2023ನೇ ವರ್ಷದ ಮೊದಲ ಕದನಕ್ಕೆ ಟೀಮ್ ಇಂಡಿಯಾ (Team India) ಸಜ್ಜಾಗಿದೆ. ಇಂದು ಹಾರ್ದಿಕ್ ಪಾಂಡ್ಯ ನೇತೃತ್ವದ ಭಾರತ ತಂಡ ದಸನ್ ಶನಕಾ ನೇತೃತ್ವದ ಶ್ರೀಲಂಕಾ (India vs Sri Lanka) ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಮುಖಾಮುಖಿ ಆಗುತ್ತಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಈ ಪಂದ್ಯ ಏರ್ಪಡಿಸಲಾಗಿದ್ದು ಸಂಜೆ 7 ಗಂಟೆಗೆ ಶುರುವಾಗಲಿದೆ. ಟೀಮ್ ಇಂಡಿಯಾ ರೋಹಿತ್, ಕೊಹ್ಲಿ, ರಾಹುಲ್ರಂತಹ ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯುತ್ತಿದ್ದು ಯುವ ಪ್ಲೇಯರ್ಸ್ಗೊಂದು ಅಗ್ನಿ ಪರೀಕ್ಷೆಯಾಗಿದೆ. ಟಿ20 ಸ್ಪೆಷಲಿಸ್ಟ್ಗಳಾದ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (Hardik Pandya), ಅರ್ಷದೀಪ್ ಸಿಂಗ್ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಹೀಗೆ ಸಾಕಷ್ಟು ರೋಚಕತೆ ಸೃಷ್ಟಿಸಿರುವ ಇಂಡೋ-ಲಂಕಾ ಮೊದಲ ಟಿ20ಗೆ ಮಳೆಯ ಕಾಟ ಇದೆಯೇ?, ವಾಂಖೆಡೆ ಪಿಚ್ ಹೇಗಿದೆ?.
ಪಂದ್ಯ ನಡೆಯುವ ದಿನ ಇಂದು ಮಳೆಯ ನಿರೀಕ್ಷೆ ಇಲ್ಲವೆಂದು ಹವಾಮಾನ ಇಲಾಖೆ ತಿಳಿಸಿದ್ದು, ಸಂಪೂರ್ಣ 40 ಓವರ್ಗಳ ಪಂದ್ಯ ನಡೆಯಲಿದೆ. ಹೀಗಾಗಿ ಪಂದ್ಯ ನಿರಾತಂಕವಾಗಿ ಸಾಗಲಿದೆ. ವಾತಾವರಣ ಶುಭ್ರದಿಂದ ಕೂಡಿರಲಿದ್ದು ತಾಪಮಾನ ಗರಿಷ್ಠ 28 ಡಿಗ್ರಿ ಸೆಲ್ಸಿಯಸ್‌ನಿಂದ ಕನಿಷ್ಠ 24 ಡಿಗ್ರಿ ಸೆಲ್ಸಿಯಸ್‌ನಷ್ಟಿರುವ ಸಾಧ್ಯತೆಯಿದೆ.
ಮೊದಲ ಟಿ20 ಪಂದ್ಯ ನಡೆಯಲಿರುವ ವಾಂಖೆಡೆ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ ಸ್ವರ್ಗವಾಗಿದೆ. ಅನೇಕ ಐಪಿಎಲ್ ಪಂದ್ಯಗಳಲ್ಲಿ ಇಲ್ಲಿ ರನ್ ಮಳೆ ಸುರಿದಿರುವುದು ಕಂಡಿದ್ದೇವೆ. ಚೆಂಡು ಮೇಲ್ಮೈಯಿಂದ ಬರುತ್ತದೆ. ಬ್ಯಾಟರ್‌ಗಳು ಕೂಡ ಶಾರ್ಟ್ ಬೌಂಡರಿಗಳನ್ನು ಸಿಡಿಸಲು ಈ ಪಿಚ್ ಸಹಾಯಕವಾಗಿದೆ. ಇಬ್ಬನಿಯು ಬೌಲರ್‌ಗಳಿಗೆ ಹೆಚ್ಚು ಸಹಾಯಕಾರಿಯಾಗಿದ್ದು, ಪಂದ್ಯದ ತಿರುವಿಗೆ ಕಾರಣವಾಗಬಹುದು. ಆದಾಗ್ಯೂ, ವೇಗಿಗಳು ಆರಂಭಿಕ ಓವರ್‌ಗಳಲ್ಲಿ ಬೌಲರ್ಗಳು ಮೇಲುಗೈ ಸಾಧಿಸುತ್ತಾರೆ. ಇಲ್ಲಿ ಆಡಿರುವ 7 ಪಂದ್ಯಗಳ ಪೈಕಿ 5ರಲ್ಲಿ ಗುರಿ ಬೆನ್ನಟ್ಟಿರುವ ತಂಡಗಳು ಗೆದ್ದಿದೆ.
ಮದುವೆ ಸುದ್ದಿಯ ನಡುವೆಯೇ ದುಬೈನಲ್ಲಿ ಹೊಸ ವರ್ಷವನ್ನು ಬರಮಾಡಿಕೊಂಡ ರಾಹುಲ್-ಅಥಿಯಾ; ಫೋಟೋ ನೋಡಿ
ಭಾರತ ಮತ್ತು ಶ್ರೀಲಂಕಾ ನಡುವಿನ ಟಿ20 ಸರಣಿಯ ಮೊದಲ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದ್ದು, ಟಾಸ್ 6.30ಕ್ಕೆ ನಡೆಯಲಿದೆ. ನೇರ ಪ್ರಸಾರವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಇರಲಿದೆ. ಲೈವ್ ಸ್ಟ್ರೀಮಿಂಗ್ ಅನ್ನು ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದಾಗಿದೆ.
ಭಾರತ ತಂಡ: ಶುಭ್ಮನ್ ಗಿಲ್, ಇಶಾನ್ ಕಿಶನ್, ಋತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್.
ಶ್ರೀಲಂಕಾ ತಂಡ: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಅವಿಷ್ಕಾ ಫೆರ್ನಾಂಡೋ, ಚರಿತ್ ಅಸಲಂಕಾ, ಭಾನುಕಾ ರಾಜಪಕ್ಸೆ, ದಸುನ್ ಶನಕ (ನಾಯಕ), ವನಿಂದು ಹಸರಂಗ, ಚಾಮಿಕ ಕರುಣರತ್ನ, ಮಹೇಶ್ ತೀಕ್ಷಣ, ಲಹಿರು ಕುಮಾರ, ದಿಲ್ಶನ್ ಮಧುಶಂಕ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:56 am, Tue, 3 January 23