Manoj Tiwary: ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ ಮನೋಜ್ ತಿವಾರಿ
Manoj Tiwary: ಟೀಮ್ ಇಂಡಿಯಾ ಪರ 12 ಏಕದಿನ ಪಂದ್ಯಗಳಲ್ಲಿ ಬ್ಯಾಟ್ ಬೀಸಿರುವ ಮನೋಜ್ ತಿವಾರಿ ಒಟ್ಟು 287 ರನ್ ಕಲೆಹಾಕಿದ್ದಾರೆ. ಈ ವೇಳೆ 1 ಶತಕ ಹಾಗೂ 1 ಅರ್ಧಶತಕಗಳನ್ನು ಬಾರಿಸಿದ್ದರು.
ಟೀಮ್ ಇಂಡಿಯಾ (Team India) ಆಟಗಾರ ಮನೋಜ್ ತಿವಾರಿ (Manoj Tiwary) ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 2008 ರಲ್ಲಿ ಬ್ರಿಸ್ಬೇನ್ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ತಿವಾರಿ, ಆ ಬಳಿಕ ಟೀಮ್ ಇಂಡಿಯಾ ಪರ 15 ಪಂದ್ಯಗಳನ್ನಾಡಿದ್ದರು. ಇದಲ್ಲದೆ ಈ ವರ್ಷದವರೆಗೆ ಅವರು ರಣಜಿ ಟೂರ್ನಿಯಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ತಮ್ಮ 37ನೇ ವಯಸ್ಸಿನಲ್ಲಿ ವೃತ್ತಿ ಬದುಕಿಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ. ಅದರಂತೆ ಸೋಷಿಯಲ್ ಮೀಡಿಯಾ ಮೂಲಕ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸುತ್ತಿರುವುದಾಗಿ ತಿಳಿಸಿದ್ದಾರೆ.
ವಿಶೇಷ ಎಂದರೆ ಮನೋಜ್ ತಿವಾರಿ ತಮ್ಮ ಕ್ರಿಕೆಟ್ ವೃತ್ತಿ ಜೀವನದೊಂದಿಗೆ ರಾಜಕೀಯದಲ್ಲಿ ಹೊಸ ಇನಿಂಗ್ಸ್ ಆರಂಭಿಸಿದ್ದರು. ಅದರಂತೆ ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಅಲ್ಲದೆ ಪ್ರಸ್ತುತ ಪಶ್ಚಿಮ ಬಂಗಾಳದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂದರೆ ರಾಜಕೀಯದೊಂದಿಗೆ ಅವರು ರಣಜಿ ಟೂರ್ನಿಗಳಲ್ಲೂ ಕಾಣಿಸಿಕೊಂಡಿದ್ದರು. ಆದರೆ 2015 ರಲ್ಲಿ ಕೊನೆಯ ಬಾರಿಗೆ ಟೀಮ್ ಇಂಡಿಯಾ ಪರ ಆಡಿದ್ದ ಅವರು ಆ ಬಳಿಕ ಕಂಬ್ಯಾಕ್ ಮಾಡಲು ಸಾಧ್ಯವಾಗಿರಲಿಲ್ಲ.
ಇದೀಗ ಸೋಷಿಯಲ್ ಮೀಡಿಯಾ ಮೂಲಕ ನಿವೃತ್ತಿ ಘೋಷಿಸಿರುವ ಮನೋಜ್ ತಿವಾರಿ, ತಮ್ಮ ವೃತ್ತಿಜೀವನದುದ್ದಕ್ಕೂ ಬೆಂಬಲಿಸಿದ ಪತ್ನಿ ಮತ್ತು ಅವರ ಮಾಜಿ ಸಹ ಆಟಗಾರರಿಗೆ ಧನ್ಯವಾದ ಅರ್ಪಿಸಿದ್ದಾರೆ. ಅಲ್ಲದೆಅವರ ತರಬೇತುದಾರ ಮನಬೇಂದ್ರ ಘೋಷ್ ಅವರಿಗೆ ವಿಶೇಷ ಗೌರವವನ್ನು ಸಲ್ಲಿಸಿದ್ದಾರೆ.
ಮಾನಬೇಂದ್ರ ಘೋಷ್, ನನ್ನ ಕ್ರಿಕೆಟ್ ಪಯಣದಲ್ಲಿ ಆಧಾರ ಸ್ತಂಭವಾಗಿದ್ದಾರೆ. ಅವರು ಇಲ್ಲದಿದ್ದರೆ ನಾನು ಕ್ರಿಕೆಟ್ ವಲಯದಲ್ಲಿ ಎಲ್ಲಿಯೂ ತಲುಪುತ್ತಿರಲಿಲ್ಲ. ಧನ್ಯವಾದಗಳು ಸರ್… ನಿಮ್ಮ ಆರೋಗ್ಯವು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ.
ನನ್ನ ತಂದೆ ಮತ್ತು ತಾಯಿಗೆ ಧನ್ಯವಾದಗಳು, ಅವರಿಬ್ಬರೂ ನನ್ನ ಅಧ್ಯಯನದತ್ತ ಗಮನಹರಿಸುವಂತೆ ನನ್ನ ಮೇಲೆ ಒತ್ತಡ ಹೇರಲಿಲ್ಲ. ಬದಲಿಗೆ ಅವರು ನನ್ನನ್ನು ಕ್ರಿಕೆಟ್‌ನಲ್ಲಿ ಮುಂದುವರಿಸಲು ಪ್ರೋತ್ಸಾಹಿಸಿದರು. ಯಾವಾಗಲೂ ನನ್ನ ಪರವಾಗಿ ನಿಂತ ನನ್ನ ಪತ್ನಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಮನೋಜ್ ತಿವಾರಿ ಬರೆದುಕೊಂಡಿದ್ದಾರೆ.
ಮನೋಜ್ ತಿವಾರಿ ವೃತ್ತಿಜೀವನ:
ಟೀಮ್ ಇಂಡಿಯಾ ಪರ 12 ಏಕದಿನ ಪಂದ್ಯಗಳಲ್ಲಿ ಬ್ಯಾಟ್ ಬೀಸಿರುವ ತಿವಾರಿ ಒಟ್ಟು 287 ರನ್ ಕಲೆಹಾಕಿದ್ದಾರೆ. ಈ ವೇಳೆ 1 ಶತಕ ಹಾಗೂ 1 ಅರ್ಧಶತಕಗಳನ್ನು ಬಾರಿಸಿದ್ದರು. ಇನ್ನು 3 ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಅವರು 1 ಇನಿಂಗ್ಸ್ನಲ್ಲಿ ಮಾತ್ರ ಬ್ಯಾಟ್ ಮಾಡಿದ್ದರು. ಈ ವೇಳೆ 15 ರನ್ಗಳಿಸಲಷ್ಟೇ ಶಕ್ತರಾಗಿದ್ದರು.
ಇದನ್ನೂ ಓದಿ: Team India: ಶತಕ ಬಾರಿಸದೇ ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ
ಐಪಿಎಲ್ ಕೆರಿಯರ್:
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮನೋಜ್ ತಿವಾರಿ ಕೊಲ್ಕತ್ತಾ ನೈಟ್ ರೈಡರ್ಸ್, ರೈಸಿಂಗ್ ಪುಣೆ ಸೂಪರ್ಜೈಂಟ್ಸ್ ಪರ ಕಣಕ್ಕಿಳಿದಿದ್ದರು. ಈ ವೇಳೆ ಒಟ್ಟು 98 ಪಂದ್ಯಗಳನ್ನಾಡಿರುವ ಅವರು ಒಟ್ಟು 1686 ರನ್ ಬಾರಿಸಿದ್ದಾರೆ. ಇದೇ ವೇಳೆ ಅವರ ಬ್ಯಾಟ್ನಿಂದ 7 ಅರ್ಧಶತಕಗಳು ಮೂಡಿಬಂದಿದ್ದವು.