ನ್ಯೂಜಿಂಡ್ನ ಮೌಂಟ್ ಮೌಂಗನುಯಿಯ ಬೇ ಓವಲ್ ಮೈದಾನದಲ್ಲಿ ನಡೆದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ (ICC Women’s World Cup 2022) ನಾಲ್ಕನೇ ಪಂದ್ಯದಲ್ಲಿಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ (India vs Pakistan) ಮಹಿಳಾ ತಂಡ ಗೆದ್ದು ಬೀಗಿದೆ. ಸ್ಮೃತಿ ಮಂದಾನ, ಸ್ನೇಹ್ ರಾಣ ಮತ್ತು ಪೂಜಾ ವಸ್ತ್ರಕರ್ (Pooja Vastrakar) ಅವರ ಆಕರ್ಷಕ ಅರ್ಧಶತಕದ ಜೊತೆ ಬೌಲರ್ಗಳ ಸಂಘಟಿತ ಪ್ರದರ್ಶನದಿಂದ ಭಾರತೀಯ ವನಿತೆಯರು 107 ರನ್ಗಳ ಅಮೋಘ ಗೆಲುವು ಸಾಧಿಸಿದರು. ಈ ಮೂಲಕ ಮಹಿಳಾ ಏಕದಿನ ವಿಶ್ವಕಪ್‌ನ ಮೊದಲ ಪಂದ್ಯವನ್ನೇ ಮಿಥಾಲಿ ಪಡೆ ಗೆದ್ದು ಭರ್ಜರಿ ಶುಭಾರಂಭ ಮಾಡಿದೆ. ಭಾರತ ನೀಡಿದ್ದ 245 ರನ್ಗಳ ಸವಾಲಿನ ಟಾರ್ಗೆಟ್ ಬೆನ್ನಟ್ಟಿದ ಪಾಕಿಸ್ತಾನ ನಿಧಾನಗತಿಯ ಆರಂಭ ಪಡೆದುಕೊಂಡಿತು. ಮೊದಲ 11 ಓವರ್ಗಳಲ್ಲಿ ಕಲೆಹಾಕಿದ್ದು ಕೇವಲ 28 ರನ್, ಜೊತೆಗೆ 11ನೇ ಓವರ್ನಲ್ಲಿ ಜವೇರಿಯಾ ಖಾನ್ (11) ವಿಕೆಟ್ ಕಳೆದುಕೊಂಡಿತು.
ನಾಯಕಿ ಬಿಸ್ಮಾ ಮರೂಫ್ ಆಟ ಕೇವಲ 15 ರನ್ಗೆ ಅಂತ್ಯವಾದರೆ, 30 ರನ್ ಗಳಿಸಿದ್ದ ಸಿದ್ರಾ ಅಮೀನ್ರನ್ನು ಪೆವಿಯನ್ಗೆ ಅಟ್ಟುವಲ್ಲಿ ಜೂಲನ್ ಗೋಸ್ವಾಮಿ ಯಶಸ್ವಿಯಾದರು. ನಂತರ ಬಂದ ಬ್ಯಾಟರ್ಗಳು ಯಾರೂ ಹೆಚ್ಚುಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಭಾರತೀಯ ಬೌಲಿಂಗ್ ಪಡೆಯನ್ನು ಎದುರಿಸಲಾಗದೆ ಪೆವಿಲಿಯನ್ ಸೇರಿಕೊಂಡರು. ಅಂತಿಮವಾಗಿ ಪಾಕಿಸ್ತಾನ 42.5 ಓವರ್ನಲ್ಲಿ 137 ರನ್ಗೆ ಆಲೌಟ್ ಆಯಿತು. ಭಾರತ ಪರ ರಾಜೇಶ್ವರಿ ಗಾಯಕ್ವಾಡ್ 4 ವಿಕೆಟ್ ಕಿತ್ತು ಮಿಂಚಿದರೆ, ಸ್ನೇಹ್ ರಾಣ ಹಾಗೂ ಗೋಸ್ವಾಮಿ ತಲಾ 2, ದೀಪ್ತಿ ಶರ್ಮಾ ಮತ್ತು ಮೇಗ್ನಾ ಸಿಂಗ್ ತಲಾ 1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ಭಾರತಕ್ಕೆ ಪಾಕಿಸ್ತಾನ ಆರಂಭದಲ್ಲೇ ಆಘಾತ ಉಂಟುಮಾಡಿತು. ಸ್ಟಾರ್ ಬ್ಯಾಟರ್ ಸ್ಮೃತಿ ಮಂದಾನ ಜೊತೆ ಓಪನರ್ ಆಗಿ ಕಣಕ್ಕಿಳಿದ ಶಫಾಲಿ ವರ್ಮಾ ಪಂದ್ಯದ ಮೂರನೇ ಓವರ್ನ ಡಯಾನ ಬೇಗ್ ಬೌಲಿಂಗ್ನಲ್ಲಿ ಶೂನ್ಯಕ್ಕೆ ಕ್ಲೀನ್ ಬೌಲ್ಡ್ ಆಗುವ ಮೂಲಕ ಪೆವಿಲಿಯನ್ ಸೇರಿಕೊಂಡರು. 4 ರನ್ಗೆ ಮೊದಲ ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ಮಂದಾನ ಹಾಗೂ ದೀಪ್ತಿ ಶರ್ಮಾ ಆಸರೆಯಾದರು. ನಿಧಾನಗತಿಯಲ್ಲಿ ಎಚ್ಚರಿಕೆಯಿಂದ ಬ್ಯಾಟ್ ಬೀಸಿದ ಈ ಜೋಡಿ 92 ರನ್ಗಳ ಕಾಣಿಕೆ ನೀಡಿತು. ಭರ್ಜರಿ ಫಾರ್ಮ್ನಲ್ಲಿರುವ ಮಂದಾನ 75 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ನೊಂದಿಗೆ 52 ರನ್ ಗಳಿಸಿದರೆ, ದೀಪ್ತಿ 57 ಎಸೆತಗಳಲ್ಲಿ 40 ರನ್ಗೆ ಔಟಾದರು. ಈ ಸಂದರ್ಭ ತಂಡಕ್ಕೆ ಆಧಾರವಾಗಬೇಕಿದ್ದ ಅನುಭವಿಗಳು ದಿಢೀರ್ ನಿರ್ಗಮಿಸಿದ್ದು ಭಾರತ ಪಾತಾಳಕ್ಕೆ ಕುಸಿಯಿತು. ನಾಯಕಿ ಮಿಥಾಲಿ ರಾಜ್ 9, ಹರ್ಮನ್ಪ್ರೀತ್ ಕೌರ್ 5 ಹಾಗೂ ರಿಚ್ಚಾ ಘೋಷ್ ಕೇವಲ 1 ರನ್ಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.
96 ರನ್ಗೆ 2ನೇ ವಿಕೆಟ್ ಕಳೆದುಕೊಂಡಿದ್ದ ಭಾರತ 114 ರನ್ ಆಗುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿತು. ಅಲ್ಪ ಮೊತ್ತಕ್ಕೆ ಆಲೌಟ್ ಆಗುವ ಭೀತಿಯಲ್ಲಿದ್ದ ಭಾರತಕ್ಕೆ ಈ ಸಂದರ್ಭ ಮಾನ ಉಳಿಸಿದ್ದು ಸ್ನೇಹ್ ರಾಣ ಹಾಗೂ ಪೂಜಾ ವಸ್ತ್ರಕರ್. ಇವರಿಬ್ಬರು ಹೆಚ್ಚು ಬಾಲ್ಗಳನ್ನು ತಿನ್ನದೆ ಸಿಂಗ್, ಡಬಲ್ ಪಡೆದುಕೊಂಡು ಭಾರತದ ರನ್ ಗತಿಯನ್ನು ಹೆಚ್ಚಿಸಿದರು. ಅಂತಿಮ ಹಂತದವರೆಗೂ ಕ್ರೀಸ್ನಲ್ಲೇ ಇದ್ದ ಇವರು ಬರೋಬ್ಬರಿ 122 ರನ್ಗಳ ಜೊತೆಯಾಟ ಆಡಿದರು. ಕೊನೇ ಹಂತದಲ್ಲಿ ಪೂಜಾ 59 ಎಸೆತಗಳಲ್ಲಿ 8 ಬೌಂಡರಿಯೊಂದಿಗೆ 67 ರನ್ಗೆ ಔಟಾದರು. ಸ್ನೇಹ್ 48 ಎಸೆತಗಳಲ್ಲಿ 4 ಬೌಂಡರಿ ಬಾರಿಸಿ ಅಜೇಯ 53 ರನ್ ಸಿಡಿಸಿದರು. ಭಾರತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 244 ರನ್ ಕಲೆಹಾಕಿದೆ. ಪಾಕ್ ಪರ ನಿದಾ ದರ್ ಹಾಗೂ ನಶ್ರಾ ಸಂಧು ತಲಾ 2 ವಿಕೆಟ್ ಕಿತ್ತರು.
107 ರನ್ಗಳ ಗೆಲುವಿನೊಂದಿಗೆ ಭಾರತ ಮಹಿಳಾ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಗೆದ್ದು ಭರ್ಜರಿ ಶುಭಾರಂಭ ಮಾಡಿದೆ. ಅಲ್ಲದೆ ಪಾಕ್ ವಿರುದ್ಧದ ತನ್ನ ಗೆಲುವಿನ ದಾಖಲೆಯನ್ನು ಮುಂದುವರೆಸಿದೆ. ವಿಶ್ವಕಪ್‌ನ 3 ಮುಖಾಮುಖಿ ಸೇರಿದಂತೆ ಪಾಕ್ ವಿರುದ್ಧ ಈ ಹಿಂದೆ ಆಡಿದ 10 ಏಕದಿನ ಪಂದ್ಯಗಳಲ್ಲೂ ಭಾರತ ಮಹಿಳಾ ತಂಡ ಗೆಲುವು ದಾಖಲಿಸಿದ ಅಜೇಯ ದಾಖಲೆ ಈ ಬಾರಿಯೂ ಮುಂದುವರೆಸಿದೆ.
ಭಾರತ ಮಹಿಳಾ ತಂಡ ತನ್ನ ಮುಂದಿನ ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ಧ ಆಡಲಿದ್ದು, ಇದು ಮಾರ್ಚ್ 10 ಗುರುವಾರದಂದು ನಡೆಯಲಿದೆ.
Mithali Raj: ಕ್ರಿಕೆಟ್ ದೇವರ ದಾಖಲೆ ಸರಿಗಟ್ಟಿದ ಮಿಥಾಲಿ ರಾಜ್: ಮೊದಲ ಪಂದ್ಯದಲ್ಲೇ ವಿಶ್ವ ದಾಖಲೆ ಬರೆದ ಭಾರತ
Ravindra Jadeja: ಜಡೇಜಾ ದ್ವಿಶತಕದ ಹೊಸ್ತಿಲಲ್ಲಿ ಭಾರತ ಡಿಕ್ಲೇರ್ ಘೋಷಿಸಿದ್ದು ಯಾಕೆ ಗೊತ್ತೇ?
Published On - 1:17 pm, Sun, 6 March 22