IND vs ENG: ಐತಿಹಾಸಿಕ ಗೆಲುವು; 77 ವರ್ಷಗಳ ಬರ ನೀಗಿಸಿಕೊಂಡ ಟೀಂ ಇಂಡಿಯಾ..!

India vs England: ಓವಲ್‌ನಲ್ಲಿ ನಡೆದ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲಂಡ್ ವಿರುದ್ಧ ಭಾರತ 6 ರನ್‌ಗಳಿಂದ ಅದ್ಭುತ ಗೆಲುವು ಸಾಧಿಸಿದೆ. ಈ ಮೂಲಕ ಬರೋಬ್ಬರಿ 77 ವರ್ಷಗಳ ನಂತರ ವಿದೇಶಿ ನೆಲದಲ್ಲಿ ಐದು ಪಂದ್ಯಗಳ ಸರಣಿಯ ಅಂತಿಮ ಪಂದ್ಯವನ್ನು ಭಾರತ ಗೆದ್ದಿರುವುದು ಇದೇ ಮೊದಲು. ಈ ಗೆಲುವಿನೊಂದಿಗೆ ಭಾರತ 2-2ರ ಸಮಬಲದೊಂದಿಗೆ ಸರಣಿಯನ್ನು ಪೂರ್ಣಗೊಳಿಸಿದೆ.

IND vs ENG: ಐತಿಹಾಸಿಕ ಗೆಲುವು; 77 ವರ್ಷಗಳ ಬರ ನೀಗಿಸಿಕೊಂಡ ಟೀಂ ಇಂಡಿಯಾ..!
Team India

Updated on: Aug 04, 2025 | 6:21 PM

ಸೋಲಿನೊಂದಿಗೆ ಇಂಗ್ಲೆಂಡ್‌ ಪ್ರವಾಸವನ್ನು ಆರಂಭಿಸಿದ್ದ ಟೀಂ ಇಂಡಿಯಾ (India vs England) ಇದೀಗ ಓವಲ್ ಟೆಸ್ಟ್ ಪಂದ್ಯವನ್ನು 6 ರನ್​ಗಳಿಂದ ಗೆದ್ದುಕೊಳ್ಳುವ ಮೂಲಕ ಅಂತ್ಯಗೊಳಿಸಿದೆ. ಒಂದು ಹಂತದಲ್ಲಿ ಸರಣಿ ಕಳೆದುಕೊಳ್ಳುವ ಆತಂಕದಲ್ಲಿದ್ದ ಟೀಂ ಇಂಡಿಯಾ (Team India), ಇಬ್ಬರು ವೇಗಿಗಳ ಅಮೋಘ ಪ್ರದರ್ಶನಿಂದ ಕೊನೆಯ ಟೆಸ್ಟ್ ಪಂದ್ಯವನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ಓವಲ್ ಟೆಸ್ಟ್ ಗೆಲುವಿನೊಂದಿಗೆ ಸರಣಿಯನ್ನು 2-2 ರಿಂದ ಅಂತ್ಯಗೊಳಿಸಿದ ಟೀಂ ಇಂಡಿಯಾ 77 ವರ್ಷಗಳ ದೀರ್ಘ ಕಾಯುವಿಕೆಯನ್ನು ಸಹ ಕೊನೆಗೊಳಿಸಿದೆ. ಇದು ಮಾತ್ರವಲ್ಲದೆ ಓವಲ್ ಟೆಸ್ಟ್ ಗೆಲುವು ಭಾರತೀಯ ಕ್ರಿಕೆಟ್‌ಗೆ ಹಲವು ವಿಧಗಳಲ್ಲಿಯೂ ವಿಶೇಷವಾಗಿತ್ತು.

77 ವರ್ಷಗಳ ಬರ ಅಂತ್ಯ

ವಾಸ್ತವವಾಗಿ, ಭಾರತ ತಂಡವು ವಿದೇಶಿ ನೆಲದಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯವನ್ನು ಗೆದ್ದಿರುವುದು ಇದೇ ಮೊದಲು. ಭಾರತ ಈ ಹಿಂದೆ ವಿದೇಶದಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು 16 ಬಾರಿ ಆಡಿದೆ, ಆದರೆ ಪ್ರತಿ ಬಾರಿಯೂ ಕೊನೆಯ ಟೆಸ್ಟ್‌ನಲ್ಲಿ ಸೋಲನುಭವಿಸಿತ್ತು. ಆದಾಗ್ಯೂ, ಈ ಬಾರಿ, ಭಾರತೀಯ ಆಟಗಾರರು ಅದ್ಭುತ ಪ್ರದರ್ಶನದೊಂದಿಗೆ ಇತಿಹಾಸವನ್ನು ಸೃಷ್ಟಿಸಿದರು. ಓವಲ್ ಮೈದಾನದಲ್ಲಿ ನಡೆದ ಈ ನಿರ್ಣಾಯಕ ಪಂದ್ಯದಲ್ಲಿ, ಭಾರತೀಯ ಬೌಲರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳು ಸಾಂಘಿಕ ಪ್ರದರ್ಶನ ನೀಡಿ ಪಂದ್ಯವನ್ನು ಗೆದ್ದುಕೊಂಡರು.

ಪಂದ್ಯದ ಐದನೇ ದಿನದಾಟ ಎಷ್ಟು ರೋಮಾಂಚನಕಾರಿಯಾಗಿತ್ತೆಂದರೆ, ಇಂಗ್ಲೆಂಡ್ ಗೆಲುವಿಗೆ ಕೇವಲ 35 ರನ್ ಬೇಕಿದ್ದರೆ, ತಂಡದ ಬಳಿ ಇನ್ನು 4 ವಿಕೆಟ್‌ಗಳು ಉಳಿದಿದ್ದವು. ಆದರೆ ಕೊನೆಯ ದಿನದ ಮೊದಲ ಸೆಷನ್‌ನಲ್ಲಿ ಭಾರತದ ಇಬ್ಬರು ಬೌಲರ್‌ಗಳು ಇಡೀ ಪಂದ್ಯದ ದಿಕ್ಕನೇ ಬದಲಾಯಿಸಿದರು. ಕೊನೆಯ 4 ವಿಕೆಟ್‌ಗಳಲ್ಲಿ 3 ವಿಕೆಟ್‌ಗಳನ್ನು ಮೊಹಮ್ಮದ್ ಸಿರಾಜ್ ಮತ್ತು 1 ವಿಕೆಟ್ ಅನ್ನು ಪ್ರಸಿದ್ಧ್ ಕೃಷ್ಣ ಪಡೆದರು. ಈ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಒಟ್ಟು 9 ವಿಕೆಟ್‌ಗಳನ್ನು ಪಡೆದರೆ, ಪ್ರಸಿದ್ಧ್ ಕೃಷ್ಣ 8 ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು.

IND vs ENG: ರಣ ರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ಭಾರತ; ಸರಣಿ ಡ್ರಾನಲ್ಲಿ ಅಂತ್ಯ

ಮತ್ತೊಂದು ಇತಿಹಾಸ ಬದಲಿಸಿದ ಭಾರತ

ಈ ಪಂದ್ಯದ ಗೆಲುವಿನೊಂದಿಗೆ ಮತ್ತೊಂದು ದಾಖಲೆಯನ್ನು ಸಹ ಯಂಗ್ ಯಂಗ್ ಇಂಡಿಯಾ ಸೃಷ್ಟಿಸಿತು. ವಾಸ್ತವವಾಗಿ, ವಿದೇಶದಲ್ಲಿ ಆಡಿದ 5 ಪಂದ್ಯಗಳ ಸರಣಿಯಲ್ಲಿ 1-2 ಅಂತರದಿಂದ ಹಿನ್ನಡೆ ಅನುಭವಿಸಿದ ನಂತರ ಟೀಂ ಇಂಡಿಯಾ ಸರಣಿಯನ್ನು 2-2 ಸಮಬಲಗೊಳಿಸಿರುವುದು ಇದೇ ಮೊದಲು. ಇದು ಮಾತ್ರವಲ್ಲದೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾದ ಅತ್ಯಂತ ಕಡಿಮೆ ಅಂತರದ ಗೆಲುವು ಕೂಡ ಇದಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:16 pm, Mon, 4 August 25