Ranji Trophy 2024: ಸೋತ ತಮಿಳುನಾಡು; 48ನೇ ಬಾರಿಗೆ ರಣಜಿ ಟ್ರೋಫಿ ಫೈನಲ್‌ಗೇರಿದ ಮುಂಬೈ
Ranji Trophy 2024: ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ತಮಿಳುನಾಡು ತಂಡವನ್ನು ಮಣಿಸಿದ ಅಜಿಂಕ್ಯ ರಹಾನೆ ನಾಯಕತ್ವದ ಮುಂಬೈ ತಂಡ ರಣಜಿ ಟ್ರೋಫಿಯಲ್ಲಿ ಫೈನಲ್ ಪ್ರವೇಶಿಸಿದೆ. ಸೆಮಿಫೈನಲ್ ಪಂದ್ಯದಲ್ಲಿ ಅಮೋಘ ಆಲ್ರೌಂಡರ್ ಆಟ ಪ್ರದರ್ಶಿಸಿದ ಶಾರ್ದೂಲ್ ಠಾಕೂರ್ ಮುಂಬೈ ತಂಡವನ್ನು 48ನೇ ಬಾರಿ ರಣಜಿ ಟ್ರೋಫಿ ಫೈನಲ್‌ಗೆ ತಲುಪಿಸಿದರು.
ಪ್ರಸಕ್ತ ಸಾಲಿನ ರಣಜಿ ಟ್ರೋಫಿ (Ranji Trophy 2024) ಸೆಮಿಫೈನಲ್ ಪಂದ್ಯದಲ್ಲಿ ತಮಿಳುನಾಡು ತಂಡವನ್ನು ಮಣಿಸಿದ ಅಜಿಂಕ್ಯ ರಹಾನೆ (Ajinkya Rahane) ನಾಯಕತ್ವದ ಮುಂಬೈ ತಂಡ (Tamil Nadu vs Mumbai) ರಣಜಿ ಟ್ರೋಫಿಯಲ್ಲಿ ಫೈನಲ್ ಪ್ರವೇಶಿಸಿದೆ. ಮುಂಬೈನ ಬಿಕೆಸಿಯಲ್ಲಿ ನಡೆದ ಪಂದ್ಯದಲ್ಲಿ ಸಾಯಿ ಕಿಶೋರ್ (Ravisrinivasan Sai Kishore) ನೇತೃತ್ವದ ತಂಡವನ್ನು ಮುಂಬೈ ಇನಿಂಗ್ಸ್ ಮತ್ತು 70 ರನ್‌ಗಳಿಂದ ಮಣಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ತಮಿಳುನಾಡು ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 146 ರನ್ ಗಳಿಸಿತ್ತು. ಇದಾದ ಬಳಿಕ ಮುಂಬೈ ತಂಡ ಮೊದಲ ಇನಿಂಗ್ಸ್‌ನಲ್ಲಿ 378 ರನ್ ಗಳಿಸಿ ಎದುರಾಳಿ ತಂಡಕ್ಕಿಂತ ದೊಡ್ಡ ಮುನ್ನಡೆ ಸಾಧಿಸಿತು. ಗುರಿ ಬೆನ್ನಟ್ಟಿದ ತಮಿಳುನಾಡು ತಂಡ ಮುಂಬೈ ಮುನ್ನಡೆ ಮೀರಲು ಸಾಧ್ಯವಾಗದೆ ಎರಡನೇ ಇನಿಂಗ್ಸ್ನಲ್ಲೂ 162 ರನ್‌ಗಳಿಗೆ ಇನ್ನಿಂಗ್ಸ್ ಮುಗಿಸಿ, ಫೈನಲ್ ರೇಸ್ನಿಂದ ಹೊರಬಿತ್ತು.
ಮುಂಬೈ ಗೆಲುವಿನ ಹೀರೋ ಠಾಕೂರ್
ಮೊದಲ ಇನಿಂಗ್ಸ್‌ನಲ್ಲಿ ಮುಂಬೈ ಪರ 9ನೇ ಕ್ರಮಾಂಕದಲ್ಲಿ ಭರ್ಜರಿ ಶತಕ ಸಿಡಿಸಿದ ಶಾರ್ದೂಲ್ ಠಾಕೂರ್ ಮುಂಬೈ ತಂಡದ ಗೆಲುವಿನ ಹೀರೋ ಆದರು. ಒಂದು ಹಂತದಲ್ಲಿ ಮುಂಬೈ ತಂಡ 106 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿತ್ತು. ಆದರೆ ನಂತರ ಶಾರ್ದೂಲ್ ಠಾಕೂರ್ ಮತ್ತು ತನುಷ್ ಕೋಟ್ಯಾನ್ ಅತ್ಯುತ್ತಮ ಇನ್ನಿಂಗ್ಸ್ ಆಡಿದರು. ಶಾರ್ದೂಲ್ ಠಾಕೂರ್ 104 ಎಸೆತಗಳಲ್ಲಿ 109 ರನ್ ಗಳಿಸಿದರು. ಇದು ಅವರ ಪ್ರಥಮ ದರ್ಜೆ ವೃತ್ತಿಜೀವನದ ಮೊದಲ ಶತಕವಾಗಿದೆ. 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಕೋಟ್ಯಾನ್ ಕೂಡ ಅಜೇಯ 89 ರನ್ ಗಳಿಸಿದರು.
𝐌𝐮𝐦𝐛𝐚𝐢 𝐜𝐫𝐮𝐢𝐬𝐞 𝐢𝐧𝐭𝐨 𝐭𝐡𝐞 𝐟𝐢𝐧𝐚𝐥! 👏
A superb performance from the @ajinkyarahane88-led side as they beat Tamil Nadu by an innings and 70 runs in Semi Final 2 of the @IDFCFIRSTBank #RanjiTrophy 🙌#MUMvTN | #SF2
Scorecard ▶️ https://t.co/9tosMLk9TT pic.twitter.com/bOikVOmBn1
— BCCI Domestic (@BCCIdomestic) March 4, 2024
ತತ್ತರಿಸಿದ ತಮಿಳುನಾಡು
ಮುಂಬೈ ಬೃಹತ್ ಮುನ್ನಡೆ ಸಾಧಿಸಿದ ಬಳಿಕ ತಮಿಳುನಾಡು ಬ್ಯಾಟ್ಸ್ಮನ್ಗಳು ಪ್ರತಿದಾಳಿ ನಡೆಸಲು ವಿಫಲರಾದರು. ವಿಕೆಟ್ ಕೀಪರ್ ಎನ್ ಜಗದೀಸನ್ ಅವರನ್ನು ಶಾರ್ದೂಲ್ ಠಾಕೂರ್ ಶೂನ್ಯಕ್ಕೆ ಔಟ್ ಮಾಡಿದರೆ, ಸಾಯಿ ಸುದರ್ಶನ್ ಕೂಡ ಠಾಕೂರ್ಗೆ ಬಲಿಯಾದರು. ಇದಾದ ಬಳಿಕ ವಾಷಿಂಗ್ಟನ್ ಸುಂದರ್ ಆಟವೂ 4 ರನ್‌ಗಳಿಗೆ ಅಂತ್ಯಗೊಂಡಿತು. ಬಾಬಾ ಇಂದರ್‌ಜಿತ್ 70 ರನ್ ಗಳಿಸುವ ಮೂಲಕ ವಿಕೆಟ್‌ನಲ್ಲಿ ಉಳಿಯುವ ಧೈರ್ಯ ತೋರಿಸಿದರು. ಆದರೆ ಅವರ ಇನ್ನಿಂಗ್ಸ್ ಕೊನೆಗೊಂಡ ತಕ್ಷಣ ತಮಿಳುನಾಡು, ಮುಂಬೈ ಬೌಲರ್ಗಳ ಎದುರು ಶರಣಾಯಿತು. ಮುಂಬೈ ಪರ ಶಮ್ಸ್ ಮುಲಾನಿ ಎರಡನೇ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಹಾಗೂ ಶಾರ್ದೂಲ್ ಠಾಕೂರ್ ಪಂದ್ಯದಲ್ಲಿ ನಾಲ್ಕು ವಿಕೆಟ್ ಕಬಳಿಸಿ ಮುಂಬೈ ತಂಡವನ್ನು 48ನೇ ಬಾರಿ ರಣಜಿ ಟ್ರೋಫಿ ಫೈನಲ್‌ಗೆ ತಲುಪಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:32 pm, Mon, 4 March 24