World Cup 2023: ಈತ ಆಡದಿದ್ದರೆ ಭಾರತ ಏಕದಿನ ವಿಶ್ವಕಪ್ ಗೆಲ್ಲುವುದಿಲ್ಲ ಎಂದ ಮೊಹಮ್ಮದ್ ಕೈಫ್..!
World Cup 2023: ಟೀಂ ಇಂಡಿಯಾದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಪ್ರದರ್ಶನದ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಮತ್ತೊಮ್ಮೆ ಏಕದಿನ ವಿಶ್ವಕಪ್ (World Cup 2023) ಭಾರತಕ್ಕೆ ಮರಳುತ್ತಿದೆ. ಈ ಬಾರಿಯ ಏಕದಿನ ವಿಶ್ವಕಪ್ ಅಕ್ಟೋಬರ್ 5 ರಿಂದ ಭಾರತದಲ್ಲಿ ಪ್ರಾರಂಭವಾಗುತ್ತಿದ್ದು, ಬರೋಬ್ಬರಿ ಹತ್ತು ವರ್ಷಗಳಿಂದ ಐಸಿಸಿ (ICC) ಟ್ರೋಫಿಯ ಬರವನ್ನು ಎದುರಿಸುತ್ತಿರುವ ಭಾರತಕ್ಕೆ ಸುವರ್ಣಾವಕಾಶ ಒದಗಿ ಬಂದಿದೆ. ಹೀಗಾಗಿ ಟೀಂ ಇಂಡಿಯಾ (Team India) ಕೂಡ ಎಲ್ಲಾ ರೀತಿಯ ತಯಾರಿ ಆರಂಭಿಸಿದೆ. ಆದರೆ ತಂಡಕ್ಕೆ ಪ್ರಮುಖ ಆಟಗಾರರ ಇಂಜುರಿ ಸಮಸ್ಯೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ತಂಡದ ಸ್ಟಾರ್ ಆಟಗಾರರಾದ ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಜಸ್ಪ್ರೀತ್ ಬುಮ್ರಾ ಇಂಜುರಿಗೊಳಗಾಗಿ ಸಾಕಷ್ಟು ಸಮಯದಿಂದ ತಂಡದಿಂದ ಹೊರಗುಳಿದಿದ್ದಾರೆ. ಇದೀಗ ಪೂರ್ಣ ಫಿಟ್ ಆಗಿರುವ ಬುಮ್ರಾ ತಂಡಕ್ಕೆ ಮರಳಲು ಸಜ್ಜಾಗಿದ್ದಾರೆ. ಇದು ಟೀಂ ಇಂಡಿಯಾಕ್ಕೆ ಕೊಂಚ ಸಮಾಧಾನ ತಂದಿದೆ. ಇದೇ ತಿಂಗಳು ಐರ್ಲೆಂಡ್ ವಿರುದ್ಧದ ಟಿ20 ಸರಣಿಯೊಂದಿಗೆ ಬುಮ್ರಾ, ಟೀಂ ಇಂಡಿಯಾದಲ್ಲಿ ಕಾಣಿಸಿಕೊಳ್ಳುವುದರೊಂದಿಗೆ ಏಷ್ಯಾಕಪ್ (Asia Cup) ಹಾಗೂ ವಿಶ್ವಕಪ್ ಆರಂಭಕ್ಕೂ ಮುನ್ನ ತಮ್ಮ ಹಳೆಯ ಲಯಕ್ಕೆ ಮರಳಲು ಪ್ರಯತ್ನಿಸಲಿದ್ದಾರೆ. ಈ ನಡುವೆ ಟೀಂ ಇಂಡಿಯಾದ ಮಾಜಿ ಆಟಗಾರ ಮೊಹಮ್ಮದ್ ಕೈಫ್ (Mohammad Kaif) ಏಕದಿನ ವಿಶ್ವಕಪ್‌ನಲ್ಲಿ ಭಾರತದ ಪ್ರದರ್ಶನದ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಬುಮ್ರಾ ಫಿಟ್ ಆಗಿದ್ದರೆ,ಭಾರತ ಬಲಿಷ್ಠ ತಂಡವಾಗಲಿದೆ
2023 ರ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಪ್ರದರ್ಶನದ ಬಗ್ಗೆ ಭವಿಷ್ಯ ನುಡಿದಿರುವ ಮಾಜಿ ಬ್ಯಾಟರ್ ಮೊಹಮ್ಮದ್ ಕೈಫ್, 2023 ರಲ್ಲಿ ಯಾವುದೇ ಸ್ಪರ್ಧಾತ್ಮಕ ಪಂದ್ಯವನ್ನು ಆಡದ ಜಸ್ಪ್ರೀತ್ ಬುಮ್ರಾ ವಿಶ್ವಕಪ್‌ನಲ್ಲಿ ಆಡದಿದ್ದರೆ ಟೀಂ ಇಂಡಿಯಾ ವಿಶ್ವಕಪ್ ಗೆಲ್ಲುವುದು ಕಷ್ಟ ಎಂದಿದ್ದಾರೆ. ಸುದ್ದಿಗಾರರೊಂದಿಗಿನ ಸಂವಾದದಲ್ಲಿ ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತದ ಚಾಂಪಿಯನ್ ಕನಸಿನ ಬಗ್ಗೆ ಕೈಫ್ ಅವರನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಕೈಫ್, ‘ಇದು ಗಾಯಗೊಂಡಿರುವ ಆಟಗಾರರ ಮೇಲೆ ಅವಲಂಬಿತವಾಗಿದೆ. ಬುಮ್ರಾ ಅವರು ಸಂಪೂರ್ಣವಾಗಿ ಫಿಟ್ ಆಗಿ ತಂಡಕ್ಕೆ ಮರಳಿದರೆ ಅವರು ತಂಡಕ್ಕೆ ಎಕ್ಸ್ ಫ್ಯಾಕ್ಟರ್ ಆಗಲಿದ್ದಾರೆ. ಆದರೆ ಅದಕ್ಕೂ ಮುನ್ನ ಬುಮ್ರಾ, ಎಷ್ಟು ಫಿಟ್ ಆಗಿದ್ದಾರೆ ಎಂಬುದು ಏಷ್ಯಾಕಪ್‌ನಲ್ಲಿ ತಿಳಿಯುತ್ತದೆ. ಪ್ರಸ್ತುತ ಐರ್ಲೆಂಡ್ ಪ್ರವಾಸಕ್ಕೆ ಬುಮ್ರಾ ಆಯ್ಕೆಯಾಗಿದ್ದು, ನಾನು ಅಲ್ಲಿ ಅವರ ಬೌಲಿಂಗ್ ನೋಡಲಿದ್ದೇನೆ. ಬುಮ್ರಾ ಸಂಪೂರ್ಣ ಫಿಟ್ ಆಗಿದ್ದರೆ, ತವರಿನಲ್ಲಿ ಭಾರತ ಬಲಿಷ್ಠ ತಂಡವಾಗಲಿದೆ’ ಎಂದಿದ್ದಾರೆ.
Jasprit Bumrah: ಐರ್ಲೆಂಡ್ ಸರಣಿಗೆ ಯಾರ್ಕರ್ ಕಿಂಗ್? ಬುಮ್ರಾ ಕಂಬ್ಯಾಕ್ ಬಗ್ಗೆ ರೋಹಿತ್ ಹೇಳಿದ್ದೇನು?
ಬುಮ್ರಾ ಆಡದಿದ್ದರೆ ನಾವು ಸೋಲಬಹುದು
ಇನ್ನು ಮುಂದುವರೆದು ಮಾತನಾಡಿದ ಕೈಫ್, ಪ್ರಸ್ತುತ ಟೀಂ ಇಂಡಿಯಾ ಕಾಗದದ ಮೇಲೆ ಬಲಿಷ್ಠವಾಗಿ ಕಾಣುತ್ತಿಲ್ಲ. ಏಕೆಂದರೆ ತಂಡದ ಪ್ರಮುಖ ಆಟಗಾರರು ತಂಡದಿಂದ ಹೊರಗಿದ್ದಾರೆ. ನಾವು ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಮತ್ತು ರಿಷಬ್ ಪಂತ್ ಅವರನ್ನು ಕಳೆದುಕೊಳ್ಳುತ್ತಿದ್ದೇವೆ. ಆದರೆ ದೊಡ್ಡ ಸಮಾಧಾನಕರ ಸಂಗತಿಯೆಂದರೆ ಬುಮ್ರಾ ತಂಡಕ್ಕೆ ಪುನರಾಗಮನ ಮಾಡುತ್ತಿದ್ದಾರೆ. ಒಂದು ವೇಳೆ ಬುಮ್ರಾ ಪೂರ್ಣ ಲಯದಲ್ಲಿ ಕಾಣಿಸಿಕೊಳ್ಳದಿದ್ದರೆ, ಭಾರತ ಇನ್ನೂ ಹೆಚ್ಚು ಶ್ರಮಪಡಬೇಕಾಗುತ್ತದೆ. ನಮ್ಮಲ್ಲಿ ಇನ್ನೂ ಬುಮ್ರಾ ಬದಲಿಯಾಗಿ ಮತ್ತೊಬ್ಬ ಆಟಗಾರನಿಲ್ಲ. ಹೀಗಾಗಿ ಬುಮ್ರಾ ಏಕದಿನ ವಿಶ್ವಕಪ್ ತಂಡದಲ್ಲಿ ಆಡದಿದ್ದರೆ ನಾವು ಸೋಲಬಹುದು ಎಂದು ಕೈಫ್ ಹೇಳಿದ್ದಾರೆ.
ಒಂಬತ್ತು ಪಂದ್ಯಗಳಲ್ಲಿ ಒಟ್ಟು 18 ವಿಕೆಟ್
ಕೈಫ್ ಈ ರೀತಿಯಾಗಿ ಹೇಳಲು ಕಾರಣವೂ ಇದ್ದು, ಬುಮ್ರಾ ಟೀಂ ಇಂಡಿಯಾಕ್ಕೆ ಎಷ್ಟು ಮುಖ್ಯ ಎಂಬುದು ಈ ಹಿಂದೆಯೇ ಸಾಭೀತಾಗಿದೆ. 2019ರ ಏಕದಿನ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಪರ ಒಂಬತ್ತು ಪಂದ್ಯಗಳನ್ನಾಡಿದ್ದ ಬುಮ್ರಾ ಒಟ್ಟು 18 ವಿಕೆಟ್ ಉರುಳಿಸುವ ಮೂಲಕ ಭಾರತದ ಪ್ರಮುಖ ವಿಕೆಟ್ ಟೇಕರ್ ಆಗಿ ಹೊರಹೊಮ್ಮಿದ್ದರು. ಬೆನ್ನು ಬೆನ್ನುನೋವಿನಿಂದಾಗಿ ಸುಮಾರು 10 ತಿಂಗಳಿಗಿಂತ ಹೆಚ್ಚು ಕಾಲ ಆಟದಿಂದ ಹೊರಗುಳಿದಿದ್ದ ಬುಮ್ರಾ, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಕೊನೆಯದಾಗಿ ಸೆಪ್ಟೆಂಬರ್ 25, 2022 ರಂದು ಟೀಂ ಇಂಡಿಯಾ ಪರ ಆಡಿದ್ದ ಬುಮ್ರಾ, ಆ ಬಳಿಕ ಟಿ20 ವಿಶ್ವಕಪ್ 2022, ಡಬ್ಲ್ಯುಟಿಸಿ 2023 ಫೈನಲ್, ಐಪಿಎಲ್ 2023, ಮತ್ತು ಬಾರ್ಡರ್-ಗವಾಸ್ಕರ್ ಟ್ರೋಫಿಯಿಂದಲೂ ಹೊರಗುಳಿದಿದ್ದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:54 am, Thu, 3 August 23