ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿಂದು ಲೀಗ್ ಸುತ್ತಿನ ಕೊನೆಯ ಪಂದ್ಯ ನಡೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ಹಾಗೂ ಸ್ಕಾಟ್ ಎಡ್ವರ್ಡ್ಸ್ ನೇತೃತ್ವದ ನೆದರ್ಲೆಂಡ್ಸ್ (India vs Netherlands) ತಂಡಗಳು ಮುಖಾಮುಖಿ ಆಗಲಿದೆ. ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನ ಪಡೆದು ಈಗಾಗಲೇ ಸೆಮಿ ಫೈನಲ್ಗೇರಿರುವ ಟೀಮ್ ಇಂಡಿಯಾಕ್ಕೆ ಇದೊಂದು ಔಪಚಾರಿಕ ಪಂದ್ಯ. ಇತ್ತ ನೆದರ್ಲೆಂಡ್ಸ್ ಟೂರ್ನಿಯಿಂದ ಹೊರಬಿದ್ದಾಗಿದೆ. ಹೀಗಿದ್ದರೂ ಈ ಪಂದ್ಯ ಕುತೂಹಲ ಕೆರಳಿಸಿದೆ.
ಭಾರತಕ್ಕೆ ಇಂದಿನ ಪಂದ್ಯ ಲೆಕ್ಕಕ್ಕಿಲ್ಲದ ಕಾರಣ ಕೆಲ ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ನಾಯಕ ರೋಹಿತ್ ಶರ್ಮಾ, ಕುಲ್ದೀಪ್ ಯಾದವ್ ಹಾಗೂ ಜಸ್ಪ್ರಿತ್ ಬುಮ್ರಾ ಹೊರಗುಳಿಯಬಹುದು. ಕೆಎಲ್ ರಾಹುಲ್ ನಾಯಕನಾಗಿ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ. ರೋಹಿತ್ ಜಾಗಕ್ಕೆ ಇಶಾನ್ ಕಿಶನ್ ಬರಬಹುದು. ಹಾಗೆಯೆ ಶಾರ್ದೂಲ್ ಥಾಕೂರ್ ಮತ್ತು ಆರ್. ಅಶ್ವಿನ್ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಂಡರೆ ಅಚ್ಚರಿ ಪಡಬೇಕಿಲ್ಲ. ಉಳಿದಂತೆ ತಂಡದಲ್ಲಿ ಬದಲಾವಣೆ ಅನುಮಾನ. ಫಾರ್ಮ್ನಲ್ಲಿರುವ ವಿರಾಟ್ ಕೊಹ್ಲಿ ಬೆಂಗಳೂರಿನಲ್ಲಿ ಶತಕ ಸಿಡಿಸಿ ಸಚಿನ್ ದಾಖಲೆ ಮುರಿಯುತ್ತಾರ ನೋಡಬೇಕು.
ಟೂರ್ನಿಯಿಂದ ಹೊರಬಿದ್ದರೂ ಇಂದಿನ ಪಂದ್ಯ ನೆದರ್ಲೆಂಡ್ಸ್ ತಂಡಕ್ಕೆ ಮುಖ್ಯವಾಗಿದೆ. ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ಸ್ಥಾನ ಪಡೆಯುವ ಡಚ್ಚರಿಗಿದೆ. ಮೂರನೇ ಜಯ ಸಾಧಿಸುವ ಮೂಲಕ ಮತ್ತು ವಿಶ್ವಕಪ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರ 8 ರೊಳಗೆ ಸ್ಥಾನವನ್ನು ಪಡೆದುಕೊಳ್ಳುವ ಮೂಲಕ, ಚಾಂಪಿಯನ್ಸ್ ಟ್ರೋಫಿ 2025ಕ್ಕೆ ಪ್ರವೇಶ ಪಡೆಯಬಹುದು. ಡಚ್ ಪಡೆಯಲ್ಲಿ ಸಾಕಷ್ಟು ಕೌಶಲ್ಯ ಮತ್ತು ಅನುಭವಿ ಆಟಗಾರರಿದ್ದಾರೆ. ಆದರೆ, ಹೆಚ್ಚಿನವರು ಟಿ20 ಗಳಲ್ಲಿ ಆಡಿವ ಅನುಭವ ಇರುವವರು. ಏಕದಿನ ಸ್ವರೂಪದಲ್ಲಿ ಹೆಚ್ಚು ಕಣಕ್ಕಿಳಿಯಲಿಲ್ಲ. ಆದರೂ ವಿಕ್ರಂಜಿತ್ ಸಿಂಗ್, ಕಾಲಿನ್ ಅಕರ್ಮನ್, ಮ್ಯಾಕ್ಸ್, ಬಾಸ್ ಡಿ ಲೀಡೆ ಅಬ್ಬರಿಸಿದರೆ ತಂಡ ಮೊತ್ತ ಕಲೆಹಾಕಬಹುದು.
ತನ್ನ BMW ಕಾರಿಗೆ ಧೋನಿಯ ಆಟೋಗ್ರಾಫ್ ಹಾಕಿಸಿಕೊಂಡ ಅಭಿಮಾನಿ: ವಿಡಿಯೋ ವೈರಲ್
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಚಿಕ್ಕ ಕ್ರೀಡಾಂಗಣವಾಗಿದ್ದು ಬ್ಯಾಟಿಂಗ್ ಪಿಚ್ಗೆ ಹೇಳಿಮಾಡಿಸಿದ್ದಾಗಿದೆ. ಇಲ್ಲಿ ಬೌಂಡರಿ, ಸಿಕ್ಸರ್ಗಳ ಮಳೆಸುರಿಯುವುದು ಖಚಿತ. ಈ ಹಿಂದೆ ಈ ಮೈದಾನದಲ್ಲಿ ನಡೆದ ಪಂದ್ಯಗಳು ಸಹ ಇದಕ್ಕೆ ಸಾಕ್ಷಿಯಾಗಿವೆ. ಹೀಗಾಗಿ ಈ ಪಿಚ್ ಬ್ಯಾಟರ್‌ಗಳಿಗೆ ಉತ್ತಮ ಸ್ಕೋರ್ ಮಾಡಲು ಸಹಕಾರಿಯಾಗಿದೆ. ಸಾಮಾನ್ಯವಾಗಿ ಈ ಪಿಚ್ನಲ್ಲಿ ಟಾಸ್ ಗೆದ್ದ ನಾಯಕ ಮೊದಲು ಬೌಲಿಂಗ್ ಮಾಡುವುದಕ್ಕೆ ಹೆಚ್ಚು ಆಧ್ಯತೆ ನೀಡುವ ಸಾಧ್ಯತೆಗಳಿವೆ.
ಭಾನುವಾರದಂದು ಬೆಂಗಳೂರಿನಲ್ಲಿ ಭಾಗಶಃ ಬಿಸಿಲು ಮತ್ತು ಆಹ್ಲಾದಕರ ವಾತಾವರಣ ಇರುತ್ತದೆ ಎಂದು AccuWeather ಹೇಳಿದೆ. ಮಳೆಯ ಬೀಳುವ ಸಾಧ್ಯತೆಗಳು ಕೇವಲ ಮೂರು ಪ್ರತಿಶತ ಇರುವುದರಿಂದ ಮಳೆಯು ಆಟವನ್ನು ಹಾಳುಮಾಡುವ ಸಾಧ್ಯತೆಗಳಿಲ್ಲ. ತೇವಾಂಶವು ಶೇಕಡಾ 45 ರಷ್ಟಿದ್ದರೆ, ಮೋಡ ಕವಿದ ವಾತಾವರಣ ಶೇಕಡಾ 18 ರಷ್ಟಿರುತ್ತದೆ. ಇದಲ್ಲದೆ, ತಾಪಮಾನವು 16 ರಿಂದ 28 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ ಎಂದು ವರದಿಯಲ್ಲಿ ಹೇಳಿದೆ.
ಉಭಯ ತಂಡಗಳು
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್. , ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್.
ನೆದರ್ಲೆಂಡ್ಸ್ ತಂಡ: ವಿಕ್ರಂಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ಕಾಲಿನ್ ಅಕರ್ಮನ್, ಬಾಸ್ ಡಿ ಲೀಡೆ, ತೇಜ ನಿಡಮನೂರು, ಸ್ಕಾಟ್ ಎಡ್ವರ್ಡ್ಸ್ (ನಾಯಕ), ಸೈಬ್ರಾಂಡ್ ಎಂಗೆಲ್ಬ್ರೆಕ್ಟ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ರಿಯಾನ್ ಕ್ಲೈನ್, ಆರ್ಯನ್ ದತ್, ಪಾಲ್ ವಾನ್ ಮೀಕೆರೆನ್, ವೆಸ್ಲಿ ಬೀಕ್, ಸಾಕಿಬ್ ಜುಲ್ಫಿಕರ್, ಶರೀಜ್ ಅಹ್ಮದ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ