India vs Pakistan: ಪಾಕ್ನ ಬಗ್ಗು ಬಡಿದು ವಿಶ್ವ ದಾಖಲೆ ಬರೆದ ಟೀಮ್ ಇಂಡಿಯಾ
T20 World Cup 2024: ಟಿ20 ವಿಶ್ವಕಪ್ನ 19ನೇ ಪಂದ್ಯದಲ್ಲಿ ರೋಚಕ ಜಯ ಸಾಧಿಸಿ ಟೀಮ್ ಇಂಡಿಯಾ ಹೊಸ ವಿಶ್ವ ದಾಖಲೆ ನಿರ್ಮಿಸಿದೆ. ಅದು ಸಹ ಪಾಕಿಸ್ತಾನ್ ತಂಡದ ಹೆಸರಿನಲ್ಲಿದ್ದ ವರ್ಲ್ಡ್ ರೆಕಾರ್ಡ್ ಅನ್ನು ಬ್ರೇಕ್ ಮಾಡುವ ಮೂಲಕ ಎಂಬುದು ವಿಶೇಷ. ಆ ದಾಖಲೆ ಯಾವುದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ...
Updated on: Jun 10, 2024 | 7:33 AM

T20 World Cup 2024: ನ್ಯೂಯಾರ್ಕ್ನ ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿ ನಡೆದ ರಣರೋಚಕ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಗೆದ್ದು ಬೀಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ (Pakistan) ತಂಡದ ನಾಯಕ ಬಾಬರ್ ಆಝಂ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ.

ಆರಂಭಿಕ ಆಟಗಾರ ವಿರಾಟ್ ಕೊಹ್ಲಿ (4) ಬೇಗನೆ ನಿರ್ಗಮಿಸಿದರೆ, ರೋಹಿತ್ ಶರ್ಮಾ 13 ರನ್ಗಳಿಸಿ ಔಟಾದರು. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಿಷಭ್ ಪಂತ್ 31 ಎಸೆತಗಳಲ್ಲಿ 6 ಫೋರ್ಗಳೊಂದಿಗೆ 41 ರನ್ ಬಾರಿಸಿದರು. ಇದಾಗ್ಯೂ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ 19 ಓವರ್ಗಳಲ್ಲಿ 119 ರನ್ಗಳಿಸಿ ಭಾರತ ತಂಡವು ಆಲೌಟ್ ಆಯಿತು.

120 ರನ್ಗಳ ಸುಲಭ ಗುರಿ ಬೆನ್ನತ್ತಿದ ಪಾಕಿಸ್ತಾನ್ ತಂಡವು ಉತ್ತಮ ಆರಂಭವನ್ನೇ ಪಡೆದಿತ್ತು. 11 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 89 ರನ್ ಕಲೆಹಾಕಿದ್ದರು. ಈ ಹಂತದಲ್ಲಿ ದಾಳಿಗಿಳಿದ ಹಾರ್ದಿಕ್ ಪಾಂಡ್ಯ ಹಾಗೂ ಜಸ್ಪ್ರೀತ್ ಬುಮ್ರಾ ಇಡೀ ಪಂದ್ಯದ ಚಿತ್ರಣ ಬದಲಿಸಿದರು. ಅದರಲ್ಲೂ ಕೊನೆಯ ಓವರ್ಗಳ ವೇಳೆ ಬುಮ್ರಾ ಕಮಾಲ್ ಮಾಡಿದರು. ಪರಿಣಾಮ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು ಪಾಕಿಸ್ತಾನ್ 113 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಟೀಮ್ ಇಂಡಿಯಾ 6 ರನ್ಗಳ ರೋಚಕ ಜಯ ಸಾಧಿಸಿತು.

ಈ ಗೆಲುವಿನೊಂದಿಗೆ ಟಿ20 ವಿಶ್ವಕಪ್ ಇತಿಹಾಸದಲ್ಲಿ ಒಂದೇ ತಂಡದ ವಿರುದ್ಧ ಅತೀ ಹೆಚ್ಚು ಜಯ ಸಾಧಿಸಿದ ವಿಶ್ವ ದಾಖಲೆಯೊಂದು ಟೀಮ್ ಇಂಡಿಯಾ ಪಾಲಾಯಿತು. ಅದು ಕೂಡ ಪಾಕಿಸ್ತಾನ್ ತಂಡದ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

ಅಂದರೆ ಟಿ20 ವಿಶ್ವಕಪ್ನಲ್ಲಿ ಒಂದೇ ತಂಡದ ವಿರುದ್ಧ ಅತೀ ಹೆಚ್ಚು ಬಾರಿ ಗೆದ್ದ ದಾಖಲೆ ಪಾಕ್ ತಂಡದ ಹೆಸರಿನಲ್ಲಿತ್ತು. ಬಾಂಗ್ಲಾದೇಶ್ ವಿರುದ್ಧ ಪಾಕಿಸ್ತಾನ್ ತಂಡ 6 ಬಾರಿ ಗೆಲ್ಲುವ ಮೂಲಕ ಈ ವಿಶ್ವ ದಾಖಲೆ ನಿರ್ಮಿಸಿದ್ದರು.

ಇದೀಗ ಪಾಕಿಸ್ತಾನ್ ತಂಡವನ್ನು ಬಗ್ಗು ಬಡಿದು ಟೀಮ್ ಇಂಡಿಯಾ ಹೊಸ ಇತಿಹಾಸ ನಿರ್ಮಿಸಿದೆ. ಟಿ20 ವಿಶ್ವಕಪ್ನಲ್ಲಿ ಪಾಕ್ ವಿರುದ್ಧ ಭಾರತ ತಂಡವು 7 ಬಾರಿ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲೇ ಒಂದೇ ತಂಡದ ವಿರುದ್ದ ಅತ್ಯಧಿಕ ಗೆಲುವು ದಾಖಲಿಸಿದ ವಿಶ್ವ ದಾಖಲೆಯನ್ನು ಭಾರತೀಯ ಪಡೆ ತಮ್ಮದಾಗಿಸಿಕೊಂಡಿದೆ.









