ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ (T20 World Cup) ಮಹಾಟೂರ್ನಿಗೆ ದಿನಗಣನೆ ಶುರುವಾಗಿದೆ. ಆಸ್ಟ್ರೇಲಿಯಾ ಆತಿಥ್ಯದಲ್ಲಿ ಅಕ್ಟೋಬರ್ 16 ರಿಂದ ಆರಂಭವಾಗುವ ಈ ಮಹತ್ವದ ಟೂರ್ನಿಯು ನವೆಂಬರ್ 13 ರಂದು ಫೈನಲ್ ಪಂದ್ಯದ ಮೂಲಕ ಅಂತ್ಯವಾಗಲಿದೆ. ರೋಹಿತ್ ಶರ್ಮಾ (Rohit Sharma) ನೇತೃತ್ವದ ಭಾರತ ತಂಡ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಎಲ್ಲಾ ರೀತಿಯಲ್ಲಿಯೂ ಸಿದ್ದತೆ ನಡೆಸುತ್ತಿದೆ. ಅಕ್ಟೋಬರ್ 23 ರಂದು ಮೆಲ್ಬೋರ್ನ್ ಸ್ಟೇಡಿಯಂನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಸೆಣಸುವ ಮೂಲಕ ಟೀಮ್ ಇಂಡಿಯಾ (Team India) ಮಹತ್ವದ ಟೂರ್ನಿಯನ್ನು ಆರಂಭಿಸಲಿದೆ. ಇದಕ್ಕೂ ಮುನ್ನ ಭಾರತ ಅಭ್ಯಾಸ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಇಂದು ಮೊದಲ ಅಭ್ಯಾಸ ಪಂದ್ಯ ನಡೆಯಲಿದ್ದು, ಯಾರ ವಿರುದ್ಧ?, ಭಾರತದಲ್ಲಿ ಲೈವ್ ಅನ್ನು ಹೇಗೆ ವೀಕ್ಷಿಸುವುದು? ಎಂಬ ಮಾಹಿತಿ ಇಲ್ಲಿದೆ.
ಭಾರತ ತಂಡ ಇಂದು ಪರ್ತ್ನ ಡಬ್ಯುಎಸಿಎ ಗ್ರೌಂಡ್ನಲ್ಲಿ ವೆಸ್ಟರ್ನ್ ಆಸ್ಟ್ರೇಲಿಯಾ ಇಲೆವೆನ್ ವಿರುದ್ಧ ಮೊದಲ ಅಭ್ಯಾಸ ಪಂದ್ಯ ಆಡಲಿದೆ. ಈ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಬೆಳಗ್ಗೆ 11 ಗಂಟೆಗೆ ಶುರುವಾಗಲಿದೆ. ಪಶ್ಚಿಮ ಆಸ್ಟ್ರೇಲಿಯಾ ಯೂಟ್ಯೂಬ್ ಚಾನೆಲ್ನಲ್ಲಿ ಲೈವ್ ಸ್ಟ್ರೀಮ್ ವೀಕ್ಷಿಸಬಹುದು. ಆದರೆ, ಯಾವುದೇ ಟಿವಿ ಚಾನೆಲ್ನಲ್ಲಿ ನೇರಪ್ರಸಾರ ಇರುವುದಿಲ್ಲ. ಪರ್ತ್‌ನಲ್ಲಿ ಮಳೆಯಾಗುವ ಸಾಧ್ಯತೆಯಿಲ್ಲ ಎಂದು ಹೇಳಲಾಗುತ್ತಿದ್ದು ನಿರಂತರ ಪಂದ್ಯ ನಡೆಯುವ ನಿರೀಕ್ಷೆಯಿದೆ. ತಾಪಮಾನವು ಸುಮಾರು 15 ಡಿಗ್ರಿ ಸೆಲ್ಸಿಯಸ್ ಇರುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಇನ್ನು ಪರ್ತ್‌ನಲ್ಲಿರುವ ಪಿಚ್ ಬಗ್ಗೆ ಗಮನಿಸುವುದಾದರೆ ಇಲ್ಲಿ ಬೌಲರ್‌ಗಳು ಹೆಚ್ಚು ಯಶಸ್ಸು ಸಾಧಿಸುತ್ತಾರೆ. ಈ ಪಿಚ್ ಹೆಚ್ಚು ಬೌನ್ಸ್ ಒದಗಿಸುವ ನಿರೀಕ್ಷೆಯಿದೆ. ವೇಗದ ಬೌಲರ್‌ಗಳು ಮೇಲ್ಮೈಯಲ್ಲಿ ಕಾರ್ಯನಿರ್ವಹಿಸುವುದನ್ನು ಆನಂದಿಸಬೇಕು. ಬೌಲರ್ಗಳ ಜೊತೆಗೆ ಪರ್ತ್‌ನಲ್ಲಿರುವ ಟ್ರ್ಯಾಕ್ ಬ್ಯಾಟಿಂಗ್‌ಗೆ ಉತ್ತಮವಾಗಿದೆ. ಇಲ್ಲಿ ನಡೆದಿರುವ ಬಹುತೇಕ ಪಂದ್ಯ ಹೈಸ್ಕೋರ್ ಗೇಮ್ ಆಗಿದೆ. ಹೀಗಾಗಿ ಭಾರತದ ಮೊದಲ ಅಭ್ಯಾಸ ಪಂದ್ಯವೇ ಸಾಕಷ್ಟು ರೋಚಕತೆ ಸೃಷ್ಟಿಸಿದೆ.
ಅಕ್ಟೋಬರ್ 13 ರಂದು ಇದೇ ವೆಸ್ಟರ್ನ್ ಆಸ್ಟ್ರೇಲಿಯಾ ಇಲೆವೆನ್ ವಿರುದ್ಧ ಭಾರತ ತಂಡ ಎರಡನೇ ಅಭ್ಯಾಸ ಪಂದ್ಯ ಆಡಲಿದೆ. ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ ಸೇರಿದಂತೆ ಗ್ರೂಪ್’ಬಿ’ ವಿನ್ನರ್ ಮತ್ತು ಗ್ರೂಪ್ ‘ಎ’ ರನ್ನರ್ ಅಪ್ ತಂಡಗಳು ಮೊದಲನೇ ಗುಂಪಿನಲ್ಲಿ ಸ್ಥಾನ ಪಡೆಯಲಿವೆ. ಅಡಿಲೇಡ್, ಬ್ರಿಸ್ಬೇನ್, ಹೊಬರ್ಟ್, ಮೆಲ್ಬೋರ್ನ್, ಪರ್ತ್ ಹಾಗೂ ಸಿಡ್ನಿ ಮುಂತಾದ ಸ್ಥಳಗಳಲ್ಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ.
ಐಸಿಸಿ ಟಿ20 ವಿಶ್ವಕಪ್‌ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್ ಮತ್ತು ಅರ್ಷದೀಪ್ ಸಿಂಗ್.
Published On - 10:16 am, Mon, 10 October 22