
ಹರ್ಮನ್‌ಪ್ರೀತ್ ಕೌರ್ (Harmanpreet Kaur) ನೇತೃತ್ವದ ಭಾರತ ಮಹಿಳಾ ತಂಡವು 2025 ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ (Women’s ODI World Cup 2025) ಗೆಲುವಿನ ಆರಂಭವನ್ನು ಪಡೆದುಕೊಂಡಿದೆ. ಸೆಪ್ಟೆಂಬರ್ 30 ರಂದು ನಡೆದಿದ್ದ ಶ್ರೀಲಂಕಾ ವಿರುದ್ಧದ ಟೂರ್ನಿಯ ಮೊದಲ ಪಂದ್ಯವನ್ನು ಟೀಂ ಇಂಡಿಯಾ 59 ರನ್‌ಗಳಿಂದ ಗೆದ್ದುಕೊಂಡಿದೆ. ಇದೀಗ ಟೀಂ ಇಂಡಿಯಾ ಟೂರ್ನಿಯಲ್ಲಿ ತನ್ನ ಎರಡನೇ ಪಂದ್ಯವನ್ನು ಅಕ್ಟೋಬರ್ 5 ರ ಭಾನುವಾರದಂದು ಪಾಕಿಸ್ತಾನ ವಿರುದ್ಧ (India vs Pakistan) ಆಡಲಿದೆ. ಪಾಕಿಸ್ತಾನ ತಂಡ ಭಾರತಕ್ಕೆ ಬರದ ಕಾರಣ ಈ ಪಂದ್ಯಕ್ಕಾಗಿ ಟೀಂ ಇಂಡಿಯಾ ಶ್ರೀಲಂಕಾಕ್ಕೆ ಹಾರಿದೆ. ಇದೀಗ ಉಭಯ ತಂಡಗಳು ಹೈವೋಲ್ಟೇಜ್ ಕಾಳಗದಲ್ಲಿ ಪರಸ್ಪರ ಕಾದಾಡಲು ಸಜ್ಜಾಗಿವೆ. ಆದರೆ ಈ ಪಂದ್ಯಕ್ಕೂ ಮುನ್ನ ಭಾರತ ಮಹಿಳಾ ತಂಡಕ್ಕೆ ಬಿಸಿಸಿಐ (BCCI), ಸ್ಪಷ್ಟ ನಿರ್ದೇಶನ ನೀಡಿದ್ದು, ಈ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಆಟಗಾರ್ತಿಯರೊಂದಿಗೆ ಕೈಕುಲುಕದಂತೆ ಆದೇಶ ನೀಡಿದೆ ಎಂದು ವರದಿಯಾಗಿದೆ.
ಕೆಲವೇ ದಿನಗಳ ಹಿಂದೆ, ಪುರುಷರ ಟಿ20 ಏಷ್ಯಾಕಪ್ ಟೂರ್ನಮೆಂಟ್ ಮುಕ್ತಾಯಗೊಂಡಿತು. ಈ ಟೂರ್ನಮೆಂಟ್‌ನಲ್ಲಿಯೂ ಟೀಂ ಇಂಡಿಯಾ ಮತ್ತು ಪಾಕಿಸ್ತಾನ ತಂಡಗಳು 3 ಬಾರಿ ಮುಖಾಮುಖಿಯಾಗಿದ್ದವು. ಆದರೆ, ಟೀಂ ಇಂಡಿಯಾ ಈ ಮೂರು ಬಾರಿಯೂ ಪಾಕಿಸ್ತಾನ ಆಟಗಾರರೊಂದಿಗೆ ಶೇಕ್ಹ್ಯಾಂಡ್ ಮಾಡಿರಲಿಲ್ಲ. ಈಗ ಮಹಿಳಾ ಬ್ರಿಗೇಡ್‌ಗೂ ಅದೇ ರೀತಿ ನಡೆದುಕೊಳ್ಳುವಂತೆ ಬಿಸಿಸಿಐ ತಿಳಿಸಿದೆ ಎಂದು ವರದಿಯಾಗಿದೆ.
ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವು ಅಕ್ಟೋಬರ್ 5 ರ ಭಾನುವಾರದಂದು ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ. ಬಿಸಿಸಿಐ ಮೂಲಗಳ ಪ್ರಕಾರ, ಕೊಲಂಬೊಗೆ ತೆರಳುವ ಮೊದಲು ಪಾಕಿಸ್ತಾನದ ಆಟಗಾರ್ತಿಯರೊಂದಿಗೆ ಕೈಕುಲುಕದಂತೆ ಹರ್ಮನ್‌ಪ್ರೀತ್ ಕೌರ್ ಪಡೆಗೆ ಸೂಚನೆ ನೀಡಲಾಗಿದೆ. ಟಾಸ್ ಸಮಯದಲ್ಲಿ ಮತ್ತು ಪಂದ್ಯದ ನಂತರ ಆಟಗಾರ್ತಿಯರೊಂದಿಗೆ ಹಸ್ತಲಾಘವ ಮಾಡಬಾರದು ಎಂದು ಹೇಳಲಾಗಿದೆ ಎಂದು ವರದಿಯಾಗಿದೆ.
ODI World Cup 2025: ವಿಶ್ವಕಪ್‌ನಲ್ಲಿ ಭಾರತ- ಪಾಕ್ ಮುಖಾಮುಖಿ; ಪಂದ್ಯ ಎಲ್ಲಿ, ಎಷ್ಟು ಗಂಟೆಗೆ ಆರಂಭ?
ಇನ್ನು ಉಭಯ ತಂಡಗಳ ನಡುವಿನ ಮುಖಾಮುಖಿ ದಾಖಲೆಯನ್ನು ನೋಡುವುದಾದರೆ.. ಕಳೆದ 20 ವರ್ಷಗಳಲ್ಲಿ ಭಾರತ ಮತ್ತು ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡಗಳು 11 ಬಾರಿ ಏಕದಿನ ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾಗಿದ್ದು, ಪ್ರತಿ ಬಾರಿಯೂ ಭಾರತ ಗೆಲುವು ಸಾಧಿಸಿದೆ. ಅಂದರೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಏಕದಿನ ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾಗುತ್ತಿರುವುದು ಇದು 12 ನೇ ಬಾರಿಯಾಗಿದೆ. ಇದುವರೆಗಿನ ಭಾರತೀಯ ಮಹಿಳಾ ತಂಡದ ದಾಖಲೆಯನ್ನು ಗಮನಿಸಿದರೆ ಬರುವ ಭಾನುವಾರ ಕೂಡ ಪಾಕಿಸ್ತಾನ ವಿರುದ್ಧ 12-0 ಅಂತರದ ಗೆಲುವು ಸಾಧಿಸುವುದು ಖಚಿತವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:27 pm, Sat, 4 October 25