ಪ್ರಸ್ತುತ ಭಾರತದಲ್ಲಿ ಐಪಿಎಲ್ (IPL 2024) ಜ್ವರ ಶುರುವಾಗಿದೆ. ಕೆಲವೇ ದಿನಗಳಲ್ಲಿ ವಿಶ್ವ ಕ್ರಿಕೆಟ್ನ ಸ್ಟಾರ್ ಕ್ರಿಕೆಟಿಗರು 10 ತಂಡಗಳ ಪರ ಕಣಕ್ಕಿಳಿಯಲ್ಲಿದ್ದಾರೆ. ಈ ಮಿಲಿಯನ್ ಡಾಲರ್ ಟೂರ್ನಿ ಮುಗಿದ ಕೂಡಲೇ ಅಭಿಮಾನಿಗಳಿಗೆ ಮತ್ತೊಂದು ರಸದೌತಣ ಸಿಗಲಿದೆ. ಅದೇ ಟಿ20 ವಿಶ್ವಕಪ್ (T20 World Cup 2024). ಈ ಬಾರಿಯ ಟಿ20 ವಿಶ್ವಕಪ್ಗೆ ವೆಸ್ಟ್ ಇಂಡೀಸ್ ಹಾಗೂ ಅಮೇರಿಕಾ ಜಂಟಿಯಾಗಿ ಆತಿಥ್ಯವಹಿಸುತ್ತಿವೆ. ಈಗಾಗಲೇ ಈ ಚುಟುಕು ಸಮರದ ವೇಳಾಪಟ್ಟಿ ಕೂಡ ಬಿಡುಗಡೆಯಾಗಿದೆ. ಈ ಮೂಲಕ ಇಡೀ ವಿಶ್ವವೇ ಎದುರು ನೋಡುತ್ತಿರುವ ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವಿನ ವಿಶ್ವಕಪ್ ಫೈಟ್ ಪಂದ್ಯದ ದಿನಾಂಕವೂ ಬಹಿರಂಗಪಡಿಸಲಾಗಿದೆ. ಇದೀಗ ಆ ದಿನಕ್ಕಾಗಿ ಕಾಯುತ್ತಿರುವ ಕೋಟ್ಯಾಂತರ ಅಭಿಮಾನಿಗಳಿಗೆ, ಈ ಪಂದ್ಯದ ಟಿಕೆಟ್ ದರ ನೀಡಿರುವ ಶಾಕ್ ಅಷ್ಟಿಷ್ಟಲ್ಲ.
2024 ರ ವಿಶ್ವಕಪ್ ಆರಂಭಕ್ಕೆ ಇನ್ನು ತಿಂಗಳಗಳು ಬಾಕಿ ಉಳಿದಿವೆ. ಬಿಡುಗಡೆಯಾಗಿರುವ ವೇಳಾಪಟ್ಟಿಯ ಪ್ರಕಾರ ಈ ಚುಟುಕು ಮಾದರಿಯ ಮೊದಲ ಪಂದ್ಯ ಜೂನ್ 1 ರಂದು ನಡೆದರೆ, ಇದರ ಫೈನಲ್ ಪಂದ್ಯ ಅದೇ ತಿಂಗಳ 29 ರಂದು ನಡೆಯಲ್ಲಿದೆ. ಈ ಮೂಲಕ ಈ ವಿಶ್ವ ಸಮರಕ್ಕೆ ತೆರೆ ಬೀಳಲಿದೆ. ಜೂನ್ 1 ರಿಂದ ವಿಶ್ವಕಪ್ ಆರಂಭವಾದರೂ, ಅಭಿಮಾನಿಗಳಿಗೆ ವಿಶ್ವಕಪ್ ಮತ್ತೇರುವುದು ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದೊಂದಿಗೆ. ಈ ಪಂದ್ಯ ಜೂನ್ 9 ರಂದು ನಡೆಯಲ್ಲಿದ್ದು, ಈ ಪಂದ್ಯಕ್ಕೆ ನ್ಯೂಯಾರ್ಕ್ ಆತಿಥ್ಯವಹಿಸುತ್ತಿದೆ. ಅಲ್ಲದೆ ಎರಡೂ ತಂಡಗಳು ಒಂದೇ ಗುಂಪಿನಲ್ಲಿವೆ. ಹೀಗಾಗಿ ಲೀಗ್ ಸುತ್ತಿನಲ್ಲೇ ಬದ್ಧವೈರಿಗಳ ಕಾದಾಟ ನಡೆಯಲ್ಲಿದೆ. ಆದ್ದರಿಂದ ಈ ಪಂದ್ಯ ವೀಕ್ಷಿಸಲು ಈಗಿನಿಂದಲೇ ನೂಕು ನುಗ್ಗಲು ಶುರುವಾಗಿದೆ.
ಈ ನಡುವೆ ಐಸಿಸಿ ಟಿ20 ವಿಶ್ವಕಪ್ ಪಂದ್ಯಗಳ ಟಿಕೆಟ್ ಮಾರಾಟವನ್ನು ಆರಂಭಿಸಿದೆ. ಅದರಂತೆ ಭಾರತ ಹಾಗೂ ಪಾಕಿಸ್ತಾನ ಪಂದ್ಯವನ್ನು ಹೊರತುಪಡಿಸಿ ಉಳಿದ ಪಂದ್ಯಗಳ ಟಿಕೆಟ್ಗಳ ದರ ಜನಸಾಮನ್ಯರ ಕೈಗೆಟಕುವಂತಿದೆ. ಈ ಪಂದ್ಯಗಳ ಅತಿ ಕಡಿಮೆ ದರವನ್ನು 6 ಡಾಲರ್ಗಳಿಗೆ ಅಂದರೆ 500 ಭಾರತೀಯ ರೂಪಾಯಿಗೆ ನಿಗದಿ ಪಡಿಸಿರುವ ಐಸಿಸಿ, ಅತ್ಯಂತ ದುಬಾರಿ ಟಿಕೆಟ್ ಬೆಲೆಯನ್ನು 25 ಡಾಲರ್ ಅಂದರೆ 2071 ರೂಪಾಯಿಗೆ ನಿಗದಿಪಡಿಸಿದೆ. ಈ ಟಿಕೆಟ್ ದರ ಜನಸಾಮಾನ್ಯರ ಕೈಗೆಟಕುವಂತಿರುವುದರಿಂದ ಆರಂಭದಲ್ಲಿ ಕ್ರಿಕೆಟ್ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದರು. ಆದರೆ ಭಾರತ ಹಾಗೂ ಪಾಕಿಸ್ತಾನ ಪಂದ್ಯದ ಟಿಕೆಟ್ ದರ ಕೊಂಚ ಜಾಸ್ತಿ ಇರುವುದು ಅಭಿಮಾನಿಗಳಿಗೆ ಕೊಂಚ ಭಾರ ಎನಿಸಿತ್ತು.
ಸಾಮಾನ್ಯ ಪಂದ್ಯಗಳಿಗೆ ಕೈಗೆಟಕುವ ದರವನ್ನು ನಿಗದಿಪಡಿಸಿರುವ ಐಸಿಸಿ, ಭಾರತ ಹಾಗೂ ಪಾಕ್ ಪಂದ್ಯದ ಕನಿಷ್ಠ ಟಿಕೆಟ್ ದರವನ್ನು 175 ಡಾಲರ್ಗಳಿಗೆ ಅಂದರೆ 14450 ರೂಗಳಿಗೆ ನಿಗದಿಪಡಿಸಿದರೆ, ಗರಿಷ್ಠ ಟಿಕೆಟ್ ದರವನ್ನು 33000 ರೂಪಾಯಿಗಳಿಗೆ ಇರಿಸಿದೆ. ಈ ಮೊತ್ತವೇ ದುಬಾರಿಯಾಯ್ತು ಎಂದುಕೊಳ್ಳುತ್ತಿದ್ದ ಕ್ರಿಕೆಟ್ ಪ್ರಿಯರಿಗೆ ಈ ಪಂದ್ಯದ ಟಿಕೆಟ್ಗಳ ಮರು ಮಾರಾಟದ ಬೆಲೆ ತಲೆ ತಿರುಗುವಂತೆ ಮಾಡಿದೆ.
ಭಾರತ- ಪಾಕ್ ಪಂದ್ಯದ ಟಿಕೆಟ್ಗಳನ್ನು ಮರು ಮಾರಾಟಕ್ಕಿಟ್ಟಿರುವ StubHub ಮತ್ತು SeatGeek ನಂತಹ ಪ್ಲಾಟ್‌ಫಾರ್ಮ್‌ಗಳು ಈ ಟಿಕೆಟ್ಗಳ ಬೆಲೆಯನ್ನು ಗಗನಕ್ಕೇರಿಸಿವೆ. ಅದರಂತೆ ಒಂದು ಟಿಕೆಟ್ನ ಅಧಿಕೃತ ಬೆಲೆ 400 ಡಾಲರ್ ಆಗಿದ್ದರೆ, ಇದರ ಮರು ಮಾರಾಟದ ಬೆಲೆಯನ್ನು 40 ಸಾವಿರ ಡಾಲರ್ಗಳಿಗೆ ಅಂದರೆ 33 ಲಕ್ಷ ರೂಪಾಯಿಗಳಿಗೆ ಏರಿಸಿವೆ. ಇದಕ್ಕೆ ಇತರ ಶುಲ್ಕವೂ ಸೇರಿದರೆ ಒಂದು ಟಿಕೆಟ್ನ ಒಟ್ಟು ಮೊತ್ತ 41 ಲಕ್ಷ ರೂಪಾಯಿಗಳಾಗಲಿದೆ.
ಯುಎಸ್ಎ ಟುಡೆ ವರದಿಯ ಪ್ರಕಾರ, ಭಾರತ ಮತ್ತು ಪಾಕಿಸ್ತಾನ ಪಂದ್ಯದ ಅತ್ಯಂತ ದುಬಾರಿ ಟಿಕೆಟ್ 1,75,000 ಡಾಲರ್ ಆಗಿದೆ. ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ ಇದರ ಬೆಲೆ ಸುಮಾರು 1.4 ಕೋಟಿ ರೂ. ಇದಕ್ಕೆ ಕೆಲವು ಇತರ ಶುಲ್ಕಗಳನ್ನು ಸೇರಿಸಿದರೆ, ಒಟ್ಟು ಬೆಲೆ 1.86 ಕೋಟಿಗೆ ಏರುತ್ತದೆ. ಇಷ್ಟು ದುಡ್ಡು ಸಿಕ್ಕರೆ ಇಡೀ ಜೀವನವನ್ನೇ ಕಳೆಯಬಹುದು ಎಂದುಕೊಳ್ಳುವವರು ಒಂದೆಡೆಯಾದರೆ, ಅದೆಷ್ಟೇ ದುಬಾರಿಯಾಗಲಿ, ಆ ಟಿಕೆಟ್ ಅನ್ನು ಖರೀದಿಸಿ ಪಂದ್ಯವನ್ನು ನೋಡಲೇಬೇಕು ಎಂದುಕೊಳ್ಳುವವರ ಬಳಗವೇ ಹೆಚ್ಚಾಗಿದೆ. ಹೀಗಾಗಿ ಬದ್ಧವೈರಿಗಳ ಕಾಳಗದ ಟಿಕೆಟ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೆ ಸಾಗಿದೆ. ಮುಂದಿನ ದಿನಗಳಲ್ಲಿ ಈ ದರ ಇನ್ನೆಷ್ಟು ಹೆಚ್ಚಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:07 pm, Mon, 4 March 24