ಭಾರತ vs ಸೌತ್ ಆಫ್ರಿಕಾ ಟಿ20 ಪಂದ್ಯ ಎಷ್ಟು ಗಂಟೆಗೆ ಶುರು? ಇಲ್ಲಿದೆ ಮಾಹಿತಿ
India vs South africa: ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಟೆಸ್ಟ್ ಹಾಗೂ ಏಕದಿನ ಸರಣಿಗಳು ಮುಗಿದಿವೆ. ಟೆಸ್ಟ್ ಸರಣಿಯನ್ನು ಸೌತ್ ಆಫ್ರಿಕಾ ತಂಡ 2-0 ಅಂತರದಿಂದ ಗೆದ್ದುಕೊಂಡರೆ, ಏಕದಿನ ಸರಣಿಯನ್ನು ಟೀಮ್ ಇಂಡಿಯಾ 2-1 ಅಂತರದಿಂದ ವಶಪಡಿಸಿಕೊಂಡಿದೆ. ಇದೀಗ ಉಭಯ ತಂಡಗಳು 5 ಪಂದ್ಯಗಳ ಟಿ20 ಸರಣಿಗಾಗಿ ಸಜ್ಜಾಗಿದೆ.

ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಟಿ20 ಸರಣಿಯು ನಾಳೆಯಿಂದ (ಡಿ.9) ಶುರುವಾಗಲಿದೆ. ಐದು ಪಂದ್ಯಗಳ ಈ ಸರಣಿಯ ಮೊದಲ ಮ್ಯಾಚ್ ಕಟಕ್ನ ಬಾರಾಬತಿ ಸ್ಟೇಡಿಯಂನಲ್ಲಿ ನಡೆಯಲಿದೆ. ಇನ್ನು ದ್ವಿತೀಯ ಪಂದ್ಯಕ್ಕೆ ಚಂಡೀಗಢದ ಪಿಸಿಎ ಸ್ಟೇಡಿಯಂ ಆತಿಥ್ಯವಹಿಸಲಿದೆ. ಹಾಗೆಯೇ ಮೂರನೇ ಮತ್ತು ನಾಲ್ಕನೇ ಪಂದ್ಯಗಳು ಧರ್ಮಶಾಲಾ ಹಾಗೂ ಲಕ್ನೋದಲ್ಲಿ ಜರುಗಲಿದೆ. ಇನ್ನು ಕೊನೆಯ ಪಂದ್ಯಕ್ಕೆ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ ಅತಿಥ್ಯವಹಿಸಲಿದೆ.
ಇನ್ನು ಈ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಿದರೆ, ಸೌತ್ ಆಫ್ರಿಕಾ ತಂಡದ ನಾಯಕನಾಗಿ ಐಡೆನ್ ಮಾರ್ಕ್ರಾಮ್ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿರುವ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಈ ಸರಣಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ.
ಭಾರತ-ಸೌತ್ ಆಫ್ರಿಕಾ ನಡುವಣ ಪಂದ್ಯಗಳು ಎಷ್ಟು ಗಂಟೆಗೆ ಶುರು?
ಈ ಸರಣಿಯ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 7 ಗಂಟೆಗೆ ಶುರುವಾಗಲಿದೆ. ಇನ್ನು ಟಾಸ್ ಪ್ರಕ್ರಿಯೆಯು 6.30 ಕ್ಕೆ ನಡೆಯಲಿದೆ.
ಯಾವ ಚಾನೆಲ್ನಲ್ಲಿ ನೇರ ಪ್ರಸಾರ?
ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಟಿ20 ಸರಣಿಯು ಸ್ಟಾರ್ ಸ್ಪೋರ್ಟ್ಸ್ ಚಾನೆಲ್ಗಳಲ್ಲಿ ನೇರ ಪ್ರಸಾರ ಇರಲಿದೆ. ಇದರ ಜೊತೆಗೆ ಜಿಯೋ ಹಾಟ್ ಸ್ಟಾರ್ ವೆಬ್ಸೈಟ್ ಹಾಗೂ ಆ್ಯಪ್ನಲ್ಲಿ ಲೈವ್ ಸ್ಟ್ರೀಮಿಂಗ್ ಅನ್ನು ವೀಕ್ಷಿಸಬಹುದು.
