Team India: ಟೀಮ್ ಇಂಡಿಯಾದ ಮುಂದಿನ ಕೋಚ್ ಯಾರು? ಇಲ್ಲಿದೆ ಉತ್ತರ
ಟೀಮ್ ಇಂಡಿಯಾ ಟಿ20 ತಂಡಕ್ಕೆ ಹೊಸ ಕೋಚ್ ಅನ್ನು ಆಯ್ಕೆ ಮಾಡುವ ಬಗ್ಗೆ ಕೂಡ ಚರ್ಚಿಸಲಾಗಿದೆ. 2024 ರ ವಿಶ್ವಕಪ್ ಅನ್ನು ದೃಷ್ಟಿಯಲ್ಲಿಟ್ಟುಕೊಂಡು ವಿದೇಶಿ ಕೋಚ್ ಅನ್ನು ಕರೆತರುವ ಇರಾದೆಯಲ್ಲಿದೆ ಬಿಸಿಸಿಐ.
ರಾಹುಲ್ ದ್ರಾವಿಡ್ (Rahul Dravid) ಅವರ ಕಾರ್ಯಾವಧಿ ಮುಕ್ತಾಯಕ್ಕೂ ಮುನ್ನವೇ ಟೀಮ್ ಇಂಡಿಯಾದ (Team India) ಮುಂದಿನ ಕೋಚ್ ಯಾರು ಎಂಬ ಚರ್ಚೆಗಳು ಶುರುವಾಗಿದೆ. ಇಂತಹದೊಂದು ಚರ್ಚೆಗಳು ಶುರುವಾಗಲು ಕಾರಣ ಕೆಲ ದಿನಗಳ ಹಿಂದೆ ನಡೆದ ಬಿಸಿಸಿಐ ಪರಿಶೀಲನಾ ಸಭೆ. ಈ ಸಭೆಯ ಬಳಿಕ ಟೀಮ್ ಇಂಡಿಯಾದಲ್ಲಿ ಮಹತ್ವದ ಬದಲಾವಣೆಯಾಗುವ ಸೂಚನೆ ಲಭಿಸಿತ್ತು. ಇದಾಗ್ಯೂ ಕೋಚ್ ಹಾಗೂ ನಾಯಕತ್ವದಲ್ಲಿ ಬದಲಾವಣೆಯಿಲ್ಲ ಎಂಬುದನ್ನು ಬಿಸಿಸಿಐ ಸ್ಪಷ್ಟಪಡಿಸಿತ್ತು. ಆದರೆ ಇದೀಗ ನವೆಂಬರ್ ಅಂತ್ಯದ ವೇಳೆ ಟೀಮ್ ಇಂಡಿಯಾ ಕೋಚ್ ಬದಲಾಗುವುದು ಬಹುತೇಕ ಖಚಿತವಾಗಿದೆ.
ಏಕೆಂದರೆ ಹಾಲಿ ಕೋಚ್ ರಾಹುಲ್ ದ್ರಾವಿಡ್ ಅವರೊಂದಿಗೆ ಒಪ್ಪಂದ 2023ರ ವಿಶ್ವಕಪ್ನೊಂದಿಗೆ ಅಂತ್ಯವಾಗಲಿದೆ. ಇದರ ಬಳಿಕ ಅವರ ಕಾರ್ಯಾವಧಿ ಮುಂದುವರೆಯಬೇಕಿದ್ದರೆ ಭಾರತ ತಂಡ ವಿಶ್ವಕಪ್ ಗೆಲ್ಲಲೇಬೇಕು. ಒಂದು ವೇಳೆ ಟೀಮ್ ಇಂಡಿಯಾ ಈ ಬಾರಿ ವಿಶ್ವಕಪ್ ಗೆದ್ದರೂ ರಾಹುಲ್ ಕೋಚ್ ಆಗಿ ಮುಂದುವರೆಯಲಿದ್ದಾರಾ ಎಂಬುದು ಕೂಡ ಖಚಿತವಿಲ್ಲ. ಹೀಗಾಗಿಯೇ ಏಕದಿನ ವಿಶ್ವಕಪ್ ಬಳಿಕ ಟೀಮ್ ಇಂಡಿಯಾದ ಕೋಚ್ ಬದಲಾಗುವುದು ಖಚಿತ ಎನ್ನಲಾಗುತ್ತಿದೆ.
ಇದರ ಬೆನ್ನಲ್ಲೇ ರಾಹುಲ್ ದ್ರಾವಿಡ್ ಅವರ ಸ್ಥಾನ ತುಂಬಲಿರುವ ಹೊಸ ಕೋಚ್ ಯಾರು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಈ ಪ್ರಶ್ನೆಯ ಬೆನ್ನಲ್ಲೇ ಮಾಜಿ ಆಟಗಾರನ ಹೆಸರು ಕೂಡ ಚಾಲ್ತಿಗೆ ಬಂದಿರುವುದು ವಿಶೇಷ. ಹೌದು, ಏಕದಿನ ವಿಶ್ವಕಪ್ ಬಳಿಕ ಟೀಮ್ ಇಂಡಿಯಾದ ಹೊಸ ಕೋಚ್ ಆಗಿ ಪ್ರಸ್ತುತ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್‌ಸಿಎ) ಕ್ರಿಕೆಟ್ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರನ್ನು ಬಿಸಿಸಿಐ ನೇಮಿಸುವ ಸಾಧ್ಯತೆಯಿದೆ ಎಂದು ಕ್ರಿಕೆಟ್ನೆಕ್ಸ್ಟ್ ವರದಿ ಮಾಡಿದೆ.
ಈ ಬಗ್ಗೆ ಈಗಾಗಲೇ ಬಿಸಿಸಿಐ ಪರಿಶೀಲಿನಾ ಸಭೆಯಲ್ಲಿ ಚರ್ಚಿಸಲಾಗಿದ್ದು, ಇದೇ ಕಾರಣದಿಂದಾಗಿ ಏಕದಿನ ವಿಶ್ವಕಪ್ವರೆಗೂ ನಾಯಕತ್ವ ಹಾಗೂ ಕೋಚ್ ಸ್ಥಾನಗಳಲ್ಲಿ ಬದಲಾವಣೆ ಮಾಡದಿರಲು ನಿರ್ಧರಿಸಲಾಗಿದೆ. ಅಷ್ಟೇ ಅಲ್ಲದೆ ರಾಹುಲ್ ದ್ರಾವಿಡ್ ಅನುಪಸ್ಥಿತಿಯಲ್ಲಿ ವಿವಿಎಸ್ ಲಕ್ಷ್ಮಣ್ ಈ ಹಿಂದೆ ಭಾರತ ತಂಡದ ಕೋಚ್ ಆಗಿ ಕಾಣಿಸಿಕೊಂಡಿದ್ದರು. ಇದಲ್ಲದೆ, ಅವರು ಹಲವಾರು ದ್ವಿಪಕ್ಷೀಯ ಸರಣಿಗಳಿಗಾಗಿ ಟೀಮ್ ಇಂಡಿಯಾದೊಂದಿಗೆ ಪ್ರಯಾಣಿಸಿದ್ದಾರೆ. ಹೀಗಾಗಿಯೇ ಬಿಸಿಸಿಐ ಟೀಮ್ ಇಂಡಿಯಾದ ಮಾಜಿ ಆಟಗಾರನನ್ನೇ ಮುಖ್ಯ ಕೋಚ್ ಆಗಿ ನೇಮಿಸಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಟೀಮ್ ಇಂಡಿಯಾದ ಹೊಸ ಜೆರ್ಸಿ ಅನಾವರಣ
ಅಷ್ಟೇ ಅಲ್ಲದೆ ವಿವಿಎಸ್ ಲಕ್ಷ್ಮಣ್ ಅವರ ತರಬೇತಿಯಲ್ಲಿ ಭಾರತ ಅಂಡರ್ 19 ತಂಡವು 2022ರ ವಿಶ್ವಕಪ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಅತ್ತ ಅಂಡರ್ 19 ತಂಡದಲ್ಲಿದ್ದ ಯುವ ಆಟಗಾರರೇ ಮುಂದೆ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ವಿವಿಎಸ್ ಲಕ್ಷ್ಮಣ್ ಅವರನ್ನೇ ಮುಖ್ಯ ಕೋಚ್ ಆಗಿ ನೇಮಿಸುವುದರಿಂದ ಆಟಗಾರರ ನಡುವೆ ಕೂಡ ಉತ್ತಮ ಹೊಂದಾಣಿಕೆ ಇರಲಿದೆ. ಇದೇ ಕಾರಣದಿಂದಾಗಿ ಲಕ್ಷ್ಮಣ್ ಅವರನ್ನು ಟೀಮ್ ಇಂಡಿಯಾದ ಮುಂದಿನ ಕೋಚ್ ಆಗಿ ಆಯ್ಕೆ ಮಾಡಲು ಬಿಸಿಸಿಐ ಪ್ಲ್ಯಾನ್ ರೂಪಿಸಿದಂತಿದೆ.
ಇದನ್ನೂ ಓದಿ: RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
ಟಿ20ಗೆ ಸ್ಪೆಷಲಿಸ್ಟ್ ಕೋಚ್:
ಮತ್ತೊಂದೆಡೆ ಟೀಮ್ ಇಂಡಿಯಾ ಟಿ20 ತಂಡಕ್ಕೆ ಹೊಸ ಕೋಚ್ ಅನ್ನು ಆಯ್ಕೆ ಮಾಡುವ ಬಗ್ಗೆ ಕೂಡ ಚರ್ಚಿಸಲಾಗಿದೆ. 2024 ರ ವಿಶ್ವಕಪ್ ಅನ್ನು ದೃಷ್ಟಿಯಲ್ಲಿಟ್ಟುಕೊಂಡು ವಿದೇಶಿ ಕೋಚ್ ಅನ್ನು ಕರೆತರುವ ಇರಾದೆಯಲ್ಲಿದೆ ಬಿಸಿಸಿಐ. ಅಂದರೆ ಏಕದಿನ ಹಾಗೂ ಟೆಸ್ಟ್ನಲ್ಲಿ ಲಕ್ಷ್ಮಣ್ ಕೋಚ್ ಆಗಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಹಾಗೆಯೇ ಟಿ20 ತಂಡಕ್ಕೆ ವಿದೇಶಿ ಕೋಚ್ ಅಥವಾ ಐಪಿಎಲ್ನಲ್ಲಿ ಯಶಸ್ವಿಯಾಗುವ ಕೋಚ್ ಅನ್ನು ನೇಮಕ ಮಾಡುವ ಸಾಧ್ಯತೆ ಹೆಚ್ಚಿದೆ.