IND vs WI 1st T20: ಟೀಮ್ ಇಂಡಿಯಾ ಪರ ಇಬ್ಬರು ಎಡಗೈ ದಾಂಡಿಗರು ಪಾದಾರ್ಪಣೆ ಸಾಧ್ಯತೆ
India vs West Indies T20: ಭಾರತ-ವೆಸ್ಟ್ ಇಂಡೀಸ್ ನಡುವಣ 5 ಪಂದ್ಯಗಳ ಟಿ20 ಸರಣಿಯು ಗುರುವಾರದಿಂದ ಶುರುವಾಗಲಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಇಬ್ಬರು ಯುವ ಆಟಗಾರರು ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ.
IND vs WI 1st T20: ಭಾರತ-ವೆಸ್ಟ್ ಇಂಡೀಸ್ ನಡುವಣ 5 ಪಂದ್ಯಗಳ ಟಿ20 ಸರಣಿ ಇಂದಿನಿಂದ (ಆಗಸ್ಟ್ 3) ಶುರುವಾಗಲಿದೆ. ಟ್ರಿನಿಡಾಡ್ನ ಬ್ರಿಯಾನ್ ಲಾರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಪಂದ್ಯದ ಮೂಲಕ ಟೀಮ್ ಇಂಡಿಯಾ ಪರ ಇಬ್ಬರು ಎಡಗೈ ದಾಂಡಿಗರು ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ. ಏಕೆಂದರೆ ತಂಡದಲ್ಲಿ ಆರಂಭಿಕ ಆಟಗಾರನಾಗಿ ರೋಹಿತ್ ಶರ್ಮಾ ಇಲ್ಲ. ಹಾಗೆಯೇ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಬೇಕಿದ್ದ ವಿರಾಟ್ ಕೊಹ್ಲಿ ಕೂಡ ಟಿ20 ಸರಣಿಯಿಂದ ಹೊರಗುಳಿದಿದ್ದಾರೆ. ಈ ಎರಡು ಸ್ಥಾನದಲ್ಲಿ ಯುವ ದಾಂಡಿಗರಾದ ಯಶಸ್ವಿ ಜೈಸ್ವಾಲ್ (Yashasvi Jaiswal) ಹಾಗೂ ತಿಲಕ್ ವರ್ಮಾ (Tilak Varma) ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.
ಐಪಿಎಲ್ 2023 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಅದ್ಭುತ ಪ್ರದರ್ಶನ ನೀಡಿದ್ದ ಯಶಸ್ವಿ ಜೈಸ್ವಾಲ್ 14 ಪಂದ್ಯಗಳಲ್ಲಿ ಒಟ್ಟು 625 ರನ್ ಬಾರಿಸಿದ್ದರು. ಇದರ ಫಲವಾಗಿ ಇತ್ತೀಚೆಗೆ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು. ಅಷ್ಟೇ ಅಲ್ಲದೆ ಹೀಗೆ ಸಿಕ್ಕ ಅವಕಾಶದಲ್ಲಿ ಚೊಚ್ಚಲ ಶತಕ ಸಿಡಿಸಿ ಯಶಸ್ವಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು.
ಇದೀಗ ಭರ್ಜರಿ ಫಾರ್ಮ್ನಲ್ಲಿರುವ ಯುವ ಆಟಗಾರನನ್ನು ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿಸುವ ಸಾಧ್ಯತೆಯಿದೆ. ಅದರಂತೆ ಟೀಮ್ ಇಂಡಿಯಾ ಪರ ಶುಭ್ಮನ್ ಗಿಲ್ ಹಾಗೂ ಯಶಸ್ವಿ ಜೈಸ್ವಾಲ್ ಇನಿಂಗ್ಸ್ ಆರಂಭಿಸಬಹುದು.
ಮತ್ತೊಂದೆಡೆ ತಿಲಕ್ ವರ್ಮಾ ಕೂಡ ಈಗಾಗಲೇ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ತೆರೆದಿಟ್ಟಿದ್ದಾರೆ. ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿರುವ 20 ವರ್ಷದ ವರ್ಮಾ 343 ರನ್ ಬಾರಿಸಿ ಮಿಂಚಿದ್ದರು. ಈ ಅತ್ಯುತ್ತಮ ಬ್ಯಾಟಿಂಗ್ ಫಲವಾಗಿ ಇದೀಗ ಯುವ ಬ್ಯಾಟರ್ ಟೀಮ್ ಇಂಡಿಯಾ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ: India T20 Squad: ಟೀಮ್ ಇಂಡಿಯಾದಲ್ಲಿ ಇಬ್ಬರೇ ಆಲ್ರೌಂಡರ್ಗಳು..!
ಇತ್ತ ವಿರಾಟ್ ಕೊಹ್ಲಿ ತಂಡದಲ್ಲಿರದ ಕಾರಣ ಸೂರ್ಯಕುಮಾರ್ ಯಾದವ್ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಬಹುದು. ಅಲ್ಲದೆ ಮಧ್ಯಮ ಕ್ರಮಾಂಕದಲ್ಲಿ ತಿಲಕ್ ವರ್ಮಾಗೆ ಚಾನ್ಸ್ ಸಿಗುವ ಸಾಧ್ಯತೆ ಹೆಚ್ಚಿದೆ. ಈ ಮೂಲಕ ಬಲಗೈ-ಎಡಗೈ ಜೋಡಿಗಳ ಮೂಲಕ ಟೀಮ್ ಇಂಡಿಯಾ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ಅನ್ನು ಕಣಕ್ಕಿಳಿಸಬಹುದು.
ಭಾರತ ಟಿ20 ತಂಡ:
ಇಶಾನ್ ಕಿಶನ್ (ವಿಕೆಟ್ ಕೀಪರ್), ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ಉಪನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ನಾಯಕ), ಅಕ್ಷರ್ ಪಟೇಲ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಅವೇಶ್ ಖಾನ್, ಮುಖೇಶ್ ಕುಮಾರ್.