Asia Cup 2022: ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಇಂದು ನಡೆಯಲಿರುವ ಏಷ್ಯಾಕಪ್ನ 2ನೇ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ್ (India vs Pakistan) ತಂಡಗಳು ಮುಖಾಮುಖಿಯಾಗಲಿದೆ. ಈ ಹಿಂದೆ ಇದೇ ಮೈದಾನದಲ್ಲಿ ಟೀಮ್ ಇಂಡಿಯಾಗೆ ಪಾಕ್ ತಂಡವು 10 ವಿಕೆಟ್ಗಳಿಂದ ಹೀನಾಯ ಸೋಲುಣಿಸಿತ್ತು ಎಂಬುದು ವಿಶೇಷ. ಅಂದು ಕೂಡ ಬಲಿಷ್ಠ ಪಡೆಯೊಂದಿಗೆ ಕಣಕ್ಕಿಳಿದಿದ್ದ ಟೀಮ್ ಇಂಡಿಯಾ (Team India) ಪಾಲಿಗೆ ಶಾಪವಾಗಿದ್ದು ಟಾಸ್ ಎನ್ನಬಹುದು. ಏಕೆಂದರೆ ಟಾಸ್ ಗೆದ್ದ ನಾಯಕ ಬಾಬರ್ ಆಜಂ ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಟೀಮ್ ಇಂಡಿಯಾವನ್ನು ಕೇವಲ 151 ರನ್ಗಳಿಗೆ ನಿಯಂತ್ರಿಸಿತು. ಅಲ್ಲದೆ 17.5 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೇ ಚೇಸ್ ಮಾಡಿ ಭರ್ಜರಿ ಜಯ ಸಾಧಿಸಿತ್ತು. ಇಲ್ಲಿ ಟೀಮ್ ಇಂಡಿಯಾ ಪಾಕ್ ತಂಡದ ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗದಿರಲು ಮುಖ್ಯ ಕಾರಣ ಇಬ್ಬನಿ. 2ನೇ ಇನಿಂಗ್ಸ್ ವೇಳೆ ದುಬೈನಲ್ಲಿ ಕಂಡು ಬರುವ ಇಬ್ಬನಿ ಟಾಸ್ ಗೆದ್ದ ತಂಡಕ್ಕೆ ಪ್ಲಸ್ ಪಾಯಿಂಟ್ ಎಂದೇ ಹೇಳಬಹುದು. ಇದಕ್ಕೆ ಸಾಕ್ಷಿಯೇ ಈ ಅಂಕಿ ಅಂಶಗಳು.
ಅಂದರೆ ದುಬೈ ಇಂಟರ್ನ್ಯಾಷನಲ್ ಮೈದಾನದಲ್ಲಿ ಟಾಸ್ ಗೆದ್ದ ತಂಡವು ಬೌಲಿಂಗ್ ಅನ್ನೇ ಆಯ್ದುಕೊಳ್ಳುತ್ತದೆ. ಏಕೆಂದರೆ 2ನೇ ಇನಿಂಗ್ಸ್ ವೇಳೆ ಇಬ್ಬನಿ ಇರುವುದರಿಂದ ಬೌಲಿಂಗ್ ಮಾಡುವುದು ಕೂಡ ಕಷ್ಟಕರ. ಅದರಲ್ಲೂ ಬೌಲರ್ಗಳಿಗೆ ಚೆಂಡಿನ ಮೇಲೆ ನಿಯಂತ್ರಣ ಹೊಂದಲು ಸಾಧ್ಯವಾಗುವುದಿಲ್ಲ. ಇದರ ಸಂಪೂರ್ಣ ಲಾಭ ಪಡೆಯುವ ಬ್ಯಾಟ್ಸ್ಮನ್ಗಳು ಸುಲಭವಾಗಿ ಬೃಹತ್ ಮೊತ್ತವನ್ನು ಚೇಸ್ ಮಾಡುತ್ತಾರೆ.
ಇದಕ್ಕೆ ಸಾಕ್ಷಿಯೇ ಶನಿವಾರ ದುಬೈ ಪಿಚ್ನಲ್ಲಿ ನಡೆದ ಅಫ್ಘಾನಿಸ್ತಾನ್ ಹಾಗೂ ಶ್ರೀಲಂಕಾ ನಡುವಣ ಪಂದ್ಯ. ಈ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ್ ತಂಡವು ಶ್ರೀಲಂಕಾವನ್ನು 105 ರನ್ಗಳಿಗೆ ಆಲೌಟ್ ಮಾಡಿತು. ಅಲ್ಲದೆ 10.1 ಓವರ್ಗಳಲ್ಲಿ ಚೇಸ್ ಮಾಡುವ ಮೂಲಕ ಭರ್ಜರಿ ಜಯ ಸಾಧಿಸಿತ್ತು.
ಅಂದರೆ ದುಬೈ ಪಿಚ್ನಲ್ಲಿ ಆಡಲಾದ ಕಳೆದ 7 ಪಂದ್ಯಗಳಲ್ಲೂ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ತಂಡಗಳೇ ಗೆದ್ದಿದೆ. ಹೀಗಾಗಿ ಭಾರತ-ಪಾಕ್ ನಡುವಣ ಪಂದ್ಯದಲ್ಲಿ ಟೀಮ್ ಇಂಡಿಯಾ ಪಾಲಿಗೆ ಟಾಸ್ ನಿರ್ಣಾಯಕ ಎಂದೇ ಹೇಳಬಹುದು.