IND vs SA: 4 ಬೌಂಡರಿ, 7 ಸಿಕ್ಸರ್.. 93 ರನ್..! ಆಫ್ರಿಕನ್ ಬೌಲರ್‌ಗಳ ಚಳಿ ಬಿಡಿಸಿದ ಕಿಶನ್
Ishan Kishan: ಶತಕಕ್ಕೆ ಸನಿಹವಾಗುತ್ತಿರುವುದು ಗೊತ್ತಿದ್ದರು ತಮ್ಮ ಆಟದ ಶೈಲಿಯನ್ನು ಬದಲಾಯಿಸದ ಕಿಶನ್, ನೋಕಿಯಾ ಎಸೆತದಲ್ಲಿ ಸಿಕ್ಸರ್ ಹೊಡೆಯುವ ಮೂಲಕ 92 ರನ್ ಗಳಿಸಿದರು.
‘ಅತಿಥಿ ದೇವೋ ಭವ’ ವಾಕ್ಯವನ್ನು ಅಕ್ಷರಶಃ ಪಾಲಿಸುವ ಭಾರತೀಯರು ತಮ್ಮ ಮನೆಗೆ ಬಂದ ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ, ಸತ್ಕರಿಸುತ್ತಾರೆ. ಆದರೆ ಭಾರತೀಯ ಕ್ರಿಕೆಟ್ ತಂಡದ ಯುವ ಸೂಪರ್‌ಸ್ಟಾರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ (Ishan Kishan) ಬಹುಶಃ ಈ ಎಲ್ಲಾ ಸಂಪ್ರದಾಯಗಳನ್ನು ಮರೆತಿದ್ದಾರೆ ಎಂದೆನಿಸುತ್ತದೆ. ಅಷ್ಟೇ ಏಕೆ, ತಮ್ಮ ತವರು ನೆಲ ರಾಂಚಿಗೆ ಬಂದ ವಿದೇಶಿ ಅತಿಥಿಗಳ ಮೇಲೆ ಕರುಣೆ ತೋರದೆ, ಅವರ ಮೇಲೆ ಬ್ಯಾಟಿಂಗ್ ಪ್ರಹಾರ ಮಾಡಿದ್ದಾರೆ. ರಾಂಚಿಯಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಮೈದಾನದ ಎಲ್ಲಾ ದಿಕ್ಕುಗಳಿಗೂ ಬಾಲ್ನ ದರ್ಶನ ಮಾಡಿಸಿದ ಕಿಶನ್, ಭಾರತದ ಗೆಲುವಿನ ಹೀರೋ ಆಗಿ ಹೊರಹೊಮ್ಮಿದ್ದಾರೆ. ಆದರೆ ಇದೇ ಕಿಶನ್ ಮೊದಲನೇ ಏಕದಿನ ಪಂದ್ಯದಲ್ಲಿ ನಿದಾನಗತಿಯ ಬ್ಯಾಟಿಂಗ್ ಮಾಡಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಆರಂಭಿಕರಿಬ್ಬರ ವಿಕೆಟ್ ಬಳಿಕ ಜೊತೆಯಾಗಿದ್ದ ರುತುರಾಜ್ ಹಾಗೂ ಕಿಶನ್ ತೀರ ನಿದಾನಗತಿಯ ಬ್ಯಾಟಿಂಗ್ ನಡೆಸಿ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಅಂತಿಮವಾಗಿ ಗೆಲುವಿಗೆ ಹೆಚ್ಚಿನ ಕೊಡುಗೆ ನೀಡಲಾಗದೆ ತಮ್ಮ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡಿದ್ದರು.
ಆದರೆ ರಾಂಚಿಯಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಕಿಶನ್ ಉಗ್ರರೂಪವನ್ನೇ ತಾಳಿದರು. ಈ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟ್ ಮಾಡಿ 278 ರನ್ ಗಳಿಸಿತ್ತು. ಭಾರತ ತಂಡದ ಗೆಲುವಿಗೆ ಉತ್ತಮ ಇನ್ನಿಂಗ್ಸ್‌ನ ಅಗತ್ಯವಿತ್ತು, ಆದರೆ ನಾಯಕ ಶಿಖರ್ ಧವನ್ ಮತ್ತು ಯುವ ಆರಂಭಿಕ ಆಟಗಾರ ಶುಭಮನ್ ಗಿಲ್ ಬೇಗನೆ ಔಟಾದರು. ಇಂತಹ ಪರಿಸ್ಥಿತಿಯಲ್ಲಿ ಇಶಾನ್ ಕಿಶನ್ ಅವರ ಮೇಲೆ ಜವಾಬ್ದಾರಿ ಹೆಚ್ಚಿತ್ತು. ಜೊತೆಗೆ ರಾಂಚಿ, ಕಿಶನ್ ಕ್ರಿಕೆಟ್ನ ಎಬಿಸಿಡಿ ಕಲಿತ ತವರು ನೆಲವಾಗಿದ್ದರಿಂದ ಅವರು ಇಲ್ಲಿ ಮಿಂಚಲೇಬೇಕಿತ್ತು.
ಆಫ್ರಿಕನ್ ಬೌಲರ್‌ಗಳ ಮೇಲೆ ಸಿಕ್ಸರ್‌ಗಳ ಮಳೆ
ಲಕ್ನೋದಲ್ಲಿ ನಡೆದ ಪಂದ್ಯದಲ್ಲಿ ಇಶಾನ್ ಕಿಶನ್ ವಿಫಲರಾಗಿದ್ದರು, ಆದರೆ ಈ ಬಾರಿ ಅವರು ತಮ್ಮ ಮನೆಯಲ್ಲಿ ಅಭಿಮಾನಿಗಳನ್ನು ನಿರಾಸೆಗೊಳಿಸಲಿಲ್ಲ. ನಿಧಾನಗತಿಯ ಆರಂಭದ ನಂತರ ವೇಗವನ್ನು ಹೆಚ್ಚಿಸಿದ ಇಶಾನ್ ಮತ್ತು ಶ್ರೇಯಸ್ ಅಯ್ಯರ್ ದಕ್ಷಿಣ ಆಫ್ರಿಕಾದ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಅದರಲ್ಲೂ ಈ ಪಂದ್ಯದಲ್ಲಿ ಇಶಾನ್ ದಕ್ಷಿಣ ಆಫ್ರಿಕಾದ ನಾಯಕ ಕೇಶವ್ ಮಹಾರಾಜ್ ಮತ್ತು ಬಿರುಗಾಳಿ ಬೌಲರ್ ಎನ್ರಿಕ್ ನೋಕಿಯಾ ವಿರುದ್ಧ ಮುರಿದುಬಿದ್ದರು.
ಮಹಾರಾಜ್ ವಿರುದ್ಧ ವಿವಿಧ ಓವರ್‌ಗಳಲ್ಲಿ 3 ಸಿಕ್ಸರ್‌ಗಳನ್ನು ಬಾರಿಸಿದ ಇಶಾನ್, ನೋಕಿಯಾ ಅವರ ಮೇಲೆ ಸಿಕ್ಸರ್‌ಗಳ ಮಳೆಯನ್ನೇ ಸುರಿಸಿದರು. ಈ ಪೈಕಿ ಒಂದೇ ಓವರ್‌ನ ಸತತ ಮೂರು ಎಸೆತಗಳಲ್ಲಿ 4, 6, 6 ಠೇವಣಿಯಾದವು.
B. O. O. M! ⚡️ ⚡️@ishankishan51 went aerial & did that with some might! ? ? #TeamIndia
Follow the match ▶️ https://t.co/6pFItKAJW7
Don’t miss the LIVE coverage of the #INDvSA match on @StarSportsIndia. pic.twitter.com/vsne3WHFQq
— BCCI (@BCCI) October 9, 2022
ಮೊದಲ ಶತಕ ಗಳಿಸಲು ಸಾಧ್ಯವಾಗಲಿಲ್ಲ
ಇಶಾನ್ ಕಿಶನ್ ಅವರ ಬ್ಯಾಟಿಂಗ್ ಸುನಾಮಿಯಿಂದ ದಕ್ಷಿಣ ಆಫ್ರಿಕಾದ ಬೌಲರ್‌ಗಳು ಪಾರಾಗಲು ದಾರಿ ಹುಡುಕುತ್ತಲೇ ಇದ್ದರು. ಆದರೆ ತಮ್ಮ ದಾಳಿಯನ್ನು ಮುಂದುವರೆಸಿದ ಇಶಾನ್ ತಮ್ಮ ಮೊದಲ ಶತಕದತ್ತ ಸಾಗುತ್ತಿದ್ದರು. ಶತಕಕ್ಕೆ ಸನಿಹವಾಗುತ್ತಿರುವುದು ಗೊತ್ತಿದ್ದರು ತಮ್ಮ ಆಟದ ಶೈಲಿಯನ್ನು ಬದಲಾಯಿಸದ ಕಿಶನ್, ನೋಕಿಯಾ ಎಸೆತದಲ್ಲಿ ಸಿಕ್ಸರ್ ಹೊಡೆಯುವ ಮೂಲಕ 92 ರನ್ ಗಳಿಸಿದರು. ಬೇಕಿದ್ದರೆ ಕಿಶನ್ ನಿಧಾನವಾಗಿ ಬ್ಯಾಟಿಂಗ್ ಮಾಡಿ ಶತಕ ಪೂರೈಸಬಹುದಿತ್ತು. ಆದರೆ ತಂಡದ ಗೆಲುವಿಗೆ ಹೆಚ್ಚು ಒತ್ತು ಕೊಟ್ಟ ಇಶಾನ್ 93 ರನ್ ಗಳಿಸಿದಾಗ ಸಿಕ್ಸರ್ ಬಾರಿಸುವ ಯತ್ನದಲ್ಲಿ ಕ್ಯಾಚಿತ್ತು ನಿರ್ಗಮಿಸಿದರು.
ಈ ಪಂದ್ಯದಲ್ಲಿ ಇಶಾನ್ ದಿಟ್ಟ ಇನ್ನಿಂಗ್ಸ್ ಆಡುವ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ಕೇವಲ 84 ಎಸೆತಗಳನ್ನು ಎದುರಿಸಿದ ಕಿಶನ್ 93 ರನ್ ಗಳಿಸಿ ಔಟಾದರು. ಈ ಇನ್ನಿಂಗ್ಸ್‌ನಲ್ಲಿ ಕೇವಲ 4 ಬೌಂಡರಿಗಳನ್ನು ಬಾರಿಸಿದ ಕಿಶನ್, ಬರೋಬ್ಬರಿ 7 ಸಿಕ್ಸರ್ ಸಿಡಿಸಿದರು. ಇಶಾನ್- ಶ್ರೇಯಸ್ ಜೊತೆಗೂಡಿ ಮೂರನೇ ವಿಕೆಟ್‌ಗೆ 161 ರನ್‌ಗಳ ಅದ್ಭುತ ಜೊತೆಯಾಟದೊಂದಿಗೆ ತಂಡವನ್ನು ಕಠಿಣ ಪರಿಸ್ಥಿತಿಯಿಂದ ಹೊರತಂದರು.
Published On - 9:54 pm, Sun, 9 October 22