ಶಿಖರ್ ಧವನ್ ನಾಯಕತ್ವದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯನ್ನು ಕ್ಲೀನ್ಸ್ವೀಪ್ ಮಾಡಿ ಸಾಧನೆ ಗೈದಿದ್ದ ಭಾರತ (India vs West Indies) ತಂಡ ಇದೀಗ ಚುಟುಕು ಸಮರಕ್ಕೆ ಸಜ್ಜಾಗಿದೆ. ಇಂದು ಟ್ರಿನಿಡಾಡ್ನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ಮೊದಲ ಟಿ20 ಪಂದ್ಯ ಆಯೋಜಿಸಲಾಗಿದೆ. ಏಕದಿನ ಸರಣಿಯಿಂದ ವಿಶ್ರಾಂತಿ ಪಡೆದುಕೊಂಡಿದ್ದ ರೋಹಿತ್ ಶರ್ಮಾ (Rohit Sharma) ತಂಡಕ್ಕೆ ಮರಳಿದ್ದು ನಾಯಕತ್ವದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಇವರ ಜೊತೆಗೆ ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ದಿನೇಶ್ ಕಾರ್ತಿಕ್ ಕೂಡ ತಂಡಕ್ಕೆ ಮರಳಿದ್ದಾರೆ. ಆದರೆ, ಕೆ.ಎಲ್. ರಾಹುಲ್ (KL Rahul) ಮತ್ತು ಕುಲ್ದೀಪ್ ಯಾದವ್ ಬಗ್ಗೆ ಇನ್ನೂ ಖಚಿತ ಮಾಹಿತಿಯಿಲ್ಲ. ಸೀನಿಯರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ಮರಳಿ ಸೇರಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ. ಹೀಗಾಗಿ ಇಂದಿನ ಪಂದ್ಯಕ್ಕೆ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಸಾಕಷ್ಟು ರೋಚಕತೆ ಸೃಷ್ಟಿಸಿದೆ.
ಭಾರತದ ಟಿ20 ತಂಡದಲ್ಲಿ ಶಿಖರ್ ಧವನ್ ಇಲ್ಲದ ಕಾರಣ ರೋಹಿತ್ ಶರ್ಮಾ ಜೊತೆ ಕಣಕ್ಕಿಳಿಯುವವರು ಯಾರು ಎಂಬುದು ಕುತೂಹಲ ಕೆರಳಿಸಿದೆ. ಯಾಕೆಂದರೆ ರಾಹುಲ್ ಲಭ್ಯತೆ ಬಗ್ಗೆಯೂ ಅನುಮಾನವಿದೆ. ರಿಷಭ್ ಪಂತ್ ಓಪನರ್ ಆಗಿ ಕಣಕ್ಕಿಳಿದರೆ ಅಚ್ಚರಿ ಪಡಬೇಕಿಲ್ಲ. ವಿರಾಟ್ ಕೊಹ್ಲಿ ಈ ಸರಣಿಯಿಂದಲೂ ವಿಶ್ರಾಂತಿ ತೆಗೆದು ಕೊಂಡಿದ್ದಾರೆ. ಹೀಗಾಗಿ ಕೊಹ್ಲಿ ಜಾಗದಲ್ಲಿ ದೀಪಕ್ ಹೂಡಾ ಅಥವಾ ಶ್ರೇಯಸ್ ಅಯ್ಯರ್ ಅವರಿಗೆ ಸ್ಥಾನ ಸಿಗುವ ಸಾಧ್ಯತೆ ಇದೆ.
ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಮಧ್ಯಮ ಕ್ರಮಾಂಕದ ಬಲದವಾದರೆ ರವೀಂದ್ರ ಜಡೇಜಾ ಹಾಗೂ ದಿನೇಶ್ ಕಾರ್ತಿಕ್‌ಗೆ ಫಿನಿಶರ್ ಜವಾಬ್ದಾರಿ ಹೊರಬಹುದು. ಆರ್. ಅಶ್ವಿನ್ಗೆ ಆಡುವ ಬಳಗದಲ್ಲಿ ಸ್ಥಾನ ಇದೆಯೇ ಎಂಬುದನ್ನು ನೋಡಬೇಕಿದೆ. ಯಾಕೆಂದರೆ ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ರವಿ ಬಿಷ್ಣೋಯಿ, ಜಡೇಜಾ ಸ್ಪಿನ್ ವಿಭಾಗದಲ್ಲಿ ಇರುವುದರಿಂದ ಅಶ್ವಿನ್ಗೆ ಅವಕಾಶ ಅನುಮಾನ. ವೇಗಿಗಳಾಗಿ ಭುವನೇಶ್ವರ್ ಕುಮಾರ್, ಆವೇಶ್ ಖಾನ್, ಅರ್ಶ್ದೀಪ್ ಸಿಂಗ್, ಹರ್ಷಲ್ ಪಟೇಲ್ ಇದ್ದು ಯಾರಿಗೆ ಸ್ಥಾನ ಎಂಬುದು ನೋಡಬೇಕಿದೆ.
ಇತ್ತ ವೆಸ್ಟ್ ಇಂಡೀಸ್ ಬಳಗವು ಚುಟುಕು ಕ್ರಿಕೆಟ್‌ನಲ್ಲಿ ತನ್ನ ಸಾಮರ್ಥ್ಯವನ್ನು ಪಣಕ್ಕೊಡ್ಡುವ ಸವಾಲು ಎದುರು ಸುತ್ತಿದೆ. ದೊಡ್ಡ ಹೊಡೆತಗಳನ್ನು ಹೊಡೆಯುವ ಆಟಗಾರರು ತಂಡದಲ್ಲಿದ್ದಾರೆ. ಶಿಮ್ರೋನ್ ಹೆಟ್ಮೇರ್ ತಂಡ ಸೇರಿಕೊಂಡಿದ್ದು, ರೋಮನ್ ಪೋವೆಲ್, ಓಡೆನ್ ಸ್ಮಿತ್, ಜೇಸನ್ ಹೋಲ್ಡರ್ ಪೂರನ್, ಬ್ರಾಂಡನ್ ಕಿಂಗ್ ಮತ್ತು ಖೈಲ್ ಮೇಯರ್ಸ್ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಬೌಲಿಂಗ್ನಲ್ಲೂ ಅಲ್ಜರಿ ಜೋಸೆಫ್, ಒಬೆಡ್ ಮೆಖಾಯ್, ಹೇಡನ್ ವಾಲ್ಶ್ ಇದ್ದಾರೆ.
ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಡಿಡಿ ಸ್ಪೋರ್ಟ್ಸ್ನಲ್ಲಿ ನೇರಪ್ರಸಾರ ಕಾಣಲಿದೆ. ಫ್ಯಾನ್ಕೋಡ್ ಆ್ಯಪ್ನಲ್ಲಿ ಕೂಡ ಲೈವ್ ಸ್ಟ್ರೀಮ್ ವೀಕ್ಷಿಸಬಹುದು.
ಭಾರತ ಸಂಭಾವ್ಯ ಪ್ಲೇಯಿಂಗ್ XI: ರೋಹಿತ್ ಶರ್ಮಾ (ನಾಯಕ), ರಿಷಭ್ ಪಂತ್, ದೀಪಕ್ ಹೂಡ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ಹರ್ಷಲ್ ಪಟೇಲ್, ಕುಲ್ದೀಪ್ ಯಾದವ್, ಭುವನೇಶ್ವರ್ ಕುಮಾರ್, ಅರ್ಶ್ದೀಪ್ ಸಿಂಗ್.
Published On - 8:00 am, Fri, 29 July 22