ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ಏಕದಿನ ಸರಣಿ ಸಾಕಷ್ಟು ರೋಚಕತೆಯಿಂದ ಕೂಡಿದೆ. ರೋಚಕ ಟೈನೊಂದಿಗೆ ಮೊದಲ ಏಕದಿನ ಪಂದ್ಯ ಅಂತ್ಯಗೊಂಡಿದ್ದರೆ, ಇದೀಗ ಎರಡನೇ ಏಕದಿನ ಪಂದ್ಯವೂ ಹಾವು ಏಣಿ ಆಟದಂತೆ ಒಮ್ಮೆ ಲಂಕಾ ಪರ ವಾಲಿದರೆ, ಇನ್ನೊಮ್ಮೆ ಟೀಂ ಇಂಡಿಯಾ ಪರ ವಾಲುತ್ತಿದೆ. ಮೊದಲ ಏಕದಿನ ಪಂದ್ಯದಂತೆಯೇ ಎರಡನೇ ಏಕದಿನ ಪಂದ್ಯದಲ್ಲೂ ಲಂಕಾ ಬೌಲರ್ಗಳು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇತ್ತ ಭಾರತ ಕೂಡ ಉತ್ತಮ ಆರಂಭದ ಹೊರತಾಗಿಯೂ ಮಧ್ಯಮ ಕ್ರಮಾಂಕದ ಕಳಪೆ ಬ್ಯಾಟಿಂಗ್ನಿಂದಾಗಿ ಸೋಲಿನ ಸುಳಿಗೆ ಸಿಲುಕಿದೆ. ತಂಡದ ಅಗ್ರ ಬ್ಯಾಟಿಂಗ್ ಕ್ರಮಾಂಕ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡಿದೆ. ಇತ್ತ ವಿರಾಟ್ ಕೊಹ್ಲಿ ಕೂಡ ಸಿಕ್ಕ ಅವಕಾಶವನ್ನೂ ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಇದೇ ವೇಳೆ ಕೊಹ್ಲಿ ವಿಕೆಟ್ಗಾಗಿ ಶ್ರೀಲಂಕಾ ಕ್ರಿಕೆಟಿಗರು ಮೈದಾನದಲ್ಲಿ ಹೈಡ್ರಾಮ ನಡೆಸಿದ್ದು, ಕೆಲ ಸಮಯ ಮೈದಾನದಲ್ಲಿ ಗೊಂದಲದ ವಾತಾವರಣ ಕೂಡ ಸೃಷ್ಟಿಯಾಗಿದೆ.
ಕೊಲಂಬೊದಲ್ಲಿ ನಡೆಯುತ್ತಿರುವ ಸರಣಿಯ ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಭಾರತಕ್ಕೆ ಗೆಲ್ಲಲು 241 ರನ್ಗಳ ಗುರಿಯನ್ನು ನೀಡಿತು. ಇದಕ್ಕೆ ಉತ್ತರವಾಗಿ ನಾಯಕ ರೋಹಿತ್ ಶರ್ಮಾ ಮತ್ತೊಮ್ಮೆ ಸ್ಫೋಟಕ ಅರ್ಧಶತಕ ಬಾರಿಸುವ ಮೂಲಕ ತಂಡಕ್ಕೆ ವೇಗದ ಆರಂಭ ನೀಡಿದರು. ಆದರೆ, ರೋಹಿತ್ ತನ್ನ ಇನ್ನಿಂಗ್ಸ್ ಅನ್ನು ದೊಡ್ಡ ಸ್ಕೋರ್ ಆಗಿ ಪರಿವರ್ತಿಸಲು ಸಾಧ್ಯವಾಗದೆ, ಔಟಾದರು. ಅವರ ವಿಕೆಟ್ ನಂತರ ವಿರಾಟ್ ಕೊಹ್ಲಿ ಕ್ರೀಸ್‌ಗೆ ಬಂದರು.
ಕೊಹ್ಲಿ ಬಂದ ತಕ್ಷಣವೇ ಎರಡು ಬೌಂಡರಿ ಬಾರಿಸಿ ಉತ್ತಮ ಆರಂಭ ಪಡೆದುಕೊಂಡರು. ಆದರೆ ಆ ನಂತರವೇ ಮೈದಾನದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು. ವಾಸ್ತವವಾಗಿ ಅಕಿ ಧನಂಜಯ ಬೌಲ್ ಮಾಡಿದ ಓವರ್ನ ಕೊನೆಯ ಎಸೆತದಲ್ಲಿ ಕೊಹ್ಲಿ ಎಲ್‌ಬಿಡಬ್ಲ್ಯೂ ಆದರು. ಕೂಡಲೇ ಲಂಕಾ ಕ್ರಿಕೆಟಿಗರು ವಿಕೆಟ್ಗಾಗಿ ಮನವಿ ಮಾಡಿದರು. ಅಂಪೈರ್ ಕೂಡ ಕೊಹ್ಲಿ ಔಟೆಂದು ತೀರ್ಪು ನೀಡಿದ್ದರು. ಆದರೆ ಅಂಪೈರ್ ನಿರ್ಧಾರದ ವಿರುದ್ಧ ಕೊಹ್ಲಿ ರಿವ್ಯೂ ತೆಗೆದುಕೊಂಡರು. ಆ ಬಳಿಕವೇ ಮೈದಾನದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು.
ಕೊಹ್ಲಿ ಮನವಿಯನ್ನು ಪರಿಶೀಲಿಸಿದ ಮೂರನೇ ಅಂಪೈರ್, ಕೊಹ್ಲಿ ನಾಟೌಟ್ ಎಂದು ತೀರ್ಪು ನೀಡಿದರು. ಇದಕ್ಕೆ ಬಲವಾದ ಕಾರಣವೂ ಇತ್ತು. ಏಕೆಂದರೆ, ರಿವ್ಯೂವ್ನಲ್ಲಿ ಚೆಂಡು ವಿರಾಟ್ ಅವರ ಬ್ಯಾಟ್ ಬಳಿ ಇದ್ದಾಗ ಸ್ನೀಕೋಮೀಟರ್‌ನಲ್ಲಿ ಸ್ವಲ್ಪ ಏರಿಳಿತ ಕಂಡುಬಂತು. ಅಂದರೆ ಚೆಂಡು ಬ್ಯಾಟ್‌ಗೆ ತಾಗಿ ಪ್ಯಾಡ್‌ಗೆ ತಾಗಿದಂತೆ ತೋರುತ್ತಿತ್ತು. ಹೀಗಾಗಿ ಮೂರನೇ ಅಂಪೈರ್‌ಗೆ ಈ ನಿರ್ಧಾರವನ್ನು ಬದಲಾಯಿಸದೆ ಬೇರೆ ದಾರಿ ಇರಲಿಲ್ಲ.
ಈ ನಿರ್ಧಾರ ಬಂದ ತಕ್ಷಣ ಸಿಟ್ಟಿಗೆದ್ದ ಶ್ರೀಲಂಕಾ ಆಟಗಾರರು ಅಂಪೈರ್ ಜತೆ ವಾಗ್ವಾದಕ್ಕಿಳಿದರು. ವಿಕೆಟ್ ಕೀಪರ್ ಕುಸಾಲ್ ಮೆಂಡಿಸ್ ತಮ್ಮ ತಲೆಯಿಂದ ಹೆಲ್ಮೆಟ್ ತೆಗೆದು ನೆಲಕ್ಕೆ ಎಸೆದರು. ನಾಯಕ ಚರಿತ್ ಅಸಲಂಕಾ ಕೂಡ ಅಂಪೈರ್ ನಿರ್ಧಾರವನ್ನು ಪ್ರಶ್ನಿಸಲು ಆರಂಭಿಸಿದರು. ಶ್ರೀಲಂಕಾದ ಕೋಚ್ ಸನತ್ ಜಯಸೂರ್ಯ ಮೈದಾನದ ಡ್ರೆಸ್ಸಿಂಗ್ ರೂಮ್‌ನಿಂದ ಕೆಳಗಿಳಿದು ಬೌಂಡರಿ ಬಳಿ ಕುಳಿತಿದ್ದ ನಾಲ್ಕನೇ ಅಂಪೈರ್‌ನನ್ನು ಪ್ರಶ್ನಿಸಲು ಆರಂಭಿಸಿದರು.
— Gill Bill (@bill_gill76078) August 4, 2024
ಈಗ ಪ್ರಶ್ನೆ ಏನೆಂದರೆ, ಎಲ್ಲವೂ ಸ್ಪಷ್ಟವಾದ ನಂತರವೂ ಶ್ರೀಲಂಕಾ ಆಟಗಾರರು ಏಕೆ ಕೋಪಗೊಂಡರು? ಎಂಬುದು. ವಾಸ್ತವವಾಗಿ, ರಿವ್ಯೂವ್ನಲ್ಲಿ ಕಂಡಬಂದ ದೃಶ್ಯ ಕೊಂಚ ಗೊಂದಲಮಯವಾಗಿತ್ತು. ಏಕೆಂದರೆ ಸ್ನೀಕೋಮೀಟರ್‌ನಲ್ಲಿ ಏರಿಳಿತ ಕಂಡುಬಂದಾಗ ಚೆಂಡು ಕೊಹ್ಲಿಯ ಬ್ಯಾಟ್‌ಗೆ ಬಹಳ ಹತ್ತಿರದಲ್ಲಿತ್ತು. ಆದರೆ ಒಂದು ಫ್ರೆಮ್ ಮುಂದೆ ಸರಿದಾಗ ಚೆಂಡು ಬ್ಯಾಟ್‌ನ ಬಳಿ ಇದ್ದರೂ, ಸ್ನೀಕೋಮೀಟರ್‌ನಲ್ಲಿ ಯಾವುದೇ ಏರಿಳಿತ ಇರಲಿಲ್ಲ. ಇದು ಲಂಕಾ ಆಟಗಾರನನ್ನು ಕೆರಳಿಸಿತು. ಬ್ಯಾಟ್‌ನ ಪಕ್ಕದಲ್ಲಿ ಚೆಂಡು ಇದ್ದರೂ ಸ್ನೀಕೋಮೀಟರ್‌ನಲ್ಲಿ ಏರಿಳಿತ ಇಲ್ಲ. ಹಾಗಿದ್ದರೂ ನಿರ್ಧಾರವನ್ನು ಏಕೆ ಬದಲಾಯಿಸಲಾಯಿತು ಎಂಬ ಪ್ರಶ್ನೆಗಳನ್ನು ಎತ್ತಿ, ತಮ್ಮ ಅಸಮಾಧಾನ ಹೊರಹಾಕಿದರು.
The reaction from Sri Lankan team after the DRS. pic.twitter.com/pA6TVIcQH1
— Mufaddal Vohra (@mufaddal_vohra) August 4, 2024
ಆದರೆ, ಇದರ ಲಾಭ ಪಡೆಯಲು ವಿರಾಟ್ ಕೊಹ್ಲಿಗೆ ಸಾಧ್ಯವಾಗಲಿಲ್ಲ. ಕೆಲವೇ ಎಸೆತಗಳ ನಂತರ ಲೆಗ್ ಸ್ಪಿನ್ನರ್ ಜೆಫ್ರಿ ವಾಂಡರ್ಸೆ ವಿರಾಟ್ ಅವರನ್ನು ಎಲ್‌ಬಿಡಬ್ಲ್ಯೂ ಬಲೆಗೆ ಬೀಳಿಸಿದರು. ಈ ವೇಳೆ ಖಚಿತವಾಗಿ ಔಟಾಗಿರುವುದು ಕೊಹ್ಲಿಗೆ ಗೊತ್ತಾದ ಕಾರಣ ಅವರು ರಿವ್ಯೂ ತೆಗೆದುಕೊಳ್ಳದೇ ಪೆವಿಲಿಯನ್ ಸೇರಿಕೊಂಡರು. ಕೊಹ್ಲಿ ಈ ಪಂದ್ಯದಲ್ಲಿ ಕೇವಲ 19 ರನ್ ಗಳಿಸಿ ಔಟಾದರು. ಕೊನೆಯ ಇನ್ನಿಂಗ್ಸ್‌ನಲ್ಲಿ ಅವರು 23 ರನ್ ಬಾರಿಸಿ ಎಲ್‌ಬಿಡಬ್ಲ್ಯೂ ಆಗಿ ಔಟಾದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ