ಆಗಸ್ಟ್ 28 ರಂದು ನಡೆಯಲಿರುವ ಭಾರತ-ಪಾಕಿಸ್ತಾನ್ ನಡುವಣ ಏಷ್ಯಾಕಪ್ ಟಿ20 ಕ್ರಿಕೆಟ್ ಕದನಕ್ಕಾಗಿ ದಿನಗಣನೆ ಶುರುವಾಗಿದೆ. ಈಗಾಗಲೇ ಉಭಯ ತಂಡಗಳು ಬಲಿಷ್ಠ ತಂಡಗಳನ್ನೇ ಪ್ರಕಟಿಸಿದ್ದು, ಅದರಲ್ಲೂ ಪಾಕಿಸ್ತಾನ್ ತಂಡವು ಕಳೆದ ಬಾರಿ ಟಿ20 ವಿಶ್ವಕಪ್ನಲ್ಲಿ ಆಡಿದ ಆಟಗಾರರನ್ನೇ ಈ ಸಲ ಕೂಡ ತಂಡಕ್ಕೆ ಆಯ್ಕೆ ಮಾಡಿಕೊಂಡಿದೆ. ಅಂದರೆ ಭಾರತದ ವಿರುದ್ದ ಟಿ20 ವಿಶ್ವಕಪ್ 2021 ರಲ್ಲಿ ಆಡಿದ ಬಹುತೇಕ ಆಟಗಾರರು ಈ ಬಾರಿ ಕೂಡ ಏಷ್ಯಾಕಪ್ನಲ್ಲಿ ಕಣಕ್ಕಿಳಿಯಲಿದ್ದಾರೆ. ಇತ್ತ ಟೀಮ್ ಇಂಡಿಯಾ ಕೆಲ ಬದಲಾವಣೆಗಳನ್ನು ಮಾಡಿಕೊಂಡಿದ್ದು, ಈ ಮೂಲಕ ಕಳೆದ ಬಾರಿಯ ಸೋಲಿನ ಸೇಡನ್ನು ತೀರಿಸಿಕೊಳ್ಳುವ ತವಕದಲ್ಲಿದೆ.
ಇಲ್ಲಿ ಮುಖ್ಯವಾಗಿ ಟೀಮ್ ಇಂಡಿಯಾ ನಾಯಕ ಬದಲಾಗಿದೆ. ಅಂದರೆ ಟಿ20 ವಿಶ್ವಕಪ್ ವೇಳೆ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಿದ್ದರು. ಇದೀಗ ರೋಹಿತ್ ಶರ್ಮಾ ಭಾರತ ತಂಡದ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಟೀಮ್ ಇಂಡಿಯಾದಲ್ಲಿ ಈ ಬಾರಿ ವೇಗಿ ಜಸ್ಪ್ರೀತ್ ಬುಮ್ರಾ ಕಾಣಿಸಿಕೊಳ್ಳುತ್ತಿಲ್ಲ. ಹಾಗೆಯೇ ಸ್ಪಿನ್ನರ್ ಯುಜುವೇಂದ್ರ ಚಹಲ್ ತಂಡಕ್ಕೆ ಮರಳಿದ್ದಾರೆ. ಇದಲ್ಲದೆ ತಂಡದಲ್ಲಿ ಹೊಸ ಫಿನಿಶರ್ ಆಗಿ ದಿನೇಶ್ ಕಾರ್ತಿಕ್ ಕಾಣಿಸಿಕೊಂಡಿದ್ದಾರೆ. ಜೊತೆಗೆ ದೀಪಕ್ ಹೂಡಾ, ಅವೇಶ್ ಖಾನ್, ಅರ್ಷದೀಪ್ ಸಿಂಗ್ ಹಾಗೂ ರವಿ ಬಿಷ್ಣೋಯ್ ಅವರ ಎಂಟ್ರಿಯಾಗಿದೆ. ಹೀಗಾಗಿ ಈ ಬಾರಿ ಪ್ಲೇಯಿಂಗ್ ಇಲೆವೆನ್ನಲ್ಲೂ ಮಹತ್ವದ ಬದಲಾವಣೆಯಾಗಲಿದೆ.
ಅತ್ತ ಪಾಕಿಸ್ತಾನ್ ತಂಡದಿಂದ ಆಲ್ರೌಂಡರ್ ಶೊಯೇಬ್ ಮಲಿಕ್ ಹಾಗೂ ವೇಗಿ ಹಸನ್ ಅಲಿ ಹೊರಬಿದ್ದಿದ್ದಾರೆ. ಅವರ ಬದಲಿಗೆ ಯುವ ವೇಗಿ ನಸೀಮ್ ಶಾ ಹಾಗೂ ಸ್ಪಿನ್ನರ್ ಉಸ್ಮಾನ್ ಖಾದಿರ್ ಸ್ಥಾನ ಪಡೆದಿದ್ದಾರೆ. ಇನ್ನುಳಿದಂತೆ ಟಿ20 ವಿಶ್ವಕಪ್ನಲ್ಲಿ ಆಡಿದ ಬಳಗವನ್ನೇ ಇಲ್ಲೂ ಕೂಡ ಮುಂದುವರೆಸಿದ್ದಾರೆ.
ಇಲ್ಲಿ ಮೇಲ್ನೋಟಕ್ಕೆ ಉಭಯ ತಂಡಗಳು ಬಲಿಷ್ಠವಾಗಿದ್ದು, ಅದರಲ್ಲೂ ಟೀಮ್ ಇಂಡಿಯಾ ಈ ಬಾರಿ ಪ್ರಮುಖ ಬದಲಾವಣೆ ಮಾಡಿಕೊಂಡು ಮತ್ತಷ್ಟು ಬಲಾರ್ಢ್ಯವಾಗಿ ಕಾಣಿಸಿಕೊಂಡಿದೆ. ಹೀಗಾಗಿ ದುಬೈ ಇಂಟರ್ನ್ಯಾಷನಲ್ ಮೈದಾನದಲ್ಲಿ ಭಾನುವಾರ (ಆಗಸ್ಟ್ 28) ನಡೆಯಲಿರುವ ಈ ಪಂದ್ಯದಲ್ಲಿ ರೋಚಕ ಹೋರಾಟವನ್ನಂತು ನಿರೀಕ್ಷಿಸಬಹುದು.
ಏಷ್ಯಾಕಪ್ಗಾಗಿ ಪಾಕಿಸ್ತಾನ್ ತಂಡ ಹೀಗಿದೆ:
ಬಾಬರ್ ಆಜಂ (ನಾಯಕ), ಶಾದಾಬ್ ಖಾನ್ (ಉಪನಾಯಕ), ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್, ವಾಸಿಮ್ ಜೂನಿಯರ್, ನಸೀಮ್ ಶಾ, ಶಾಹೀನ್ ಶಾ ಆಫ್ರಿದಿ, ಶಾನವಾಜ್ ದಹಾನಿ ಮತ್ತು ಉಸ್ಮಾನ್ ಖಾದಿರ್.
ಏಷ್ಯಾಕಪ್ಗಾಗಿ ಟೀಮ್ ಇಂಡಿಯಾ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಯುಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್.
ಮೀಸಲು ಆಟಗಾರರು: ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್ ಹಾಗೂ ದೀಪಕ್ ಚಹರ್.