ಐಸಿಸಿ ಮಹಿಳಾ ಏಕದಿನ ವಿಶ್ವಕಪ್ (ICC Womens World Cup 2022) ಟೂರ್ನಿ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಇಂದು ಲೀಗ್ ಹಂತದ ಕೊನೇ ಪಂದ್ಯ ನಡೆಯುತ್ತಿದ್ದು ಭಾರತ ಮಹಿಳಾ ತಂಡ ದಕ್ಷಿಣ ಆಫ್ರಿಕಾ ಮಹಿಳಾ (India vs South Africa Women) ತಂಡದ ವಿರುದ್ಧ ಸವಾಲಿನ ಮೊತ್ತ ಕಲೆಹಾಕಿದೆ. ಇದು ಮಿಥಾಲಿ ಪಡೆಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು ಗೆದ್ದರೆ ಸೆಮಿ ಫೈನಲ್ಗೆ ಪ್ರವೇಶ ಪಡೆಯಲಿದೆ. ಸೋತರೆ ಟೂರ್ನಿಯಿಂದ ಹೊರ ಬೀಳುವುದು ಖಚಿತ. ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡ ಈಗಾಗಲೇ ಸೆಮಿ ಫೈನಲ್ಗೇರಿದೆ. ಉಳಿದಿರುವ ಎರಡು ಸ್ಥಾನಕ್ಕಾಗಿ ಇದೀಗ ಪೈಪೋಟಿ ಏರ್ಪಟ್ಟಿದೆ. ಒಂದು ವೇಳೆ ಭಾರತ ಇಂದಿನ ಪಂದ್ಯ ಸೋಲದೆ, ಪಂದ್ಯ ರದ್ದುಗೊಂಡರೂ ನಾಕೌಟ್‌ಗೆ ತೇರ್ಗಡೆಯಾಗಲಿದೆ. ಇದೀಗ ಟಾಸ್ ಗೆದ್ದ ಟೀಮ್ ಇಂಡಿಯಾ (Team India) ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಸ್ಮೃತಿ ಮಂದಾನ, ಶಫಾಲಿ ವರ್ಮಾ ಮತ್ತು ಮಿಥಾಲಿ ರಾಜ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ 50 ಓವರ್ಗಳಲ್ಲಿ 274 ರನ್ ಬಾರಿಸಿದೆ.
ಮೊದಲು ಬ್ಯಾಟಿಂಗ್ಗೆ ಇಳಿದಿರುವ ಭಾರತ ಬೊಂಬಾಟ್ ಆರಂಭ ಪಡೆದುಕೊಂಡಿತು. ಓಪನರ್ಗಳಾದ ಸ್ಮೃತಿ ಮಂದಾನ ಹಾಗೂ ಶೆಫಾಲಿ ವರ್ಮಾ ಎಚ್ಚರಿಕೆಯಿಂದ ಬ್ಯಾಟ್ ಬೀಸಿದರು. ಅದರಲ್ಲೂ ಶಫಾಲಿ ತಮ್ಮದೇ ಶೈಲಿಯ ಬಿರುಸಿನ ಆಟವಾಡಿ ಅರ್ಧಶತಕ ಸಿಡಿಸಿದರು. ಮೊದಲ ವಿಕೆಟ್ಗೆ ಈ ಜೋಡಿ 91 ರನ್ಗಳ ಕಾಣಿಕೆ ನೀಡಿತು. ಚೆನ್ನಾಗಗಿಯೇ ಆಡುತ್ತಿದ್ದ ಶಫಾಲಿ 53 ರನ್ ಗಳಿಸಿ ರನೌಟ್ಗೆ ಬಲಿಯಾದರು. ಬಂದ ಬೆನ್ನಲ್ಲೇ ಯಸ್ತಿಕಾ ಭಾಟಿಯಾ ಕೇವಲ 2 ರನ್ಗೆ ನಿರ್ಗಮಿಸಿದ್ದು ಹಿನ್ನಡೆಯಾಯಿತು.
ಆದರೆ, ಮೂರನೇ ವಿಕೆಟ್ಗೆ ಸ್ಮೃತಿ ಜೊತೆಯಾದ ಮಿಥಾಲಿ ರಾಜ್ ನಾಯಕಿಯ ಆಟವಾಡಿದರು. ತಂಡಕ್ಕೆ ಆಧಾರವಾದ ಈ ಜೋಡಿ ರನ್ ಗಳಿಸುತ್ತಾ ಸಾಗಿತು. ಮಂದಾನ ಅರ್ಧಶತಕ ಸಿಡಿಸಿ ಬಿರುಸಿನ ಬ್ಯಾಟಿಂಗ್ ನಡೆಸಿದರು. ಇವರಿಬ್ಬರು 80 ರನ್ಗಳ ಕೊಡುಗೆ ನೀಡಿದರು. ಮಂದಾನ 84 ಎಸೆಗಳಲ್ಲಿ 6 ಬೌಂಡರಿ, 1 ಸಿಕ್ಸರ್ನೊಂದಿಗೆ 71 ರನ್ ಚಚ್ಚಿದರು. ಹರ್ಮನ್‌ಪ್ರೀತ್ ಕೌರ್ ಜೊತೆ ಮಿಥಾಲಿ ಅರ್ಧಶತಕದ ಜೊತೆಯಾಟ ಆಡಿ ನಿರ್ಗಮಿಸಿದರು. 84 ಎಸೆತಗಳಲ್ಲಿ 8 ಫೋರ್ನೊಂದಿಗೆ 68 ರನ್ ಗಳಿಸಿ ಮಿಥಾಲಿ ಔಟಾದರು. ಪೂಜಾ ವಸ್ತ್ರಾಕರ್ ಆಆಟ 3 ರನ್ಗೆ ಅಂತ್ಯವಾಯಿತು.
ಭಾರತದ ಫಿನಿಶಿಂಗ್ ಜವಾಬ್ದಾರಿ ಹೊತ್ತ ಹರ್ಮನ್‌ಪ್ರೀತ್ ಕೌರ್ ಅರ್ಧಶತಕದ ಅಂಚಿನಲ್ಲಿ ಎಡವಿದರೂ ತಂಡ ಸವಾಲಿನ ಮೊತ್ತ ಕಲೆಹಾಕುವಲ್ಲಿ ನೆರವಾದರು. ಇವರು 57 ಎಸೆತಗಳಲ್ಲಿ 4 ಫೋರ್ನೊಂದಿಗೆ ಅಜೇಯ 48 ರನ್ ಸಿಡಿಸಿದರು. ಅಂತಿಮವಾಗಿ ಭಾರತ 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 274 ರನ್ ಬಾರಿಸಿತು. ಆಫ್ರಿಕಾ ಪರ ಮಸಬೆಟ ಕ್ಲಾಸ್ ಹಾಗೂ ಶಬ್ನಿಮ್ ಇಸ್ಮಾಯಿಲ್ ತಲಾ 2 ವಿಕೆಟ್ ಪಡೆದರು.
ಇಂದಿನ ಪಂದ್ಯಕ್ಕೆ ಭಾರತ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಜೂನ್ ಗೋಸ್ವಾಮಿ ಬದಲು ಮೇಘ್ನಾ ಸಿಂಗ್ ಮತ್ತು ಪೂನಂ ಯಾದವ್ ಜಾಗಕ್ಕೆ ದೀಪ್ತಿ ಶರ್ಮಾ ಬಂದಿದ್ದಾರೆ.
ಭಾರತ ಪ್ಲೇಯಿಂಗ್ XI: ಸ್ಮೃತಿ ಮಂದನಾ, ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ, ಮಿಥಾಲಿ ರಾಜ್ (ನಾಯಕಿ), ಹರ್ಮನ್‌ಪ್ರೀತ್ ಕೌರ್, ರಿಚಾ ಘೋಷ್ (ವಿಕೆಟ್ ಕೀಪರ್), ಪೂಜಾ ವಸ್ತ್ರಾಕರ್, ಸ್ನೆಹ್ ರಾಣಾ, ದೀಪ್ತಿ ಶರ್ಮಾ, ಮೆಘ್ನಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್.
ದಕ್ಷಿಣ ಆಫ್ರಿಕಾ ಪ್ಲೇಯಿಂಗ್ XI: ಲಿಜ್ಜೆಲೆ ಲೀ, ಲೌರಾ ವೋಲ್ವರ್ಡ್, ಲಾರಾ ಗುಡಾಲ್, ಸುನೆ ಲೌಸ್ (ನಾಯಕಿ), ಮಿಗ್ನಾನ್ ಡು ಪ್ರೀಜ್, ಮರಿಜಾನೆ ಕ್ಯಾಪ್, ಚೋಲೆ ಟ್ರಯನ್, ತ್ರಿಶಾ ಚೆಟ್ಟಿ (ವಿಕೆಟ್ ಕೀಪರ್), ಶಬ್ನಿಮ್ ಇಸ್ಮಾಯಿಲ್, ಮಸಬೆಟ ಕ್ಲಾಸ್, ಅಯಾಬೊಂಗ ಕಾಕ.
IPL 2022: ಐಪಿಎಲ್ನಲ್ಲಿಂದು ಡಬಲ್ ಧಮಾಕ: ಶುಭಾರಂಭ ಮಾಡುವುದೇ ಆರ್ಸಿಬಿ?, ರೋಹಿತ್ ಮೇಲೆ ಎಲ್ಲರ ಕಣ್ಣು