ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವಣ ಅಂತಿಮ ನಿರ್ಣಾಯಕ ಮೂರನೇ ಟಿ20 ಪಂದ್ಯ ಇಂದು ಹೈದರಾಬಾದ್ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆದ್ದಿದ್ದರೆ, ದ್ವಿತೀಯ ಸೆಣೆಸಾಟದಲ್ಲಿ ಭಾರತ 6 ವಿಕೆಟ್ಗಳ ಜಯ ಸಾಧಿಸಿತ್ತು. ಹೀಗಾಗಿ ಕೊನೆಯ ಟಿ20 ಮೇಲೆ ಎಲ್ಲರ ಕಣ್ಣಿದೆ. ಹಿಂದಿನ ಎರಡೂ ಪಂದ್ಯಗಳಲ್ಲಿ ರೋಹಿತ್ (Rohit Sharma) ಪಡೆ ವೈಫಲ್ಯ ಅನುಭವಿಸಿದ್ದು ಬೌಲಿಂಗ್ನಲ್ಲಿ. ಅದರಲ್ಲೂ ಮುಖ್ಯವಾಗಿ ವೇಗಿಗಳು. ಪದೇ ಪದೇ ದುಬಾರಿಯಾಗುತ್ತಿರುವ ಟೀಮ್ ಇಂಡಿಯಾ (Team India) ವೇಗಿಗಳು ಆದಷ್ಟು ಬೇಗ ಲಯಕಂಡುಕೊಳ್ಳಬೇಕಿದೆ. ಟಿ20 ವಿಶ್ವಕಪ್ಗೂ ಮುನ್ನ ಭಾರತಕ್ಕೆ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ಕಟ್ಟಲು ಇಂದಿನ ಪಂದ್ಯ ಮಹತ್ವದ್ದಾಗಿದೆ. ಹೀಗಾಗಿ ಭಾರತ ಬೌಲಿಂಗ್ ವಿಭಾಗದಲ್ಲಿ ಒಂದು ಬದಲಾವಣೆ ನಿರೀಕ್ಷಿಸಲಾಗಿದೆ.
ಮೊದಲ ಟಿ20 ಪಂದ್ಯದಲ್ಲಿ ದುಬಾರಿಯಾದ ಉಮೇಶ್ ಯಾದವ್ ಎರಡನೇ ಕದನದಿಂದ ಹೊರಗುಳಿದು ಜಸ್ಪ್ರೀತ್ ಬುಮ್ರಾ ಸ್ಥಾನ ಪಡೆದು ಮಾರಕವಾಗಿ ಪರಿಣಮಿಸಿದರು. ಆದರೆ, ಎರಡನೇ ಟಿ20 ಯಲ್ಲಿ ಹರ್ಷಲ್ ಪಟೇಲ್ ದುಬಾರಿ ಆದರು. ಮುಖ್ಯವಾಗಿ ಭಾರತದ ಡೆತ್ ಬೌಲಿಂಗ್ ಕಳೆದ ಕೆಲವು ಪಂದ್ಯಗಳಿಂದ ತೀರಾ ಕಳಪೆ ಆಗುತ್ತಿದೆ. ಇದಕ್ಕೆ ಉತ್ತರ ಹುಡುಕುವ ಕೆಲಸ ನಡೆಯಬೇಕಿದೆ. ಹೀಗಾಗಿ ಹರ್ಷಲ್ ಪಟೇಲ್ ಜಾಗಕ್ಕೆ ದೀಪಕ್ ಚಹರ್ ಬರುವ ಸಾಧ್ಯತೆ ಇದೆ.
ಅಂತೆಯೆ ಯುಜ್ವೇಂದ್ರ ಚಹಲ್ ಸ್ಥಾನ ಕೂಡ ತುಗುಯ್ಯಾಲೆಯಲ್ಲಿದೆ. ಕಳೆದ ಏಷ್ಯಾಕಪ್ನಿಂದಲೂ ಚಹಲ್ ಸ್ನಿನ್ ಮೋಡಿ ನಡೆಯುತ್ತಿಲ್ಲ. ವಿಕೆಟ್ ಕೀಳಲು ಪರದಾಡುತ್ತಿದ್ದಾರೆ. ಪ್ರಮುಖ ಸ್ಪಿನ್ನರ್ ಎಂದೇ ಗುರುತಿಸಿಕೊಂಡ ಚಹಲ್ ಮೇಲೆ ಭಾರೀ ಒತ್ತಡವಿದೆ. ಇವರ ಜಾಗದಲ್ಲಿ ರವಿಚಂದ್ರನ್ ಅಶ್ವಿನ್ ಕಣಕ್ಕಿಳಿದರೆ ಅಚ್ಚರಿ ಪಡಬೇಕಿಲ್ಲ. ಅತ್ತ ಅಕ್ಷರ್ ಪಟೇಲ್ ಬೊಂಬಾಟ್ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ.
ಭಾರತದ ಬ್ಯಾಟರ್ಗಳು ತಂಡಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ. ಒಬ್ಬರು ವೈಫಲ್ಯ ಅನುಭವಿಸಿದರೂ ಮತ್ತೊಬ್ಬರು ಜವಾಬ್ದಾರಿ ವಹಿಸಿ ರನ್ ವೇಗವನ್ನು ಹೆಚ್ಚಿಸುತ್ತಿದ್ದಾರೆ. ಸೂರ್ಯಕುಮಾರ್ ಯಾದವ್, ವಿರಾಟ್ ಕೊಹ್ಲಿ ಫೇಲ್ ಆದರೂ, ರೋಹಿತ್ ಶರ್ಮಾ, ಕೆ ಎಲ್ ರಾಹುಲ್, ಹಾರ್ದಿಕ್ ಪಾಂಡ್ಯಾ ರನ್ ಗಳಿಸುತ್ತಾರೆ. ದಿನೇಶ್ ಕಾರ್ತಿಕ್ ಫಿನಿಶಿಂಗ್ ಕೆಲಸವನ್ನು ಅದ್ಭುತವಾಗಿ ನಿರ್ವಹಿಸುತ್ತಿದ್ದಾರೆ. ರಿಷಭ್ ಪಂತ್ಗೆ ಇನ್ನೂ ಮಿಂಚಲು ಅವಕಾಶ ಸಿಗಲಿಲ್ಲ.
ಇತ್ತ ಆಸ್ಟ್ರೇಲಿಯಾ ಕೂಡ ಭಾರತದ ರೀತಿಯಲ್ಲೇ ಇದೆ. ಬ್ಯಾಟರ್ಗಳು ರನ್ ಕಲೆಹಾಕಿದಂತೆ ಬೌಲರ್ಗಳು ರನ್ ಬಿಟ್ಟುಕೊಡುತ್ತಿದ್ದಾರೆ. ಕ್ಯಾಮರೂನ್ ಗ್ರೀನ್, ನಾಯಕ್ ಆರೋನ್ ಫಿಂಚ್, ಮ್ಯೂಥ್ಯೂ ವೇಡ್ ಬ್ಯಾಟಿಂಗ್ನಲ್ಲಿ ಯಶಸ್ವಿಯಾಗಿರುವುದು ನೆಮ್ಮದಿಯ ವಿಚಾರ. 2 ಪಂದ್ಯಗಳಲ್ಲಿ ವಿಫಲವಾಗಿರುವ ತಂಡದ ಪ್ರಮುಖ ಅಸ್ತ್ರವಾದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ವೈಫಲ್ಯ ತಂಡಕ್ಕೆ ತಲೆನೋವಾಗಿದೆ. ಮ್ಯಾಕ್ಸಿ 2 ಪಂದ್ಯಗಳಲ್ಲಿ 1 ರನ್ ಮಾತ್ರ ಗಳಿಸಿದ್ದಾರೆ. ಬೌಲಿಂಗ್ನಲ್ಲಿ ಆ್ಯಡಂ ಝಂಪಾ ಬಿಟ್ಟರೆ ಮತ್ಯಾರು ಪರಿಣಾಮಕಾರಿಯಾಗಿ ಗೋಚರಿಸುತ್ತಿಲ್ಲ.
ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ XI:
ಭಾರತ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ರಿಷಭ್ ಪಂತ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಯುಜ್ವೇಂದ್ರ ಚಹಾಲ್/ ಆರ್. ಅಶ್ವಿನ್, ದೀಪಕ್ ಚಹರ್, ಜಸ್ಪ್ರೀತ್ ಬುಮ್ರಾ.
ಆಸ್ಟ್ರೇಲಿಯಾ: ಆರೋನ್ ಫಿಂಚ್ (ನಾಯಕ), ಕ್ಯಾಮರೂನ್ ಗ್ರೀನ್, ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಡೇನಿಯಲ್ ಸ್ಯಾಮ್ಸ್, ಪ್ಯಾಟ್ ಕಮಿನ್ಸ್, ಸೀನ್ ಅಬಾಟ್, ಆ್ಯಡಂ ಝಂಪಾ, ಜೋಶ್ ಹ್ಯಾಜ್ಲೆವುಡ್.
Published On - 8:09 am, Sun, 25 September 22