ತವರಿನಲ್ಲಿ ಇಂಗ್ಲೆಂಡಿಗೆ ಮಣ್ಣು ಮುಕ್ಕಿಸಿ, ವೆಸ್ಟ್ ಇಂಡೀಸ್ಗೂ ಸೋಲಿನ ರುಚಿ ತೋರಿಸಿದ ಟೀಂ ಇಂಡಿಯಾ ಇದೀಗ ಜಿಂಬಾಬ್ವೆ ತಲುಪಿದ್ದು, ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಗುರುವಾರ ನಡೆಯಲಿರುವ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ಜಿಂಬಾಬ್ವೆಯನ್ನು (india vs zimbabwe) ಎದುರಿಸಲಿದೆ. ಹರಾರೆಯಲ್ಲಿ ಪಂದ್ಯ ನಡೆಯಲಿದ್ದು, ಐಪಿಎಲ್ ಬಳಿಕ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯ ಆಡಲಿರುವ ಕೆಎಲ್ ರಾಹುಲ್ (KL Rahul) ಕೈಯಲ್ಲಿ ತಂಡದ ಕಮಾಂಡ್ ಇದೆ. ಇದೀಗ ಮೊದಲ ಏಕದಿನ ಪಂದ್ಯದಲ್ಲಿ ಕೆಎಲ್ ರಾಹುಲ್ ಯಾವ 11 ಆಟಗಾರರಿಗೆ ತಂಡದಲ್ಲಿ ಅವಕಾಶ ನೀಡಲಿದ್ದಾರೆ ಎಂಬುದು ಪ್ರಶ್ನೆಯಾಗಿದೆ.
ಭಾರತದ ಆಡುವ XI ಹೇಗಿರಲಿದೆ?
ನಾಯಕ ಕೆಎಲ್ ರಾಹುಲ್ ಜಿಂಬಾಬ್ವೆ ವಿರುದ್ಧ ಆರಂಭಿಕರಾಗಿ ಕಣಕ್ಕಿಳಿಯುವುದನ್ನು ನಾವು ಕಾಣಬಹುದು. ಶಿಖರ್ ಧವನ್ ಅವರೊಂದಿಗೆ ಕ್ರೀಸ್‌ಗೆ ತೆರಳಲಿದ್ದಾರೆ. ಕಳೆದ ಸರಣಿಯಲ್ಲಿ ಶುಭ್‌ಮನ್ ಗಿಲ್ ಓಪನರ್ ಆಗಿದ್ದರೂ, ಈಗ ಅವರು ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ ಎಂದು ಊಹಿಸಲಾಗಿದೆ. ರಾಹುಲ್ ತ್ರಿಪಾಠಿ ಮೂರನೇ ಕ್ರಮಾಂಕದಲ್ಲಿ ಆಡುವ ನಿರೀಕ್ಷೆಗಳಿವೆ. ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದರೂ ಒಬ್ಬರಿಗೆ ಮಾತ್ರ ಅವಕಾಶ ಸಿಗಲಿದೆ.
ಮಧ್ಯಮ ಕ್ರಮಾಂಕದಲ್ಲಿ ಇಶಾನ್ ಕಿಶನ್ ಆಡುವುದು ಕಷ್ಟ, ಹೀಗಾಗಿ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಸಂಜು ಸ್ಯಾಮ್ಸನ್ ನಿಭಾಯಿಸಬಹುದು. ದೀಪಕ್ ಹೂಡಾ ಆರನೇ ಸ್ಥಾನದಲ್ಲಿ ಆಡಲಿದ್ದಾರೆ. ಆಲ್ ರೌಂಡರ್ ಬಗ್ಗೆ ಮಾತನಾಡುವುದಾದರೆ ಅಕ್ಷರ್ ಪಟೇಲ್ ಈ ಪಾತ್ರವನ್ನು ನಿರ್ವಹಿಸಬಹುದು.
ಬೌಲಿಂಗ್ ವಿಭಾಗದಲ್ಲಿ ಯಾರಿದ್ದಾರೆ?
ಭಾರತ ನಾಲ್ಕು ಬೌಲರ್‌ಗಳನ್ನು ಕಣಕ್ಕಿಳಿಸಲಿದ್ದು, ಇದರಲ್ಲಿ ಪ್ರಮುಖ ಹೆಸರು ದೀಪಕ್ ಚಹಾರ್. ಗಾಯದಿಂದಾಗಿ ಕಳೆದ 6 ತಿಂಗಳಿಂದ ಚಹರ್ ಕ್ರಿಕೆಟ್ ಆಡಲು ಸಾಧ್ಯವಾಗಲಿಲ್ಲ ಮತ್ತು ಇದೀಗ ಅವರು ತಂಡಕ್ಕೆ ಮರಳಿದ್ದಾರೆ. ಆಯ್ಕೆಗಾರರು ಕೂಡ ಚಹಾರ್ ಅವರ ಪ್ರದರ್ಶನದ ಮೇಲೆ ಕಣ್ಣಿಟ್ಟಿರುತ್ತಾರೆ. ಇವರಲ್ಲದೆ ಕುಲ್ದೀಪ್ ಯಾದವ್ ಕೂಡ ಆಡುವ XI ಗೆ ಸೇರ್ಪಡೆಗೊಳ್ಳಬಹುದು. ಪ್ರಸಿದ್ಧ್ ಕೃಷ್ಣ ಮತ್ತು ಅವೇಶ್ ಖಾನ್ ವೇಗದ ಬೌಲಿಂಗ್‌ನಲ್ಲಿ ಅವಕಾಶ ಪಡೆಯಬಹುದು. ಅಂದರೆ ಮೊಹಮ್ಮದ್ ಸಿರಾಜ್, ರುತುರಾಜ್ ಗಾಯಕ್ವಾಡ್, ಶಹಬಾಜ್ ಅಹ್ಮದ್, ಇಶಾನ್ ಕಿಶನ್ ಮತ್ತು ಶಾರ್ದೂಲ್ ಠಾಕೂರ್ ಮೊದಲ ಏಕದಿನದಲ್ಲಿ ಬೆಂಚ್ ಕಾಯಲಿದ್ದಾರೆ.
ಭಾರತದ ಸಂಭಾವ್ಯ XI- ಕೆಎಲ್ ರಾಹುಲ್, ಶಿಖರ್ ಧವನ್, ರಾಹುಲ್ ತ್ರಿಪಾಠಿ, ಶುಭಮನ್ ಗಿಲ್, ಸಂಜು ಸ್ಯಾಮ್ಸನ್, ದೀಪಕ್ ಹೂಡಾ, ಅಕ್ಷರ್ ಪಟೇಲ್, ದೀಪಕ್ ಚಾಹರ್, ಕುಲದೀಪ್ ಯಾದವ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್.
Published On - 5:57 pm, Wed, 17 August 22