ. ಹೀಗಾಗಿಯೇ ಪಾಕಿಸ್ತಾನ್ ತಂಡದ ಟಿ20 ವಿಶ್ವಕಪ್ ಭವಿಷ್ಯ ಟೀಮ್ ಇಂಡಿಯಾ ಕೈಯಲ್ಲಿದೆ ಎನ್ನಬಹುದು.