ಹರಾರೆಯ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆಯುತ್ತಿರುವ ಭಾರತದ ವಿರುದ್ದದ 2ನೇ ಏಕದಿನ ಪಂದ್ಯದಲ್ಲಿ ಜಿಂಬಾಬ್ವೆ ತಂಡವು 161 ರನ್ಳಿಗೆ ಆಲೌಟ್ ಆಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ನಾಯಕ ಕೆಎಲ್ ರಾಹುಲ್ ಬೌಲಿಂಗ್ ಆಯ್ದುಕೊಂಡರು. ನಾಯಕನ ನಿರ್ಧಾರವನ್ನು ಬೆಂಬಲಿಸಿದಂತೆ ಬೌಲಿಂಗ್ ದಾಳಿ ಸಂಘಟಿಸಿದ ಟೀಮ್ ಇಂಡಿಯಾ ಬೌಲರ್ಗಳು ಆರಂಭದಲ್ಲೇ ಜಿಂಬಾಬ್ವೆ ಆರಂಭಿಕರ ಮೇಲೆ ಒತ್ತಡ ಹೇರಿದರು. ಪರಿಣಾಮ ಮೊದಲ 10 ಓವರ್ಗಳಲ್ಲಿ ಜಿಂಬಾಬ್ವೆ ಕಲೆಹಾಕಿದ್ದು ಕೇವಲ 26 ರನ್ ಮಾತ್ರ.
ಇದರ ನಡುವೆ ಕೈಟಾನೊ (7) ವಿಕೆಟ್ ಪಡೆಯುವ ಮೂಲಕ ಮೊಹಮ್ಮದ್ ಸಿರಾಜ್ ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಇನ್ನೊಸೆಂಟ್ ಕೈಯಾ (16) ವಿಕೆಟ್ ಪಡೆಯುವ ಮೂಲಕ ಶಾರ್ದೂಲ್ ಠಾಕೂರ್ ಜಿಂಬಾಬ್ವೆಗೆ ಆಘಾತ ನೀಡಿದರು.
ಈ ಹಂತದಲ್ಲಿ ಕಣಕ್ಕಿಳಿದ ಜಿಂಬಾಬ್ವೆ ನಾಯಕ ಚಕಬ್ವಾ (2) ಠಾಕೂರ್ ಎಸೆತದಲ್ಲಿ ಶುಭ್ಮನ್ ಗಿಲ್ಗೆ ಕ್ಯಾಚ್ ನೀಡಿದರು. ಈ ವೇಳೆ ದಾಳಿಗಿಳಿದ ಪ್ರಸಿದ್ದ್ ಕೃಷ್ಣ ಮಧುವರೆ (2) ವಿಕೆಟ್ ಕಬಳಿಸಿ ಟೀಮ್ ಇಂಡಿಯಾಗೆ 4ನೇ ಯಶಸ್ಸು ತಂದುಕೊಟ್ಟರು.
ಕೇವಲ 31 ರನ್ಗಳಿಗೆ 4 ವಿಕೆಟ್ ಕಳೆದುಕೊಂಡ ಜಿಂಬಾಬ್ವೆಗೆ ಈ ಹಂತದಲ್ಲಿ ಸಿಕಂದರ್ ರಾಜಾ ಹಾಗೂ ಸೀನ್ ವಿಲಿಯಮ್ಸನ್ ಆಸರೆಯಾದರು. ಈ ಜೋಡಿ 30 ರನ್ಗಳ ಜೊತೆಯಾಟವಾಡುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಲು ಶ್ರಮಿಸಿದರು. ಆದರೆ ಈ ವೇಳೆ ಸ್ಪಿನ್ ಮೋಡಿ ಮಾಡಿದ ಕುಲ್ದೀಪ್ ಯಾದವ್ ಸಿಕಂದರ್ ರಾಜಾ (16) ವಿಕೆಟ್ ಕಬಳಿಸಿ ಜೊತೆಯಾಟವನ್ನು ಮುರಿಯುವಲ್ಲಿ ಸಫಲರಾದರು.
ಆದರೆ ಮತ್ತೊಂದೆಡೆ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಸೀನ್ ವಿಲಿಯಮ್ಸ್ ಭಾರತೀಯ ಬೌಲರ್ಗಳನ್ನು ಆತ್ಮ ವಿಶ್ವಾಸದಿಂದಲೇ ಎದುರಿಸಿದರು. ಅದರಂತೆ 42 ಎಸೆತಗಳಲ್ಲಿ 42 ರನ್ ಬಾರಿಸುವ ಮೂಲಕ ಅಪಾಯಕಾರಿಯಾಗುವ ಸೂಚನೆ ನೀಡಿದರು. ಅಲ್ಲದೆ ತಂಡದ ಮೊತ್ತವನ್ನು 100ರ ಗಡಿದಾಟಿಸಿದರು.
ಈ ವೇಳೆ ನಾಯಕ ಕೆಎಲ್ ರಾಹುಲ್ ಬೌಲಿಂಗ್ನಲ್ಲಿ ಮಾಡಿದ ಬದಲಾವಣೆ ಫಲ ನೀಡಿತು. ಅದರಂತೆ ವಿಲಿಯಮ್ಸ್ ಪಾರ್ಟ್ ಟೈಮ್ ಬೌಲರ್ ದೀಪಕ್ ಹೂಡಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಕಡೆ ಮುಖ ಮಾಡಿದರು. ಅಂತಿಮವಾಗಿ ಜಿಂಬಾಬ್ವೆ ತಂಡವನ್ನು 38.1 ಓವರ್ಗಳಲ್ಲಿ 161 ರನ್ಗಳಿಗೆ ಆಲೌಟ್ ಮಾಡುವ ಮೂಲಕ ಟೀಮ್ ಇಂಡಿಯಾ ಬೌಲರ್ಗಳು ಪರಾಕ್ರಮ ಮೆರೆದರು. ಭಾರತದ ಪರ ಶಾರ್ದೂಲ್ ಠಾಕೂರ್ 3 ವಿಕೆಟ್ ಕಬಳಿಸಿದರೆ, ಪ್ರಸಿದ್ದ್ ಕೃಷ್ಣ, ಸಿರಾಜ್, ದೀಪಕ್ ಹೂಡಾ, ಕುಲ್ದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದರು.
ಜಿಂಬಾಬ್ವೆ (ಪ್ಲೇಯಿಂಗ್ XI): ಇನೋಸೆಂಟ್ ಕೈಯಾ, ತಕುದ್ಜ್ವಾನಾಶೆ ಕೈಟಾನೊ, ವೆಸ್ಲಿ ಮಾಧೆವೆರೆ, ಸೀನ್ ವಿಲಿಯಮ್ಸ್, ಸಿಕಂದರ್ ರಾಜಾ, ರೆಗಿಸ್ ಚಕಬ್ವಾ(ನಾಯಕ), ರಿಯಾನ್ ಬರ್ಲ್, ಲ್ಯೂಕ್ ಜೊಂಗ್ವೆ, ಬ್ರಾಡ್ ಇವಾನ್ಸ್, ವಿಕ್ಟರ್ ನ್ಯೌಚಿ, ತನಕಾ ಚಿವಾಂಗಾ
ಭಾರತ (ಪ್ಲೇಯಿಂಗ್ XI): ಶಿಖರ್ ಧವನ್, ಶುಭಮನ್ ಗಿಲ್, ಇಶಾನ್ ಕಿಶನ್, ಕೆಎಲ್ ರಾಹುಲ್(ನಾಯಕ), ದೀಪಕ್ ಹೂಡಾ, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್
Published On - 4:01 pm, Sat, 20 August 22