
2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ (WTC 2025-27) ಭಾರತದ ಎರಡನೇ ಟೆಸ್ಟ್ ಸರಣಿ ವೆಸ್ಟ್ ಇಂಡೀಸ್ (India vs West Indies) ವಿರುದ್ಧ ನಡೆಯುತ್ತಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡವು ಮೊದಲ ದಿನವೇ ಹಿನ್ನಡೆ ಅನುಭವಿಸಿತು. ಇಡೀ ತಂಡ ಕೇವಲ 44.1 ಓವರ್‌ಗಳನ್ನು ಎದುರಿಸಿ ತನ್ನ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 162 ರನ್ ಕಲೆಹಾಕಿತು. ವಿಂಡೀಸ್ ಪಡೆಯನ್ನು ಬಹುಬೇಗ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ ಮೊದಲ ದಿನದಾಟದಂತ್ಯಕ್ಕೆ 2 ವಿಕೆಟ್‌ಗಳ ನಷ್ಟಕ್ಕೆ 121 ರನ್ ಗಳಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಸಮಬಲ ಸಾಧಿಸಲು ಭಾರತಕ್ಕೆ ಇನ್ನೂ 41 ರನ್‌ಗಳ ಅಗತ್ಯವಿದ್ದು, ಎರಡನೇ ದಿನದಾಟದಲ್ಲಿ ಬೃಹತ್ ಮುನ್ನಡೆ ಸಾಧಿಸುವ ಇರಾದೆಯಲ್ಲಿದೆ.
ಭಾರತದ ಪರ ಇನ್ನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ಮತ್ತು ಕೆ.ಎಲ್. ರಾಹುಲ್ ಮೊದಲ ವಿಕೆಟ್‌ಗೆ 68 ರನ್‌ಗಳ ಜೊತೆಯಾಟ ನೀಡಿದರು. ಯಶಸ್ವಿ ಜೈಸ್ವಾಲ್ 54 ಎಸೆತಗಳಲ್ಲಿ 7 ಬೌಂಡರಿಗಳೊಂದಿಗೆ 36 ರನ್‌ಗಳಿಸಿ ಔಟಾದರೆ, ಸಾಯಿ ಸುದರ್ಶನ್ ಆಟ ಕೇವಲ 7 ರನ್‌ಗಳಿಗೆ ಅಂತ್ಯವಾಯಿತು. ಅದರ ನಂತರ, ಕೆ.ಎಲ್. ರಾಹುಲ್ ಮತ್ತು ನಾಯಕ ಶುಭ್‌ಮನ್ ಗಿಲ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ಮೊದಲ ದಿನದಾಟದಂತ್ಯಕ್ಕೆ ಅಜೇಯರಾಗಿ ಉಳಿದು 31 ರನ್‌ಗಳ ಜೊತೆಯಾಟ ನಡೆಸಿದ್ದಾರೆ.ಮೊದಲ ದಿನದ ಆಟ ಮುಗಿದಾಗ ಆರಂಭಿಕ ಕೆಎಲ್ ರಾಹುಲ್ 114 ಎಸೆತಗಳಲ್ಲಿ 6 ಬೌಂಡರಿಗಳ ಸಹಾಯದಿಂದ ಅಜೇಯ 53 ರನ್ ಬಾರಿಸಿದರೆ, ಶುಭ್‌ಮನ್ ಗಿಲ್ 42 ಎಸೆತಗಳಲ್ಲಿ 1 ಬೌಂಡರಿಯೊಂದಿಗೆ 18 ರನ್ ಗಳಿಸಿ ಅಜೇಯರಾಗಿ ಆಡುತ್ತಿದ್ದಾರೆ.
IND vs WI: ಅತ್ಯಧಿಕ ವಿಕೆಟ್; ಮಿಚೆಲ್ ಸ್ಟಾರ್ಕ್ ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ ಸಿರಾಜ್
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ವೆಸ್ಟ್ ಇಂಡೀಸ್ ತಂಡ ಕಳಪೆ ಆರಂಭ ಪಡೆಯಿತು. ಆಟ ಆರಂಭವಾದ ಮೊದಲ 1 ಗಂಟೆಯೊಳಗೆಯೇ ತಂಡ 42 ರನ್‌ಗಳಿಗೆ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು. ಆರಂಭಿಕ ತೇಜ್‌ನಾರಾಯಣ್ ಚಂದ್ರಪಾಲ್ (0), ಬ್ರಾಂಡನ್ ಕಿಂಗ್ (12), ಮತ್ತು ಅಲಿಕ್ ಅಥನಾಜೆ (13) ಅವರನ್ನು ಮೊಹಮ್ಮದ್ ಸಿರಾಜ್ ಔಟ್ ಮಾಡಿದರೆ, ಬುಮ್ರಾ, ಜಾನ್ ಕ್ಯಾಂಪ್‌ಬೆಲ್ (8) ಅವರನ್ನು ಔಟ್ ಮಾಡಿದರು. ನಂತರ ನಾಯಕ ರೋಸ್ಟನ್ ಚೇಸ್ ಮತ್ತು ಶೈ ಹೋಪ್ ಐದನೇ ವಿಕೆಟ್‌ಗೆ 48 ರನ್ ಸೇರಿಸಿದರು. ಹೋಪ್ ಅವರನ್ನು ಕುಲ್ದೀಪ್ ಯಾದವ್ ಔಟ್ ಮಾಡಿದರೆ, ನಾಯಕ ರೋಸ್ಟನ್ ಚೇಸ್ರನ್ನು ಸಿರಾಜ್ ಬೌಲ್ಡ್ ಮಾಡಿದರು. ನಂತರ ಸುಂದರ್, ಖಾರಿ ಪಿಯರೆ (11) ಅವರನ್ನು ಎಲ್‌ಬಿಡಬ್ಲ್ಯೂ ಮಾಡಿದರೆ, ಬುಮ್ರಾ ಎರಡು ಮಾರಕ ಯಾರ್ಕರ್‌ಗಳೊಂದಿಗೆ ಜಸ್ಟಿನ್ ಗ್ರೀವ್ಸ್ (32) ಮತ್ತು ಜೋಹಾನ್ ಲಿಯಾನ್ (1) ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:17 pm, Thu, 2 October 25