12ನೇ ಆವೃತ್ತಿಯ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ (ICC Women’s World Cup 2022) ಟೂರ್ನಿಯ 10ನೇ ಪಂದ್ಯದಲ್ಲಿಂದು ಭಾರತ ಮಹಿಳಾ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ ಅನ್ನು ಎದುರಿಸುತ್ತಿದೆ. ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ (West Indies Women vs India Women) ನಾಯಕಿ ಮಿಥಾಲಿ ರಾಜ್ (Mithali Raj) ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಭಾರತ ತಂಡವು ತನ್ನ ಮೊದಲ ಪಂದ್ಯವನ್ನು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ದ ಕಣಕ್ಕಿಳಿದು ಜಯಭೇರಿ ಭಾರಿಸಿದರೆ, ನ್ಯೂಜಿಲೆಂಡ್ ವಿರುದ್ಧ ಸೋಲುಂಡಿತು. ಹೀಗಾಗಿ ಪ್ರಸ್ತುತ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಪಾಯಿಂಟ್ ಪಟ್ಟಿಯಲ್ಲಿ ಮೇಲೇರಲು ಭಾರತೀಯ ವನಿತೆಯರಿಗೆ ಈ ಪಂದ್ಯ ಮಹತ್ವದ್ದಾಗಿದೆ. ಇತ್ತ ವೆಸ್ಟ್ ಇಂಡೀಸ್ ತಂಡವು ಮೊದಲೆರಡು ಪಂದ್ಯಗಳಲ್ಲಿ ಬಲಿಷ್ಠ ತಂಡಗಳಾದ ಹಾಗೂ ಟ್ರೋಫಿ ಗೆಲ್ಲುವ ಫೆವರಿಟ್ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಗೆದ್ದು ಅಬ್ಬರಿಸಿದೆ. ಹೀಗಾಗಿ ಇಂದಿನ ಪಂದ್ಯ ಸಾಕಷ್ಟು ರೋಚಕತೆ ಸೃಷ್ಟಿಸಿದೆ.
ಸದ್ಯ ಹ್ಯಾಮಿಲ್ಟನ್‌ನ ಸೆಡ್ಡನ್ ಪಾರ್ಕ್ ಮೈದಾನದಲ್ಲಿ ಆರಂಭವಾಗಿರುವ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ಭಾರತ ಸ್ಫೋಟಕ ಆರಂಭ ಪಡೆದುಕೊಳ್ಳುವ ಜೊತೆ ಪ್ರಮುಖ ವಿಕೆಟ್ ಕಳೆದುಕೊಂಡಿದೆ. ಸ್ಮೃತಿ ಮಂದಾನ ಹಾಗೂ ಯಸ್ತಿಕಾ ಭಾಟಿಯಾ ಇನ್ನಿಂಗ್ಸ್ ಆರಂಭಿಸಿದರು. ಭಾಟಿಯಾ ಕೇವಲ 21 ಎಸೆತಗಳಲ್ಲಿ 6 ಬೌಂಡರಿಯೊಂದಿಗೆ 31 ರನ್ ಸಿಡಿಸಿ ಔಟಾದರು. ಈ ಜೋಡಿ ಮೊದಲ ವಿಕೆಟ್ಗೆ 6.3 ಓವರ್ನಲ್ಲಿ 49 ರನ್ ಕಲೆಹಾಕಿತು. ನಾಯಕಿ ಮಿಥಾಲಿ ರಾಜ್ ಈ ಬಾರಿ ಕೂಡ ವೈಫಲ್ಯ ಅನುಭವಿಸಿದರು. ಇವರ ಆಟ ಕೇವಲ 5 ರನ್ಗೆ ಅಂತ್ಯವಾಯಿತು. ಸದ್ಯ ಮಂದಾನ ಜೊತೆ ದೀಪ್ತಿ ಶರ್ಮಾ ಕ್ರೀಸ್ನಲ್ಲಿದ್ದು ಎಚ್ಚರಿಕೆಯ ಬ್ಯಾಟಿಂಗ್ ನಡೆಸುತ್ತಿದ್ದಾರೆ.
ಇಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಕಳೆದ ನ್ಯೂಜಿಲೆಂಡ್ ವಿರುದ್ಧ ಆಡಿದ ಆಟಗಾರರೇ ಕಣಕ್ಕಿಳಿದಿದ್ದಾರೆ. ಇತ್ತ ವೆಸ್ಟ್ ಇಂಡೀಸ್ ತಂಡದಲ್ಲೂ ಯಾವುದೇ ಬದಲಾವಣೆ ಇಲ್ಲ. ಇಲ್ಲಿದೆ ನೋಡಿ ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್.
ಭಾರತ ಪ್ಲೇಯಿಂಗ್ XI: ಸ್ಮೃತಿ ಮಂದಾನ, ಯಸ್ತಿಕಾ ಭಾಟಿಯಾ, ದೀಪ್ತಿ ಶರ್ಮಾ, ಹರ್ಮನ್ಪ್ರೀತ್ ಕೌರ್, ಮಿಥಾಲಿ ರಾಜ್ (ನಾಯಕಿ), ರಿಚ್ಚ ಘೋಷ್ (ವಿಕೆಟ್ ಕೀಪರ್), ಸ್ನೇಹ್ ರಾಣ, ಜೂಲಾನ್ ಗೋಸ್ವಾಮಿ, ಮೇಘ್ನಾ ಸಿಂಗ್, ಪೂಜಾ ವಸ್ತ್ರಾಕರ್, ರಾಜೇಶ್ವರಿ ಗಾಯಕ್ವಾಡ್.
ವೆಸ್ಟ್ ಇಂಡೀಸ್ ಪ್ಲೇಯಿಂಗ್ XI: ಡಿಯಾಂಡ್ರಾ ಡಾಟಿನ್, ಹೇಯ್ಲಿ ಮ್ಯಾಥ್ಯೂಸ್, ಕೈಸಿಯಾ ನೈಟ್, ಸ್ಟೆಫನಿ ಟೇಲರ್ (ನಾಯಕಿ), ಶೆಮೈನ್ ಕ್ಯಾಂಪ್‌ಬೆಲ್ಲೆ (ವಿಕೆಟ್ ಕೀಪರ್), ಚೆಡಿಯನ್ ನೇಷನ್, ಚಿನೆಲ್ಲೆ ಹೆನ್ರಿ, ಆಲಿಯಾ ಅಲೀನ್, ಶಾಮಿಲಿಯಾ ಕೊನ್ನೆಲ್, ಅನಿಸಾ ಮೊಹಮ್ಮದ್, ಶಕೆರಾ ಸೆಲ್ಮನ್.
ಹ್ಯಾಮಿಲ್ಟನ್ ಸೆಡ್ಡನ್ ಪಾರ್ಕ್‌ನಲ್ಲಿ ಬೌಲರ್‌ಗಳಿಗಿಂತ ಬ್ಯಾಟಿಂಗ್ ಮಾಡಲು ಉತ್ತಮ ವಿಕೆಟ್ ಆಗಿದೆ. ಮೊದಲು ಬ್ಯಾಟಿಂಗ್ ಮಾಡಿದ ತಂಡ ಉತ್ತಮ ರನ್‌ಗಳನ್ನ ಹೊಂದುವುದು ಅವಶ್ಯಕ. ಏಕೆಂದರೆ ಇಲ್ಲಿ ಯಾವಾಗಲೂ ಮೊದಲು ಬ್ಯಾಟಿಂಗ್ ಮಾಡುವುದು ಅತ್ಯುತ್ತಮ ಆಯ್ಕೆಯಾಗಿದೆ. ಇದಕ್ಕಾಗಿಯೆ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿದ್ದು ಸವಾಲಿನ ಟಾರ್ಗೆಟ್ ನೀಡುವ ಯೋಜನೆಯಲ್ಲಿದೆ.
ಸ್ಟೆಫನಿ ಟೇಲರ್ ನೇತೃತ್ವದ ವೆಸ್ಟ್ ಇಂಡೀಸ್ ತಂಡ ಐಸಿಸಿ ಮಹಿಳಾ ವಿಶ್ವಕಪ್‌ನಲ್ಲಿ ಗೆಲುವಿನ ಆರಂಭವನ್ನು ಮಾಡಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 3 ರನ್‌ಗಳ ರೋಚಕ ಜಯ ದಾಖಲಿಸಿತ್ತು. ಮತ್ತು ತನ್ನ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ವನಿತೆಯರ ತಂಡದ ವಿರುದ್ಧ ಗೆಲುವನ್ನು ಸಾಧಿಸಿದೆ. ಗೆಲುವಿನ ನಾಗಲೋಟ ಆರಂಭಿಸಿರುವ ವೆಸ್ಟ್ ಇಂಡೀಸ್ಗೆ ಭಾರತ ಶಾಕ್ ನೀಡುತ್ತಾ ಎಂಬುದು ನೋಡಬೇಕಿದೆ.
Pink Ball Test: ಪಿಂಕ್ ಬಾಲ್ ಟೆಸ್ಟ್ನಲ್ಲಿ ಮೊದಲ ಗೆಲುವು, ಶತಕ ದಾಖಲಾಗಿದ್ದು ಯಾವಾಗ? ಇಲ್ಲಿದೆ ಕುತೂಹಲಕಾರಿ ಸಂಗತಿ