IND vs SL: ಚಿನ್ನಸ್ವಾಮಿಯಲ್ಲಿ ವಿಕೆಟ್​ಗಳ ಸುರಿಮಳೆ: ಪಿಂಕ್ ಬಾಲ್ ಟೆಸ್ಟ್​ನ ಮೊದಲ ದಿನ ಏನಾಯಿತು?

| Updated By: Vinay Bhat

Updated on: Mar 13, 2022 | 7:28 AM

India vs Sri Lanka, Pink Ball Test: ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್​ನಲ್ಲಿ 59.1 ಓವರ್​ಗೆ 252 ರನ್​​ಗಳಿಗೆ ಸರ್ವಪತನ ಕಂಡಿತು. ಇತ್ತ ಶ್ರೀಲಂಕಾ ಬ್ಯಾಟರ್​ಗಳದ್ದು ಕೂಡ ಇದೇ ಪರಿಸ್ಥಿತಿ. ಭಾರತೀಯ ಬೌಲಿಂಗ್ ಬಿರುಗಾಳಿಗೆ ತತ್ತರಿಸಿರುವ ಸಿಂಹಳೀಯರು ಮೊದಲ ದಿನದಾಟದ ಅಂತ್ಯಕ್ಕೆ 6 ವಿಕೆಟ್​ ಕಳೆದುಕೊಂಡಿದ್ದು ಗಳಿಸಿರುವುದು ಮಾತ್ರ 86 ರನ್​ಗಳನ್ನಷ್ಟೆ.

IND vs SL: ಚಿನ್ನಸ್ವಾಮಿಯಲ್ಲಿ ವಿಕೆಟ್​ಗಳ ಸುರಿಮಳೆ: ಪಿಂಕ್ ಬಾಲ್ ಟೆಸ್ಟ್​ನ ಮೊದಲ ದಿನ ಏನಾಯಿತು?
IND vs SL 2nd Test
Follow us on

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಿರುವ ಭಾರತ ಹಾಗೂ ಶ್ರೀಲಂಕಾ (India vs Sri Lanka) ನಡುವಣ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನ ವಿಕೆಟ್​ಗಳ ಸುರಿಮಳೆಯೇ ಹರಿದಿದೆ. ಬರೋಬ್ಬರಿ 16 ವಿಕೆಟ್​ಗಳು ಮೊದಲ ದಿನ ಪತನಗೊಂಡವು. ನಾಲ್ಕನೇ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ಶ್ರೇಯಸ್ ಅಯ್ಯರ್ (Shreyas Iyer) ಹೊರತು ಪಡಿಸಿ ಉಳಿದೆಲ್ಲ ಭಾರತದ ಅನುಭವಿ ಬ್ಯಾಟರ್​ಗಳು ವೈಫಲ್ಯ ಅನುಭವಿಸಿದರು. ಅಯ್ಯರ್ ಅವರ 98 ಎಸೆತಗಳಲ್ಲಿ 92 ರನ್​ಗಳ ಆಟ ತಂಡಕ್ಕೆ ನೆರವಾಯಿತು. ಟೀಮ್ ಇಂಡಿಯಾ (Team India) ಮೊದಲ ಇನ್ನಿಂಗ್ಸ್​ನಲ್ಲಿ 59.1 ಓವರ್​ಗೆ 252 ರನ್​​ಗಳಿಗೆ ಸರ್ವಪತನ ಕಂಡಿತು. ಇತ್ತ ಶ್ರೀಲಂಕಾ ಬ್ಯಾಟರ್​ಗಳದ್ದು ಕೂಡ ಇದೇ ಪರಿಸ್ಥಿತಿ. ಭಾರತೀಯ ಬೌಲಿಂಗ್ ಬಿರುಗಾಳಿಗೆ ತತ್ತರಿಸಿರುವ ಸಿಂಹಳೀಯರು ಮೊದಲ ದಿನದಾಟದ ಅಂತ್ಯಕ್ಕೆ 6 ವಿಕೆಟ್​ ಕಳೆದುಕೊಂಡಿದ್ದು ಗಳಿಸಿರುವುದು ಮಾತ್ರ 86 ರನ್​ಗಳನ್ನಷ್ಟೆ. ಇನ್ನೂ 166 ರನ್​ಗಳ ಹಿನ್ನಡೆಯಲ್ಲಿದೆ. ಜಸ್​ಪ್ರೀತ್ ಬುಮ್ರಾ 3 ವಿಕೆಟ್ ಕಿತ್ತು ಮಿಂಚಿದ್ದಾರೆ.

ಭಾರತದ ಆರಂಭ ಉತ್ತಮವಾಗಿರಲಿಲ್ಲ. ಮಯಂಕ್ ಅಗರವಾಲ್ (4) ರನೌಟ್ ಆದರು. ನಾಯಕ ರೋಹಿತ್ ಶರ್ಮಾ (15) ಮಗದೊಮ್ಮೆ ವೈಫಲ್ಯ ಅನುಭವಿಸಿದರು. ಹನುಮ ವಿಹಾರಿ ಹಾಗೂ ವಿರಾಟ್ ಕೊಹ್ಲಿ ಮೂರನೇ ವಿಕೆಟ್‌ಗೆ 47 ರನ್‌ಗಳ ಜೊತೆಯಾಟ ಕಟ್ಟಿದರು. 31 ರನ್ ಗಳಿಸಿದ ವಿಹಾರಿಗೂ ಕ್ರೀಸಿನಲ್ಲಿ ನೆಲೆಯೂರಲು ಸಾಧ್ಯವಾಗಲಿಲ್ಲ.

71ನೇ ಶತಕದ ನಿರೀಕ್ಷೆಯಲ್ಲಿರುವ ವಿರಾಟ್ ಕೊಹ್ಲಿ 23 ರನ್ ಗಳಿಸಿ ಔಟ್ ಆದರು. ಕಳೆದ ಪಂದ್ಯದ ಹೀರೊ ರವೀಂದ್ರ ಜಡೇಜಗೆ (4) ಮಿಂಚಲು ಸಾಧ್ಯವಾಗಲಿಲ್ಲ. ಇನ್ನೊಂದೆಡೆ ಆಕ್ರಮಣಕಾರಿ ಆಟವಾಡಿದ ಅಯ್ಯರ್ 98 ಎಸೆತಗಳಲ್ಲಿ 92 ರನ್ ಗಳಿಸಿ ಗಮನ ಸೆಳೆದರು. ಶ್ರೇಯಸ್ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳು ಸೇರಿದ್ದವು. ಇನ್ನುಳಿದಂತೆ ಆರ್. ಅಶ್ವಿನ್ (13), ರವೀಂದ್ರ ಜಡೇಜ (4), ಮೊಹಮ್ಮದ್ ಶಮಿ (5) ರನ್ ಗಳಿಸಿದರು. ಲಂಕಾ ಪರ ಲಸಿತ್ ಎಂಬುಲದೆನಿಯಾ ಹಾಗೂ ಪ್ರವೀಣ್ ಜಯವಿಕ್ರಮ ತಲಾ ಮೂರು ಮತ್ತು ಧನಂಜಯ ಡಿಸಿಲ್ವ ಎರಡು ವಿಕೆಟ್ ಕಬಳಿಸಿ ಮಿಂಚಿದರು.

ಟೀಮ್ ಇಂಡಿಯಾವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದ ಶ್ರೀಲಂಕಾ ಊಟದ ವಿರಾಮದ ನಂತರ ತನ್ನ ಮೊದಲನೇ ಇನ್ನಿಂಗ್ಸ್‌ ಬ್ಯಾಟಿಂಗ್‌ ಆರಂಭಿಸಿ ಪ್ರಾರಂಭದಲ್ಲಿಯೇ ವೇಗವಾಗಿ ತನ್ನ ಮೊದಲ 3 ವಿಕೆಟ್‍ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಂತರ ಆಂಜೆಲೋ ಮ್ಯಾಥ್ಯೂಸ್‌ ಜವಾಬ್ದಾರಿಯುತ ಆಟದಿಂದ ಅಲ್ಪ ಮಟ್ಟಕ್ಕೆ ಸುಧಾರಿಸಿಕೊಂಡ ಶ್ರೀಲಂಕಾ ಮೊದಲನೇ ದಿನದಾಟದಂತ್ಯಕ್ಕೆ 6 ವಿಕೆಟ್‍ಗಳನ್ನು ಕಳೆದುಕೊಂಡು 86 ರನ್ ಗಳಿಸಿದೆ. ಈ ಮೂಲಕ ಟೀಮ್ ಇಂಡಿಯಾ 166 ರನ್‌ಗಳ ಮುನ್ನಡೆ ಸಾಧಿಸಿದೆ.

ಶ್ರೀಲಂಕಾ ಪರ ಕುಸಾಲ್ ಮೆಂಡಿಸ್ 2 ರನ್, ದಿಮುತ್ ಕರುಣರತ್ನೆ 4 ರನ್, ಲಹಿರು ತಿರಿಮನ್ನೆ 8 ರನ್, ಆಂಜಲೋ ಮ್ಯಾಥ್ಯೂಸ್‌ 43 ರನ್, ಧನಂಜಯ ಡಿ ಸಿಲ್ವಾ 10 ರನ್, ಚರಿತ್ ಅಸಲಂಕ 5 ರನ್ ಗಳಿಸಿದ್ದು, ನಿರೋಷನ್ ಡಿಕ್ವೆಲ್ಲಾ ಅಜೇಯ 13 ರನ್ ಹಾಗೂ ಲಸಿತ್‌ಎಂಬುಲ್ದೇನಿಯಾ ಅಜೇಯ 0 ರನ್ ಗಳಿಸಿದ್ದಾರೆ. ಸದ್ಯ ಮೊದಲನೇ ದಿನ 6 ವಿಕೆಟ್‍ಗಳನ್ನು ಕಳೆದುಕೊಂಡು 166 ರನ್​ಗಳ ಹಿನ್ನಡೆಯಲ್ಲಿದೆ ಶ್ರೀಲಂಕಾ. ಇಂದಿನ ಎರಡನೇ ದಿನದಾಟ ಯಾರಿಗೆ ಮೇಲುಗೈ ಎಂಬುದು ಕುತೂಹಲ ಕೆರಳಿಸಿದೆ.

ಭವಿಷ್ಯದ ಬ್ಯಾಟಿಂಗ್ ಸೂಪರ್ ಸ್ಟಾರ್: ಕ್ರಿಕೆಟ್ ದೇವರನ್ನೇ ಇಂಪ್ರೆಸ್ ಮಾಡಿರುವ 5 ವರ್ಷದ ಶಾಹಿದ್