IND vs WI: ಟಿ20 ಕ್ರಿಕೆಟ್ನಲ್ಲಿ ಯಾರು ಬೆಸ್ಟ್? 3 ಮೈದಾನಗಳಲ್ಲಿ ಭಾರತದ ಪ್ರದರ್ಶನ ಹೇಗಿದೆ ಗೊತ್ತಾ?
IND vs WI: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಮತ್ತು ಏಕದಿನ ಸರಣಿಯ ನಂತರ, ಇದೀಗ ಟಿ20 ಆಕ್ಷನ್ ಇಂದಿನಿಂದ ಆರಂಭವಾಗಲಿದೆ.
ಭಾರತ ಮತ್ತು ವೆಸ್ಟ್ ಇಂಡೀಸ್ (India vs West Indies) ನಡುವಿನ ಟೆಸ್ಟ್ ಮತ್ತು ಏಕದಿನ ಸರಣಿಯ ನಂತರ, ಇದೀಗ ಟಿ20 ಆಕ್ಷನ್ ಇಂದಿನಿಂದ ಆರಂಭವಾಗಲಿದೆ. ಆಗಸ್ಟ್ 3 ರಂದು ನಡೆಯುತ್ತಿರುವ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಟ್ರಿನಿಡಾಡ್ನ ಬ್ರಿಯಾನ್ ಲಾರಾ ಮೈದಾನದಲ್ಲಿ (Brian Lara Stadium, Trinidad) ನಡೆಯಲ್ಲಿದೆ. ಕೊನೆಯ ಏಕದಿನ ಪಂದ್ಯ ಇದೇ ಮೈದಾನದಲ್ಲಿ ನಡೆದಿದ್ದರಿಂದ, ಆ ಪಂದ್ಯದಲ್ಲಿ ಗೆಲುವು ಸಾಧಿಸಿದಂತೆ ಈ ಪಂದ್ಯದಲ್ಲೂ ಗೆಲ್ಲುವ ನಿರೀಕ್ಷೆಯೊಂದಿಗೆ ಭಾರತ ಕಣಕ್ಕಿಳಿಯುತ್ತಿದೆ. ಇತ್ತ ಎರಡೂ ಸರಣಿಗಳನ್ನು ಕಳೆದುಕೊಂಡಿರುವ ವೆಸ್ಟ್ ಇಂಡೀಸ್ ಈ ಮಾದರಿಯಲ್ಲಾದರೂ ಮೇಲುಗೈ ಸಾಧಿಸುವ ಗುರಿಯೊಂದಿಗೆ ಕಣಕ್ಕಿಳಿಯಲ್ಲಿದೆ. ಟಿ20 ಕ್ರಿಕೆಟ್ಗೆ (T20 Cricket) ಹೇಳಿ ಮಾಡಿಸಿದಂತಹ ಆಟಗಾರರೇ ಉಭಯ ತಂಡದಲ್ಲಿರುವುದರಿಂದ ಈ ಚುಟುಕು ಮಾದರಿಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಇನ್ನು ಉಭಯ ತಂಡಗಳ ಟಿ20 ಮಾದರಿಯ ಮುಖಾಮುಖಿ ವರದಿಯನ್ನು ನೋಡುವುದಾದರೆ, ಇಲ್ಲೂ ಸಹ ಟೀಂ ಇಂಡಿಯಾವೇ ಮೇಲುಗೈ ಸಾಧಿಸಿದೆ. ಟೆಸ್ಟ್ ಮತ್ತು ಏಕದಿನ ಮಾದರಿಯಂತೆ ಈ ಮಾದರಿಯಲ್ಲೂ ಟೀಂ ಇಂಡಿಯಾ ಕಳೆದ ಕೆಲವು ವರ್ಷಗಳಿಂದ ಮೇಲುಗೈ ಸಾಧಿಸುತ್ತಿದೆ. ವೆಸ್ಟ್ ಇಂಡೀಸ್ ಎರಡು ಬಾರಿ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿರಬಹುದು. ಆದರೆ ಕಳೆದ ನಾಲ್ಕೈದು ವರ್ಷಗಳಲ್ಲಿ ಟೀಂ ಇಂಡಿಯಾದ ಮುಂದೆ ವಿಂಡೀಸ್ ಆಟ ನಡೆದಿಲ್ಲ. ಇದಕ್ಕೆ ಅಂಕಿ ಅಂಶಗಳೇ ಸಾಕ್ಷಿಯಾಗಿವೆ.
IND vs WI: ‘ನಮಗೆ ಐಷಾರಾಮಿ ಸೌಕರ್ಯ ಬೇಕಿಲ್ಲ, ಆದರೆ..’; ವಿಂಡೀಸ್ ಬೋರ್ಡ್ ವಿರುದ್ಧ ಹಾರ್ದಿಕ್ ಅಸಮಾಧಾನ
25 ಬಾರಿ ಮುಖಾಮುಖಿ
ಚುಟುಕು ಮಾದರಿಯಲ್ಲಿ ಉಭಯ ತಂಡಗಳು 25 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ 17 ಪಂದ್ಯಗಳನ್ನು ಭಾರತ ಗೆದ್ದಿದ್ದರೆ, ವೆಸ್ಟ್ ಇಂಡೀಸ್ 7 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ. ಇನ್ನೂಳಿದಂತೆ ಒಂದು ಪಂದ್ಯ ಫಲಿತಾಂಶವಿಲ್ಲದೆ ಕೊನೆಗೊಂಡಿದೆ. ಇನ್ನು ಭಾರತದಲ್ಲಿ ಎರಡೂ ತಂಡಗಳು 10 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ ಭಾರತ 8 ಪಂದ್ಯಗಳಲ್ಲಿ ಗೆದ್ದಿದ್ದರೆ, ಕೇವಲ 2 ಪಂದ್ಯಗಳಲ್ಲಿ ವಿಂಡೀಸ್ ಗೆಲುವು ದಾಖಲಿಸಿದೆ.
ಭಾರತದ್ದೇ ಮೇಲುಗೈ
ಹಾಗೆಯೇ ಕೆರಿಬಿಯನ್ ನಾಡಲ್ಲಿ ಈ ಉಭಯರ ಮುಖಾಮುಖಿಯನ್ನು ನೋಡುವುದಾದರೆ, ಇಲ್ಲಿ ಈ ಎರಡೂ ತಂಡಗಳು ಏಳು ಪಂದ್ಯಗಳನ್ನು ಆಡಿದ್ದು, ಇಲ್ಲೂ ಸಹ ಮೇಲುಗೈ ಸಾಧಿಸಿರುವ ಭಾರತ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, ಆತಿಥೇಯರು ಕೇವಲ 1 ಪಂದ್ಯದಲ್ಲಿ ಗೆಲುವು ಕಂಡಿದ್ದಾರೆ. ಇನ್ನು ತಟಸ್ಥ ಸ್ಥಳಗಳಲ್ಲಿ ಎರಡೂ ತಂಡಗಳು ಎಂಟು ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ವಿಂಡೀಸ್ ನಾಲ್ಕು ಪಂದ್ಯಗಳನ್ನು ಗೆದ್ದಿದ್ದರೆ, ಭಾರತ ಮೂರು ಪಂದ್ಯಗಳನ್ನು ಗೆದ್ದು ಬೀಗಿದೆ. ಒಂದು ಪಂದ್ಯ ಯಾವುದೇ ಫಲಿತಾಂಶವಿಲ್ಲದೆ ಕೊನೆಗೊಂಡಿದೆ.
ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ಹೇಗಿದೆ ಪ್ರದರ್ಶನ?
ತರೂಬಾದಲ್ಲಿರುವ ಬ್ರಿಯಾನ್ ಲಾರಾ ಕ್ರೀಡಾಂಗಣವು ಕೇವಲ ಒಂದು ಅಂತರಾಷ್ಟ್ರೀಯ ಪುರುಷರ ಟಿ20 ಪಂದ್ಯವನ್ನು ಆಯೋಜಿಸಿದೆ. ಕಾಕತಾಳೀಯವಾಗಿ, ಜುಲೈ 29, 2022 ರಂದು ನಡೆದ ಆ ಪಂದ್ಯದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ಪರಸ್ಪರ ಮುಖಾಮುಖಿಯಾದವು. ಆ ಪಂದ್ಯದಲ್ಲಿ ಭಾರತವು ಮೊದಲ ಇನ್ನಿಂಗ್ಸ್‌ನಲ್ಲಿ 190 ರನ್ ಕಲೆಹಾಕಿತ್ತು. ಅಂತಿಮವಾಗಿ ಪಂದ್ಯವನ್ನು 68 ರನ್‌ಗಳಿಂದ ಗೆದ್ದುಕೊಂಡಿತ್ತು.
ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿನ ಮುಖಾಮುಖಿ ವರದಿ
ಬ್ರಿಯಾನ್ ಲಾರಾ ಸ್ಟೇಡಿಯಂನಂತೆಯೇ, ಎರಡೂ ತಂಡಗಳು ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಕೇವಲ ಒಮ್ಮೆ ಮುಖಾಮುಖಿಯಾಗಿವೆ. ಆಗಸ್ಟ್ 6, 2019 ರಂದು ನಡೆದ ಪಂದ್ಯದಲ್ಲಿ ಭಾರತವು 5 ಎಸೆತಗಳು ಬಾಕಿ ಇರುವಂತೆಯೇ 7 ವಿಕೆಟ್‌ಗಳಿಂದ, ವೆಸ್ಟ್ ಇಂಡೀಸ್ ನೀಡಿದ್ದ 147 ರನ್ಗಳ ಗುರಿಯನ್ನು ಬೆನ್ನಟ್ಟಿತು.
ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಮುಖಾಮುಖಿ ವರದಿ
ಲಾಡರ್‌ಹಿಲ್‌ನಲ್ಲಿ ಉಭಯ ತಂಡಗಳು ಆರು ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಆತಿಥೇಯರು 3-2 ರಿಂದ ಮುನ್ನಡೆ ಸಾಧಿಸಿದ್ದಾರೆ. ಇಲ್ಲಿ ನಡೆದ ಮೊದಲ 4 ಪಂದ್ಯಗಳಲ್ಲಿ ವಿಂಡೀಸ್ ತಂಡ 3 ರಲ್ಲಿ ಗೆಲುವು ದಾಖಲಿಸಿದೆ. ಒಂದು ಪಂದ್ಯ ಯಾವುದೇ ಫಲಿತಾಂಶವಿಲ್ಲದೆ ಕೊನೆಗೊಂಡಿದೆ. ಮತ್ತೊಂದೆಡೆ, ಭಾರತವು 2022 ರಲ್ಲಿ ಇಲ್ಲಿ ಆಡಿದ ಕೊನೆಯ ಎರಡು ಪಂದ್ಯಗಳನ್ನು ಗೆದ್ದಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:53 am, Thu, 3 August 23