IND vs SL: ಗಂಭೀರ್ ಪ್ರಯೋಗಗಳೇ ಟೀಂ ಇಂಡಿಯಾ ಸೋಲಿಗೆ ಕಾರಣವೇ? ಮುಖ್ಯ ಕೋಚ್ ಎಡವಿದ್ದೇಲ್ಲಿ?
Team India: ಟೀಂ ಇಂಡಿಯಾದ ನೂತನ ಮುಖ್ಯ ಕೋಚ್ ಆಗಿ ಆಯ್ಕೆಯಾಗಿರುವ ಗೌತಮ್ ಗಂಭೀರ್ಗೆ ಲಂಕಾ ನಾಡಲ್ಲಿ ಶುಭ ಆರಂಭವೇ ಸಿಕ್ಕಿತ್ತು. ಟಿ20 ಸರಣಿಯನ್ನು ಭಾರತ ತಂಡ ಏಕಪಕ್ಷೀಯವಾಗಿ ಗೆದ್ದುಕೊಂಡಿತ್ತು. ಈ ಸರಣಿ ವೇಳೆ ಗಂಭೀರ್ ಮಾಡಿದ್ದ ಪ್ರಯೋಗಗಳು ಕ್ಲಿಕ್ ಆಗಿದ್ದವು. ಆದರೆ ಏಕದಿನ ಸರಣಿಯಲ್ಲಿ ಗಂಭೀರ್ ಅವರ ಲೆಕ್ಕಾಚಾರವೇ ಬುಡಮೇಲಾಗಿದೆ.
ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯನ್ನು ಏಕಪಕ್ಷೀಯವಾಗಿ ಟೀಂ ಇಂಡಿಯಾ ಗೆದ್ದಿದ್ದನ್ನು ನೋಡಿದ್ದ ಅಭಿಮಾನಿಗಳು, ಏಕದಿನ ಸರಣಿಯಲ್ಲೂ ಈ ವಿಜಯ ಯಾತ್ರೆ ಮುಂದುವರೆಯಲಿದೆ ಎಂದು ಭಾವಿಸಿದ್ದರು. ಆದರೆ ಯುವ ಪಡೆಯನ್ನು ಕಟ್ಟಿಕೊಂಡು ಸೂರ್ಯಕುಮಾರ್ ಮಾಡಿದ್ದ ಕೆಲಸವನ್ನು ಅನುಭವಿಗಳ ಬಳಗವನ್ನೇ ಹೊಂದಿರುವ ರೋಹಿತ್ ಶರ್ಮಾಗೆ ಮಾಡಲು ಸಾಧ್ಯವಾಗಲಿಲ್ಲ. ಏಕದಿನ ಸರಣಿಯ ಮೊದಲ ಪಂದ್ಯವನ್ನು ಟೈ ಮಾಡಿಕೊಂಡಿದ್ದ ಟೀಂ ಇಂಡಿಯಾ, ಎರಡನೇ ಏಕದಿನ ಪಂದ್ಯದಲ್ಲಿ 32 ರನ್ಗಳ ಹೀನಾಯ ಸೋಲು ಅನುಭವಿಸಿದೆ. ಅಲ್ಪ ಟಾರ್ಗೆಟ್ ಮುಂದೆಯೂ ತಂಡದ ಬ್ಯಾಟಿಂಗ್ ವಿಭಾಗ ಮುಗ್ಗರಿಸಿದ್ದು ತಂಡದ ಸೋಲಿಗೆ ಕಾರಣ ಎಂದು ಹೇಳಲಾಗುತ್ತಿದೆ. ಆದರೆ ಟೀಂ ಇಂಡಿಯಾದ ಸೋಲಿಗೆ ನೂತನ ಕೋಚ್ ಗಂಭೀರ್ ಅವರ ಪ್ರಯೋಗಗಳೇ ಪ್ರಮುಖ ಕಾರಣ ಎಂಬುದು ಅನುಭವಿಗಳ ವಾದವಾಗಿದೆ. ಹಾಗಿದ್ದರೆ ಗಂಭೀರ್ ಎಡವಿದ್ದೆಲ್ಲಿ?.
ಬ್ಯಾಟಿಂಗ್ ಕ್ರಮಾಂಕದ ಬದಲಾವಣೆಯ ಅಗತ್ಯ ಏನಿತ್ತು?
ಏಕದಿನ ಸರಣಿಯಲ್ಲಿ ಆಡಿರುವ ಎರಡೂ ಪಂದ್ಯಗಳಲ್ಲಿ ತಂಡದ ಸೋಲಿಗೆ ಪ್ರಮುಖ ಕಾರಣ ಮ್ಯಾನೇಜ್‌ಮೆಂಟ್ ತೆಗೆದುಕೊಂಡ ಬ್ಯಾಟಿಂಗ್ ಕ್ರಮಾಂಕದ ಬದಲಾವಣೆಯ ನಿರ್ಧಾರ. ಮೊದಲ ಏಕದಿನ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಆದರೆ ಸುಂದರ್ ಕೇವಲ 5 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಇನ್ನು ಎರಡನೇ ಪಂದ್ಯದಲ್ಲಿ ಇದೇ ತಪ್ಪು ಮಾಡಿದ ನಾಯಕ ಮತ್ತು ಕೋಚ್ ಶಿವಂ ದುಬೆ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕಳುಹಿಸಿದರು. ಈ ಪಂದ್ಯದಲ್ಲಿ ದುಬೆಗೆ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ.
ಕೊಲಂಬೊದ ಸ್ಪಿನ್ ಸ್ನೇಹಿ ಪಿಚ್ನಲ್ಲಿ ಅನುಭವಿಗಳೇ ರನ್ ಕಲೆಹಾಕಲು ಕಷ್ಟಪಡುತ್ತಿರುವಾಗ ಅನಾನುಭವಿಗಳಾದ ದುಬೆ ಹಾಗೂ ಸುಂದರ್ ಅವರಿಗೆ ಮುಂಬಡ್ತಿ ನೀಡುವ ಅಗತ್ಯ ಏನಿತ್ತು?. ಎಡಗೈ ಮತ್ತು ಬಲಗೈ ಬ್ಯಾಟ್ಸ್‌ಮನ್‌ಗಳು ಕ್ರೀಸ್‌ನಲ್ಲಿದ್ದರೆ ಸಿಂಗಲ್ಸ್‌ಗಳನ್ನು ಸುಲಭವಾಗಿ ತೆಗೆಯಬಹುದು ಎಂದು ಭಾವಿಸಿದ್ದೆ ಆದರೆ ಅದು ಸಾಧ್ಯವಾಗಲಿಲ್ಲ ಎಂದು ಎರಡನೇ ಪಂದ್ಯದ ನಂತರ ರೋಹಿತ್ ಶರ್ಮಾ ಹೇಳಿದ್ದರು. ಆದರೆ ಮೊದಲನೇ ಏಕದಿನದಲ್ಲಿ ಈ ನಿರ್ಧಾರದಿಂದ ಆದ ಪ್ರಮಾದದಿಂದ ರೋಹಿತ್ ಶರ್ಮಾ ಏಕೆ ಎಚ್ಚೆತ್ತುಕೊಳ್ಳಲಿಲ್ಲ?.
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯನ್ನು ಈಗ ಭಾರತ ಗೆಲ್ಲಲು ಸಾಧ್ಯವಿಲ್ಲ. ಏಕೆಂದರೆ ಒಂದು ಪಂದ್ಯ ಟೈ ಆಗಿದ್ದರೆ, ಇನ್ನೊಂದು ಪಂದ್ಯವನ್ನು ಶ್ರೀಲಂಕಾ ಗೆದ್ದುಕೊಂಡಿದೆ. ಈಗ ಭಾರತ ಈ ಸರಣಿಯನ್ನು ಡ್ರಾ ಮಾಡಿಕೊಳ್ಳಲು ಮಾತ್ರ ಸಾಧ್ಯ. ಅದರಲ್ಲೂ ಮೂರನೇ ಪಂದ್ಯವನ್ನು ಭಾರತ ಗೆದ್ದರೆ ಮಾತ್ರ ಸರಣಿ ಡ್ರಾ ಆಗಲಿದೆ. ಇಲ್ಲದಿದ್ದರೆ, ಏಕದಿನ ಸರಣಿ ಭಾರತದ ಕೈಜಾರಲಿದೆ.
ಇತರ ಬ್ಯಾಟ್ಸ್‌ಮನ್‌ಗಳಿಗೆ ಹೊಡೆತ ನೀಡಿದ ಗಂಭೀರ್ ಪ್ರಯೋಗ
ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಗೌತಮ್ ಗಂಭೀರ್ ಶಿವಂ ದುಬೆ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕಳುಹಿಸಿದರು. ಆ ಬಳಿಕ ಅಕ್ಷರ್ ಪಟೇಲ್ ಅವರನ್ನು ಐದನೇ ಸ್ಥಾನದಲ್ಲಿ ಬ್ಯಾಟಿಂಗ್‌ಗೆ ಇಳಿಸಲಾಯಿತು. ಇದರಿಂದಾಗಿ ಆರನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಮತ್ತು ಏಳನೇ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ಬ್ಯಾಟಿಂಗ್‌ಗೆ ಬರಬೇಕಾಯಿತು. ಕೆಎಲ್ ರಾಹುಲ್ ಅವರನ್ನು ಏಳನೇ ಕ್ರಮಾಂಕದಲ್ಲಿ ಆಡಿಸುತ್ತಿದ್ದಾರೆ ಎಂದರೆ ಕೋಚ್ ಗೌತಮ್ ಗಂಭೀರ್, ಕೆಎಲ್ ರಾಹುಲ್ಗಿಂತ ವಾಷಿಂಗ್ಟನ್ ಸುಂದರ್ ಮತ್ತು ಅಕ್ಷರ್ ಪಟೇಲ್ ಮೇಲೆಯೇ ಹೆಚ್ಚು ವಿಶ್ವಾಸವಿಟ್ಟಿದ್ದಾರಾ?.
ಗಂಭೀರ್ ಅವರ ಈ ನಡೆ, ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನು ಪ್ರಮುಖ ಬ್ಯಾಟರ್ಗಳಾಗಿ ತಂಡದಲ್ಲಿ ಆಯ್ಕೆ ಮಾಡಿದ್ದಾರೋ ಅಥವಾ ಅವರ ಮುಖ್ಯ ಕೆಲಸ ಬೌಲಿಂಗ್ ಆಗಿದೆಯೋ ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಸ್ಪಿನ್ ಬೌಲರ್ಗಳಿಗೆ ಅನುಕೂಲವಾಗುವ ಪಿಚ್ನಲ್ಲಿ ಬೌಲಿಂಗ್ ಆಲ್‌ರೌಂಡರ್‌ಗಳಿಂದ ದೊಡ್ಡ ಸ್ಕೋರ್ ನಿರೀಕ್ಷಿಸುವುದು ಎಷ್ಟು ಸರಿ?. ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ತಮ್ಮ ಬ್ಯಾಟಿಂಗ್‌ನಿಂದ ಭರವಸೆ ಮೂಡಿಸಿದ್ದಾರೆ ನಿಜ. ಆದರೆ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್‌ಗೆ ಹೋಲಿಸಿದರೆ ಅವರು ನಾಲ್ಕು ಮತ್ತು ಐದನೇ ಕ್ರಮಾಂಕಕ್ಕೆ ಎಷ್ಟರ ಮಟ್ಟಿಗೆ ನ್ಯಾಯ ಒದಗಿಸುತ್ತಾರೆ? ಎಂಬುದನ್ನು ಗಂಭೀರ್ ವಿಮರ್ಶಿಸಬೇಕಾಗಿದೆ.
ಗಂಭೀರ್ಗೆ ಆಟ.. ಶ್ರೇಯಸ್, ರಾಹುಲ್ಗೆ ಸಂಕಟ
ಏಕದಿನ ಸರಣಿಯಲ್ಲಿ ಶ್ರೇಯಸ್ ಅಯ್ಯರ್ ಅವರ ಬ್ಯಾಟಿಂಗ್ ಕ್ರಮಾಂಕ ನಿರಂತರವಾಗಿ ಬದಲಾಗಿದೆ. ಇದು ಅವರ ಪ್ರದರ್ಶನದ ಮೇಲೆ ಪರಿಣಾಮ ಬೀರಿದೆ. ಈ ಹಿಂದೆ ನಡೆದ 2023 ರ ವಿಶ್ವಕಪ್‌ನಲ್ಲಿ, ಶ್ರೇಯಸ್ ಅಯ್ಯರ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ಹೇಗೆ ಅದ್ಭುತ ಪ್ರದರ್ಶನ ನೀಡಿದರು ಎಂಬುದನ್ನು ಜಗತ್ತು ನೋಡಿದೆ. ಹಾಗಾದರೆ ಕೋಚ್ ಗಂಭೀರ್, ಅಯ್ಯರ್ ಅವರನ್ನು ಏಕೆ ಕೆಳ ಕ್ರಮಾಂಕದಲ್ಲಿ ಆಡಿಸುತ್ತಿದ್ದಾರೆ? ಅದೇ ರೀತಿ ಕೆಎಲ್ ರಾಹುಲ್ ಅವರ ಬ್ಯಾಟಿಂಗ್ ಕ್ರಮಾಂಕವೂ ಏಕೆ ಬದಲಾಗುತ್ತಿದೆ? ಎಂಬುದು ಪ್ರಶ್ನೆ.
ಗಂಭೀರ್ ಮಾಡಬೇಕಿರುವುದು ಏನು?
ಮೇಲಿನ ಎಲ್ಲಾ ಪ್ರಶ್ನೆಗಳಿಗೆ ಸರಳ ಉತ್ತರವೆಂದರೆ, ಟಿ20 ಸರಣಿಯಂತೆ ಏಕದಿನ ಸರಣಿಯಲ್ಲಿ ಬ್ಯಾಟಿಂಗ್ ಕ್ರಮಾಂಕದ ಬದಲಾವಣೆಯ ಅಗತ್ಯತೆ ಇಲ್ಲ. ಏಕೆಂದರೆ ಏಕದಿನದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬರುವ ಬ್ಯಾಟರ್ ಬಿಗ್ ಇನ್ನಿಂಗ್ಸ್ ಜೊತೆಗೆ ಪಂದ್ಯವನ್ನು ಕೊನೆಯವರೆಗೂ ತೆಗೆದುಕೊಂಡು ಹೋಗುವಂತವನಾಗಿರಬೇಕು. ಈ ಜವಬ್ದಾರಿಯನ್ನು ನಿಭಾಯಿಸುವ ಕಲೆ ರಾಹುಲ್ ಹಾಗೂ ಶ್ರೇಯಸ್ಗೆ ಆರಂಭದಿಂದಲೂ ಇದೆ. ಆದರೆ ಇದೀಗ ತಾನೇ ಅಂತರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಡುತ್ತಿರುವ ಬೌಲಿಂಗ್ ಆಲ್‌ರೌಂಡರ್‌ಗಳ ಮೇಲೆ ಈ ರೀತಿಯ ಪ್ರಯೋಗ ಮಾಡುವುದು ಇಡೀ ತಂಡದ ಸ್ಥಿರತೆಗೆ ಪೆಟ್ಟು ನೀಡುತ್ತಿದೆ.
ಇದರ ಪರಿಣಾಮವನ್ನು ಈಗಾಗಲೇ ನಾವು ಈ ಎರಡು ಪಂದ್ಯಗಳಲ್ಲಿ ನೋಡಿದ್ದೇವೆ. ಹೀಗಾಗಿ ಗಂಭೀರ್ ಮಾಡಬೇಕಾಗಿರುವುದು ಇಷ್ಟೆ. ಬ್ಯಾಟ್ಸ್‌ಮನ್‌ಗಳಿಗೆ ಸ್ಥಿರವಾಗಿ ಆಡುವಂತೆ ಸೂಚನೆ ನೀಡಬೇಕು ಮತ್ತು ಯುವ ಆಲ್‌ರೌಂಡರ್‌ಗಳು ಜವಾಬ್ದಾರಿಯುತವಾಗಿ ಬ್ಯಾಟಿಂಗ್ ಮಾಡುವ ಜೊತೆಗೆ ಜೊತೆಯಾಟಕ್ಕೂ ಹೆಚ್ಚು ಒತ್ತು ನೀಡುವಂತೆ ಸಲಹೆ ನೀಡಬೇಕು. ಹಾಗಾದರೆ ಮಾತ್ರ ಹಳೆಯ ಭಾರತ ತಂಡವನ್ನು ನೋಡಲು ಸಾಧ್ಯ. ಇಲ್ಲದಿದ್ದರೆ ಭಾರತ ಏಕದಿನ ತಂಡ, ಮತ್ತೊಂದು ಶ್ರೀಲಂಕಾ, ಇಂಗ್ಲೆಂಡ್, ಪಾಕಿಸ್ತಾನ ತಂಡಗಳಂತೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:48 pm, Mon, 5 August 24