IND vs WI: ಮೊದಲ ಟಿ20 ಪಂದ್ಯಕ್ಕೆ ಎರಡೂ ತಂಡಗಳ ಸಂಭಾವ್ಯ ಪ್ಲೇಯಿಂಗ್ 11 ಹೀಗಿದೆ

|

Updated on: Aug 03, 2023 | 10:16 AM

IND vs WI: ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಟೆಸ್ಟ್ ಸರಣಿ ಹಾಗೂ ಏಕದಿನ ಸರಣಿಯನ್ನೂ ಆಡಿ ಮುಗಿಸಿರುವ ಭಾರತ, ಇದೀಗ ಟ್ರಿನಿಡಾಡ್​ನಲ್ಲಿ ಗುರುವಾರದಿಂದ ಆರಂಭವಾಗಲಿರುವ ಟಿ20 ಸರಣಿಯಲ್ಲಿ ಕೆರಿಬಿಯನ್ ದೈತ್ಯರನ್ನು ಎದುರಿಸಲಿದೆ.

IND vs WI: ಮೊದಲ ಟಿ20 ಪಂದ್ಯಕ್ಕೆ ಎರಡೂ ತಂಡಗಳ ಸಂಭಾವ್ಯ ಪ್ಲೇಯಿಂಗ್ 11 ಹೀಗಿದೆ
ಭಾರತ- ವೆಸ್ಟ್ ಇಂಡೀಸ್
Follow us on

ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಟೆಸ್ಟ್ ಸರಣಿ ಹಾಗೂ ಏಕದಿನ ಸರಣಿಯನ್ನೂ ಆಡಿ ಮುಗಿಸಿರುವ ಭಾರತ (India vs West Indies), ಇದೀಗ ಟ್ರಿನಿಡಾಡ್​ನಲ್ಲಿ (Brian Lara Stadium, Trinidad) ಗುರುವಾರದಿಂದ ಆರಂಭವಾಗಲಿರುವ ಟಿ20 ಸರಣಿಯಲ್ಲಿ ಕೆರಿಬಿಯನ್ ದೈತ್ಯರನ್ನು ಎದುರಿಸಲಿದೆ. ಟಿ20 ಮಾದರಿಯಲ್ಲಿ ವೆಸ್ಟ್ ಇಂಡೀಸ್ ತಂಡ ಎರಡು ಬಾರಿ ವಿಶ್ವ ಚಾಂಪಿಯನ್ ಆಗಿರುವುದರಿಂದ ಭಾರತಕ್ಕೆ ಈ ಸವಾಲು ಸುಲಭದ್ದಾಗಿಲ್ಲ. ಇತ್ತ ಕಳೆದ ಕೆಲವು ವರ್ಷಗಳಿಂದ ಟೀಂ ಇಂಡಿಯಾ ಕೂಡ ಟಿ20 ಮಾದರಿಯಲ್ಲಿ ಛಾಪೂ ಮೂಡಿಸಿದೆ. ಹೀಗಾಗಿ ಉಭಯ ತಂಡಗಳ ನಡುವೆ ಪ್ರಬಲ ಸ್ಪರ್ಧೆ ನಡೆಯುವ ನಿರೀಕ್ಷೆ ಇದೆ. ಇನ್ನು ಉಭಯ ತಂಡಗಳಲ್ಲೂ ಟಿ20 ಸ್ಪೆಷಲಿಸ್ಟ್​ಗಳ ದಂಡೆ ಇದೆ. ಯಾವುದೇ ಸಂದರ್ಭದಲ್ಲಾದರೂ ಪಂದ್ಯದ ದಿಕ್ಕನೇ ಬದಲಿಸುವಂತಹ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗ ಎರಡೂ ತಂಡದಲ್ಲಿದೆ. ಹೀಗಾಗಿ ಮೊದಲ ಟಿ20 ಪಂದ್ಯಕ್ಕೆ ಉಭಯ ತಂಡಗಳು ಹೇಗಿರಲ್ಲಿವೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ಭಾರತ ಟಿ20 ತಂಡದಲ್ಲಿ 15 ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಇವರಲ್ಲಿ ನಾಲ್ವರು ಬ್ಯಾಟ್ಸ್‌ಮನ್‌ಗಳು, ಇಬ್ಬರು ಆಲ್‌ರೌಂಡರ್‌ಗಳು, ಇಬ್ಬರು ವಿಕೆಟ್ ಕೀಪರ್‌ಗಳು ಮತ್ತು ಏಳು ಮಂದಿ ಬೌಲರ್‌ಗಳಿದ್ದಾರೆ. ಹೀಗಾಗಿ ಮೊದಲ ಟಿ20 ಪಂದ್ಯಕ್ಕೆ ಮ್ಯಾನೇಜ್‌ಮೆಂಟ್ ಯಾವ 11 ಆಟಗಾರರಿಗೆ ಅವಕಾಶ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

3 ಆಟಗಾರರ ಪಾದಾರ್ಪಣೆ?

ಮೊದಲ ಟಿ20ಪಂದ್ಯದಲ್ಲಿ ಟೀಂ ಇಂಡಿಯಾ 3 ಆಟಗಾರರಿಗೆ ಚೊಚ್ಚಲ ಅವಕಾಶ ನೀಡುವ ಸಾಧ್ಯತೆ ಇದೆ. ಅವರಲ್ಲಿ ಆರಂಭಿಕ ಯಶಸ್ವಿ ಜೈಸ್ವಾಲ್, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಮತ್ತು ವೇಗದ ಬೌಲರ್ ಮುಖೇಶ್ ಕುಮಾರ್ ಸೇರಿದ್ದಾರೆ.

ಯಾವ ಬೌಲರ್‌ಗಳಿಗೆ ಅವಕಾಶ ಸಿಗಲಿದೆ?

ಈಗ ಪ್ರಶ್ನೆ ಏನೆಂದರೆ ಟೀಂ ಇಂಡಿಯಾ ಯಾವ ಬೌಲರ್‌ಗಳೊಂದಿಗೆ ಕಣಕ್ಕಿಳಿಯಲಿದೆ? ಎಂಬುದು. ಮುಕೇಶ್ ಕುಮಾರ್ ಹೊರತುಪಡಿಸಿ, ಅರ್ಷದೀಪ್ ಸಿಂಗ್ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯಲ್ಲಿದ್ದಾರೆ. ಯುಜ್ವೇಂದ್ರ ಚಹಾಲ್ ಮತ್ತು ಕುಲ್ದೀಪ್ ಯಾದವ್ ಇಬ್ಬರೂ ಆಡುವ ಸಾಧ್ಯತೆಗಳಿವೆ. ಇವರಲ್ಲದೇ ಅಕ್ಷರ್ ಪಟೇಲ್ ಕೂಡ ತಂಡದಲ್ಲಿ ಇರಲಿದ್ದಾರೆ. ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಿರುವ ಇಶಾನ್ ಕಿಶನ್ ಮೊದಲ ಟಿ20ಯಲ್ಲಿ ವಿಶ್ರಾಂತಿ ಪಡೆಯಬಹುದು.

ವೆಸ್ಟ್ ಇಂಡೀಸ್ ತಂಡ ಹೇಗಿರಲಿದೆ?

ಇನ್ನು ಟೆಸ್ಟ್ ಹಾಗೂ ಏಕದಿನ ಸರಣಿಯನ್ನು ಕಳೆದುಕೊಂಡಿರುವ ಆತಿಥೇಯ ವೆಸ್ಟ್ ಇಂಡೀಸ್ ಪಡೆ, ಟಿ20 ಸರಣಿಯನ್ನಾದರೂ ತನ್ನದಾಗಿಸಿಕೊಳ್ಳುವ ಇರಾದೆಯೊಂದಿಗೆ ಅಖಾಡಕ್ಕಿಳಿಯುತ್ತಿದೆ. ಅದಕ್ಕೆ ಪೂರಕವಾಗಿ 15 ಸದಸ್ಯರ ಬಲಿಷ್ಠ ತಂಡವನ್ನೇ ಟಿ20 ಸರಣಿಗೆ ಆಯ್ಕೆ ಮಾಡಿದೆ. ಅಲ್ಲದೆ ವೆಸ್ಟ್ ಇಂಡೀಸ್ ಈಗಾಗಲೇ ಏಕದಿನ ವಿಶ್ವಕಪ್ ಸ್ಪರ್ಧೆಯಿಂದ ಹೊರಗುಳಿದಿರುವುದರಿಂದ ಮುಂದಿನ ವರ್ಷ ಜೂನ್‌ನಲ್ಲಿ ನಡೆಯಲ್ಲಿರುವ ಟಿ20 ವಿಶ್ವಕಪ್‌ಗೆ ತಂಡವನ್ನು ಸಿದ್ದಪಡಿಸಿಕೊಳ್ಳಲು ಈ ಸರಣಿಯಲ್ಲಿ ಪ್ರಯತ್ನಿಸಲಿದೆ.

ಪೂರನ್ ಎಂಟ್ರಿ

ವೆಸ್ಟ್ ಇಂಡೀಸ್ ಮಂಡಳಿ ಆಯ್ಕೆ ಮಾಡಿರುವ 15 ಸದಸ್ಯರ ಪಟ್ಟಿಯಲ್ಲಿ ಜೇಸನ್ ಹೋಲ್ಡರ್ ಮತ್ತು ನಿಕೋಲಸ್ ಪೂರನ್ ಅವರೊಂದಿಗೆ ವೇಗಿ ಓಶಾನೆ ಥಾಮಸ್ ಕೂಡ ಸ್ಥಾನ ಪಡೆದಿದ್ದಾರೆ. ಟಿ20 ಮಾದರಿಯಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಧಾಮಸ್ ಪ್ಲೇಯಿಂಗ್ ಇಲೆವೆನ್‌ನ ಭಾಗವಾಗುವ ಸಾಧ್ಯತೆಯಿದೆ.

ವೆಸ್ಟ್ ಇಂಡೀಸ್ ಬ್ಯಾಟಿಂಗ್ ವಿಭಾಗ ಶಾಯ್ ಹೋಪ್ ಮತ್ತು ನಿಕೋಲಸ್ ಪೂರನ್ ಮೇಲೆ ಹೆಚ್ಚು ಅವಲಂಬಿತವಾಗಿದೆ. ಅವರಲ್ಲದೆ ಶಿಮ್ರಾನ್ ಹೆಟ್ಮೆಯರ್, ಟಿ20 ಸ್ವರೂಪದಲ್ಲಿ ಪ್ರಭಾವ ಬೀರಲು ಉತ್ಸುಕರಾಗಿದ್ದಾರೆ. ಇವರಲ್ಲದೆ ನಾಯಕ ರೋವ್‌ಮನ್ ಪೊವೆಲ್ ಕೂಡ ಡೆತ್ ಓವರ್‌ಗಳಲ್ಲಿ ನಿರ್ಣಾಯಕರಾಗುತ್ತಾರೆ.

ಮೊದಲ ಟಿ20ಗೆ ಭಾರತ ಸಂಭಾವ್ಯ ತಂಡ

ಯಶಸ್ವಿ ಜೈಸ್ವಾಲ್, ಶುಬ್​ಮನ್ ಗಿಲ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ತಿಲಕ್ ವರ್ಮಾ, ಅಕ್ಷರ್ ಪಟೇಲ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್ ಮತ್ತು ಮುಖೇಶ್ ಕುಮಾರ್.

ಮೊದಲ ಟಿ20 ಪಂದ್ಯಕ್ಕೆ ವೆಸ್ಟ್ ಇಂಡೀಸ್ ಸಂಭಾವ್ಯ ತಂಡ

ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ಶಾಯ್ ಹೋಪ್/ಜಾನ್ಸನ್ ಚಾರ್ಲ್ಸ್, ನಿಕೋಲಸ್ ಪೂರನ್, ಶಿಮ್ರಾನ್ ಹೆಟ್ಮೆಯರ್, ರೋವ್ಮನ್ ಪೊವೆಲ್ (ನಾಯಕ), ಜೇಸನ್ ಹೋಲ್ಡರ್, ಅಕೇಲ್ ಹೊಸೈನ್, ಓಶಾನೆ ಥಾಮಸ್, ರೊಮಾರಿಯೋ ಶೆಫರ್ಡ್, ಅಲ್ಜಾರಿ ಜೋಸೆಫ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ