ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿಯ ಎರಡನೇ ಪಂದ್ಯ ಭಾನುವಾರ ನಡೆಯಲಿದೆ. ಈ ಪಂದ್ಯವು ಸೇಂಟ್ ಜಾರ್ಜ್ ಪಾರ್ಕ್ ಸ್ಟೇಡಿಯಂ, ಗ್ಕೆಬೆಹರಾದಲ್ಲಿ ನಡೆಯಲಿದೆ. ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ದಾಖಲಿಸಿದೆ. ಇದೀಗ ಎರಡನೇ ಪಂದ್ಯದಲ್ಲಿ ಉಭಯ ತಂಡಗಳು ಗೆಲ್ಲುವ ಇರಾದೆಯೊಂದಿಗೆ ಕಣಕ್ಕಿಳಿಯಲಿವೆ. ಇನ್ನು ಉಭಯ ತಂಡಗಳ ನಡುವಿನ ಮೊದಲ ಪಂದ್ಯ ರಾತ್ರಿ 8.30ಕ್ಕೆ ಆರಂಭವಾಗಿತ್ತು. ಆದರೆ ಎರಡನೇ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 7.30ಕ್ಕೆ ಆರಂಭವಾಗಲಿದೆ. ಆದರೆ ಅದಕ್ಕೂ ಮುನ್ನ ಎರಡನೇ ಪಂದ್ಯ ನಡೆಯಲ್ಲಿರವ ಸೇಂಟ್ ಜಾರ್ಜ್ ಪಾರ್ಕ್ ಸ್ಟೇಡಿಯಂ ಪಿಚ್ ಯಾರಿಗೆ ಸಹಕಾರಿ ಹಾಗೂ ಗ್ಕೆಬೆಹರಾ ಹವಾಮಾನ ಹೇಗಿರಲಿದೆ ಎಂಬ ವರದಿ ಇಲ್ಲಿದೆ.
ಅಕ್ಯುವೆದರ್ ಪ್ರಕಾರ, ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟಿ20 ಪಂದ್ಯ ಸ್ಥಳೀಯ ಕಾಲಮಾನ ಸಂಜೆ 4 ಗಂಟೆಗೆ ಆರಂಭವಾಗಲಿದೆ. ಸಂಜೆ 6 ಗಂಟೆಯವರೆಗೂ ಮಳೆಯಾಗುವ ಸಾಧ್ಯತೆ ಇಲ್ಲ. ಆದರೆ ರಾತ್ರಿ 7 ಗಂಟೆಯ ನಂತರ ಮಳೆಯಾಗುವ ಸಾಧ್ಯತೆ ಇದೆ. 7 ಗಂಟೆಗೆ ಶೇ.58 ಹಾಗೂ 8 ಗಂಟೆಗೆ ಶೇ.61 ಮಳೆಯಾಗುವ ಮುನ್ಸೂಚನೆ ಇದೆ. ಆದರೆ ಮಳೆ ಆರಂಭಕ್ಕೂ ಮುನ್ನ ಪಂದ್ಯ ಮುಗಿಯುವುದರಿಂದ ಅಭಿಮಾನಿಗಳು ಮಳೆಯ ಆತಂಕವಿಲ್ಲದೆ ಪಂದ್ಯವನ್ನು ವೀಕ್ಷಿಸಬಹುದು.
ನಾವು ಪಿಚ್ ಬಗ್ಗೆ ಮಾತನಾಡಿದರೆ, ಸೇಂಟ್ ಜಾರ್ಜ್ ಪಾರ್ಕ್ ಸ್ಟೇಡಿಯಂ ವೇಗದ ಬೌಲರ್‌ಗಳಿಗೆ ಹೆಚ್ಚು ನೆರವಾಗಲಿದೆ. ಹೀಗಾಗಿ ಬ್ಯಾಟ್ಸ್‌ಮನ್‌ಗಳು ಆರಂಭದಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಸ್ವಲ್ಪ ಸಮಯ ಪಿಚ್‌ನಲ್ಲಿ ಕಾಲಕಳೆದರೆ ಆ ನಂತರ ಬ್ಯಾಟ್ಸ್‌ಮನ್‌ಗಳು ಸರಾಗವಾಗಿ ರನ್ ಕಲೆಹಾಕಬಹುದಾಗಿದೆ. ಇನ್ನು ಸೇಂಟ್ ಜಾರ್ಜ್ ಪಾರ್ಕ್ನಲ್ಲಿ ಇದುವರೆಗೆ ನಾಲ್ಕು ಪಂದ್ಯಗಳು ನಡೆದಿವೆ. ಈ ಪೈಕಿ ಎರಡು ಬಾರಿ ಮೊದಲು ಬ್ಯಾಟ್ ಮಾಡಿದ ತಂಡ ಗೆದ್ದಿದ್ದರೆ, ಎರಡು ಬಾರಿ ಗುರಿ ಬೆನ್ನಟ್ಟಿದ ತಂಡ ಜಯಗಳಿಸಿದೆ. ಹೀಗಾಗಿ ಈ ಪಂದ್ಯದಲ್ಲಿ ಟಾಸ್ ಪ್ರಮಖ ಪಾತ್ರವಹಿಸುವುದಿಲ್ಲ.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಇದುವರೆಗೆ ಒಟ್ಟು 28 ಟಿ20 ಪಂದ್ಯಗಳು ನಡೆದಿವೆ. ಈ ಪೈಕಿ ಭಾರತ 16 ಪಂದ್ಯಗಳನ್ನು ಗೆದ್ದಿದ್ದರೆ, ದಕ್ಷಿಣ ಆಫ್ರಿಕಾ 11 ಪಂದ್ಯಗಳಲ್ಲಿ ಯಶಸ್ಸು ಕಂಡಿದೆ. ಒಂದು ಪಂದ್ಯ ಫಲಿತಾಂಶವಿಲ್ಲದೆ ಕೊನೆಗೊಂಡಿದೆ. ಇನ್ನು ದಕ್ಷಿಣ ಆಫ್ರಿಕಾದಲ್ಲಿ ಆಡಿದ 10 ಪಂದ್ಯಗಳಲ್ಲಿ ಭಾರತ 7 ಪಂದ್ಯಗಳನ್ನ ಗೆದ್ದಿದ್ದರೆ, ದಕ್ಷಿಣ ಆಫ್ರಿಕಾ 3 ಪಂದ್ಯಗಳನ್ನು ಗೆದ್ದಿದೆ.
ಭಾರತ ಸಂಭಾವ್ಯ ತಂಡ: ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಅಕ್ಸರ್ ಪಟೇಲ್, ಅರ್ಷದೀಪ್ ಸಿಂಗ್, ರವಿ ಬಿಷ್ಣೋಯ್, ಅವೇಶ್ ಖಾನ್, ವರುಣ್ ಚಕ್ರವರ್ತಿ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ