ವೆಸ್ಟ್ ಇಂಡೀಸ್ (India vs West Indies) ವಿರುದ್ದದ 3 ಪಂದ್ಯಗಳ ಏಕದಿನ ಸರಣಿ ಆಡುತ್ತಿರುವ ಟೀಮ್ ಇಂಡಿಯಾ (Team India) ಮೊದಲ ಪಂದ್ಯದಲ್ಲಿ 3 ರನ್ಗಳಿಂದ ರೋಚಕ ಜಯ ಸಾಧಿಸಿದೆ. ಇದೀಗ ಉಭಯ ತಂಡಗಳ ನಡುವಿನ ಸರಣಿಯ ಎರಡನೇ ಪಂದ್ಯ ಭಾನುವಾರ (ಜುಲೈ 24) ನಡೆಯಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದರೆ, ಪಾಕಿಸ್ತಾನದ ಹೆಸರಿನಲ್ಲಿರುವ ವಿಶ್ವ ದಾಖಲೆಯನ್ನು ಮುರಿಯಲಿದೆ. ಹೌದು, ವಿಂಡೀಸ್ ವಿರುದ್ದ 2ನೇ ಪಂದ್ಯ ಗೆದ್ದರೆ ಒಂದೇ ತಂಡದ ಪರ ಸತತವಾಗಿ ಅತೀ ಹೆಚ್ಚು ಬಾರಿ ದ್ವಿಪಕ್ಷೀಯ ಏಕದಿನ ಸರಣಿ ಗೆದ್ದ ತಂಡದ ಎಂಬ ದಾಖಲೆ ಟೀಮ್ ಇಂಡಿಯಾ ಪಾಲಾಗಲಿದೆ.
ಭಾನುವಾರ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಗೆದ್ದರೆ 2-0 ಅಂತರದಲ್ಲಿ ಸರಣಿ ವಶಪಡಿಸಿಕೊಳ್ಳಲಿದೆ. ಇದರೊಂದಿಗೆ ವೆಸ್ಟ್ ಇಂಡೀಸ್ ವಿರುದ್ಧ ಸತತವಾಗಿ 12 ದ್ವಿಪಕ್ಷೀಯ ಏಕದಿನ ಸರಣಿ ಗೆದ್ದ ತಂಡ ಎನಿಸಿಕೊಳ್ಳಲಿದೆ. ಸದ್ಯ ಭಾರತ ಮತ್ತು ಪಾಕಿಸ್ತಾನ ತಂಡಗಳು ದ್ವಿಪಕ್ಷೀಯ ಸರಣಿಯಲ್ಲಿ ಸತತವಾಗಿ 11 ಸರಣಿಗಳನ್ನು ಗೆದ್ದು ಸಮಬಲದಲ್ಲಿದೆ. ಹೀಗಾಗಿ ವೆಸ್ಟ್ ಇಂಡೀಸ್ ವಿರುದ್ದ ಗೆಲ್ಲುವ ಮೂಲಕ ಹೊಸ ಇತಿಹಾಸ ಬರೆಯುವ ಅವಕಾಶ ಟೀಮ್ ಇಂಡಿಯಾ ಮುಂದಿದೆ.
ವೆಸ್ಟ್ ಇಂಡೀಸ್ ವಿರುದ್ಧ ಟೀಮ್ ಇಂಡಿಯಾ ಇದುವರೆಗೆ ಸತತ 11 ದ್ವಿಪಕ್ಷೀಯ ಏಕದಿನ ಸರಣಿಗಳನ್ನು ಗೆದ್ದಿದೆ. ಅಂದರೆ ವಿಂಡೀಸ್ ವಿರುದ್ದ ಏಕದಿನ ಸರಣಿಯಲ್ಲಿ ಭಾರತ ತಂಡವು ಕೊನೆಯ ಬಾರಿ ಸೋತಿರುವುದು 2006 ರಲ್ಲಿ. ಆನಂತರ ಜನವರಿ 2007 ರಿಂದ ಶುರುವಾದ ಗೆಲುವಿನ ನಾಗಾಲೋಟ ಮುಂದುವರೆದಿದೆ. ಈ ಬಾರಿ ಶಿಖರ್ ಧವನ್ ನೇತೃತ್ವದ ಭಾರತ ತಂಡ ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿದೆ. ಇದೀಗ ಎರಡನೇ ಪಂದ್ಯದಲ್ಲೂ ಇದೇ ಪುನರಾವರ್ತನೆಯಾದಲ್ಲಿ ಹೊಸ ಇತಿಹಾಸ ನಿರ್ಮಿಸಲಿದೆ.
ಇನ್ನು ಪಾಕಿಸ್ತಾನ್ ತಂಡವು ಜಿಂಬಾಬ್ವೆ ವಿರುದ್ಧ ಸತತವಾಗಿ 11 ಸರಣಿಗಳನ್ನು ಗೆದ್ದು ಈ ದಾಖಲೆ ನಿರ್ಮಿಸಿದೆ. ಆದರೆ ಜಿಂಬಾಬ್ವೆಯನ್ನು ಅತ್ಯಂತ ದುರ್ಬಲ ತಂಡವೆಂದು ಪರಿಗಣಿಸಲಾಗಿದೆ. ಇತ್ತ ಟೀಮ್ ಇಂಡಿಯಾ 2007 ರಿಂದ ವೆಸ್ಟ್ ಇಂಡೀಸ್ ವಿರುದ್ದ ಪಾರುಪತ್ಯ ಸಾಧಿಸುತ್ತಾ ಬರುತ್ತಿದ್ದು, ಈ ಮೂಲಕ ಇದೀಗ ಹೊಸ ಇತಿಹಾಸ ನಿರ್ಮಿಸುವ ಹೊಸ್ತಿಲಿಗೆ ಬಂದು ನಿಂತಿದೆ. ಅದರಂತೆ 2ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಟೀಮ್ ಇಂಡಿಯಾ ಹೊಸ ಇತಿಹಾಸ ಬರೆಯಲಿದೆಯಾ ಕಾದು ನೋಡಬೇಕಿದೆ.
Published On - 12:03 pm, Sun, 24 July 22