AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ರಣ ರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ಭಾರತ; ಸರಣಿ ಡ್ರಾನಲ್ಲಿ ಅಂತ್ಯ

India vs England Test Series: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯ ಓವಲ್‌ನಲ್ಲಿ ನಡೆಯಿತು. ರೋಮಾಂಚಕ ಪಂದ್ಯದಲ್ಲಿ, ಇಂಗ್ಲೆಂಡ್‌ಗೆ ಗೆಲ್ಲಲು 35 ರನ್ ಮತ್ತು ಭಾರತಕ್ಕೆ 4 ವಿಕೆಟ್‌ಗಳು ಬೇಕಾಗಿದ್ದವು. ಭಾರತ ತಂಡ ಕೊನೆಯ ದಿನ ಕೆಲವೇ ಓವರ್‌ಗಳಲ್ಲಿ ಇಂಗ್ಲೆಂಡ್ ಅನ್ನು ಆಲೌಟ್ ಮಾಡಿ ಅದ್ಭುತ ಗೆಲುವು ಸಾಧಿಸಿತು.

IND vs ENG: ರಣ ರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ಭಾರತ; ಸರಣಿ ಡ್ರಾನಲ್ಲಿ ಅಂತ್ಯ
Team India
ಪೃಥ್ವಿಶಂಕರ
|

Updated on:Aug 04, 2025 | 5:05 PM

Share

ಭಾರತ ಹಾಗೂ ಇಂಗ್ಲೆಂಡ್‌ (India vs England) ನಡುವೆ ನಡೆದ ಐದು ಪಂದ್ಯಗಳ ಟೆಸ್ಟ್ ಸರಣಿ ಡ್ರಾದಲ್ಲಿ ಕೊನೆಗೊಂಡಿದೆ. ಓವಲ್​ನಲ್ಲಿ (Oval Test) ನಡೆದ ಸರಣಿಯ ಕೊನೆಯ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ರಣರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ಇಂಗ್ಲೆಂಡ್‌ ಗೆಲ್ಲಲು ಕೊನೆಯ ದಿನದಲ್ಲಿ 35 ರನ್ ಬೇಕಿದ್ದರೆ, ಇತ್ತ ಟೀಂ ಇಂಡಿಯಾ ಗೆಲ್ಲಲು 4 ವಿಕೆಟ್​ಗಳ ಅವಶ್ಯಕತೆ ಇತ್ತು. ಅದರಂತೆ ಐದನೇ ದಿನದಾಟ ಆರಂಭವಾದ ಕೆಲವೇ ಕೆಲವು ಓವರ್​ಗಳಲ್ಲಿ ಇಂಗ್ಲೆಂಡ್‌ ತಂಡವನ್ನು ಆಲೌಟ್ ಮಾಡುವ ಮೂಲಕ ಟೀಂ ಇಂಡಿಯಾ 6 ರನ್​ಗಳ ವೀರೋಚಿತ ಗೆಲುವು ಸಾಧಿಸಿತು. ಟೀಂ ಇಂಡಿಯಾದ ಈ ಗೆಲುವಿನ ಶ್ರೇಯ ವೇಗಿ ಮೊಹಮ್ಮದ್ ಸಿರಾಜ್ (Mohammed Siraj) ಹಾಗೂ ಕನ್ನಡಿಗ ಪ್ರಸಿದ್ಧ್ ಕೃಷ್ಣಗೆ (Prasidh Krishna) ಸಲ್ಲಬೇಕು. ಎರಡನೇ ಇನ್ನಿಂಗ್ಸ್​ನಲ್ಲಿ ಮಾರಕ ದಾಳಿ ಸಂಘಟಿಸಿದ ಮೊಹಮ್ಮದ್ ಸಿರಾಜ್ 5 ವಿಕೆಟ್​ಗಳ ಗೊಂಚಲು ಪಡೆದರೆ, ಇತ್ತ ಪ್ರಸಿದ್ಧ್ 4 ವಿಕೆಟ್ ಪಡೆದರು. ಉಳಿದ 1 ವಿಕೆಟ್ ಆಕಾಶ್ ದೀಪ್ ಪಾಲಾಯಿತು.

ಐದನೇ ದಿನದಾಟ ಹೀಗಿತ್ತು?

ಮೇಲೆ ಹೇಳಿದಂತೆ ಕೊನೆಯ ದಿನದಂದು ಇಂಗ್ಲೆಂಡ್‌ ಗೆಲುವಿಗೆ 35 ರನ್‌ಗಳ ಅಗತ್ಯವಿತ್ತು. ಇತ್ತ ಭಾರತಕ್ಕೆ 4 ವಿಕೆಟ್‌ಗಳ ಅಗತ್ಯವಿತ್ತು. ಐದನೇ ದಿನದ ಮೊದಲ ಓವರ್‌ನಲ್ಲಿ, ಕ್ರೇಗ್ ಓವರ್ಟನ್ 2 ಬೌಂಡರಿಗಳನ್ನು ಬಾರಿಸುವ ಮೂಲಕ ಇಂಗ್ಲೆಂಡ್‌ಗೆ ಬಲವಾದ ಆರಂಭವನ್ನು ನೀಡಿದರು. ಆದರೆ ಮುಂದಿನ ಓವರ್‌ನಲ್ಲಿ ಸಿರಾಜ್, ಜೇಮೀ ಸ್ಮಿತ್ ಅವರನ್ನು ಪೆವಿಲಿಯನ್‌ಗೆ ಕಳುಹಿಸುವ ಮೂಲಕ ಪಂದ್ಯವನ್ನು ರೋಮಾಂಚನಗೊಳಿಸಿದರು. ನಂತರ ಸಿರಾಜ್ ಮುಂದಿನ ಓವರ್‌ನಲ್ಲಿ ಕ್ರೇಗ್ ಓವರ್ಟನ್ ಅವರನ್ನು ಸಹ ಪೆವಿಲಿಯನ್‌ಗಟ್ಟುವ ಮೂಲಕ ತಂಡವನ್ನು ಗೆಲುವಿನ ಹತ್ತಿರಕ್ಕೆ ತಂದರು.

ಇದಾದ ನಂತರ ದಾಳಿಗಿಳಿದ ಪ್ರಸಿದ್ಧ್ ಕೃಷ್ಣ, ಜೋಶ್ ಟಂಗ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿ ಇಂಗ್ಲೆಂಡ್​ನ 9 ನೇ ವಿಕೆಟ್ ಉರುಳಿಸಿದರು. ಇಂಜುರಿಯ ನಡುವೆಯೂ ಒಂದೇ ಕೈನಲ್ಲಿ ಬ್ಯಾಟ್ ಹಿಡಿದು ಕೊನೆಯ ವಿಕೆಟ್ ಆಗಿ ಕ್ರಿಸ್​ಗೆ ಬಂದ ಕ್ರಿಸ್ ವೋಕ್ಸ್ ಮತ್ತು ಗಸ್ ಅಟ್ಕಿನ್ಸನ್ ಒಟ್ಟಾಗಿ ಇಂಗ್ಲೆಂಡ್ ತಂಡವನ್ನು ಗುರಿಯ ಹತ್ತಿರಕ್ಕೆ ತಂದರು. ಆದರೆ ಕೊನೆಯಲ್ಲಿ ಸಿರಾಜ್ ಅಟ್ಕಿನ್ಸನ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿ ಇಂಗ್ಲೆಂಡ್ ತಂಡವನ್ನು 367 ರನ್‌ಗಳಿಗೆ ಆಲೌಟ್ ಮಾಡಿ ಭಾರತ ತಂಡಕ್ಕೆ ಸ್ಮರಣೀಯ ಜಯ ತಂದುಕೊಟ್ಟರು. ಇದರೊಂದಿಗೆ ಟೆಸ್ಟ್ ಸರಣಿ 2-2 ಡ್ರಾದಲ್ಲಿ ಕೊನೆಗೊಂಡಿತು. ಅಲ್ಲದೆ, ಸಿರಾಜ್ ಸರಣಿಯಲ್ಲಿ ಅತಿ ಹೆಚ್ಚು 23 ವಿಕೆಟ್‌ಗಳನ್ನು ಪಡೆದರು.

4ನೇ ದಿನದ ಆರಂಭದಲ್ಲೇ ಆಘಾತ

ಪಂದ್ಯದ ನಾಲ್ಕನೇ ದಿನದಂದು ಇಂಗ್ಲೆಂಡ್ 1 ವಿಕೆಟ್ ನಷ್ಟಕ್ಕೆ 50 ರನ್‌ಗಳೊಂದಿಗೆ ತನ್ನ ಇನ್ನಿಂಗ್ಸ್ ಆರಂಭಿಸಿತು. ಗೆಲ್ಲಲು ಇನ್ನೂ 324 ರನ್ ಗಳಿಸುವ ಸವಾಲು ತಂಡದ ಮುಂದಿತ್ತು. ಇತ್ತ ಕ್ರಿಸ್ ವೋಕ್ಸ್ ಮೊದಲ ದಿನವೇ ಗಾಯದ ಕಾರಣದಿಂದಾಗಿ ಪಂದ್ಯದಿಂದ ಹೊರಗುಳಿದ ಕಾರಣ ಟೀಂ ಇಂಡಿಯಾಕ್ಕೆ 8 ವಿಕೆಟ್‌ಗಳು ಬೇಕಾಗಿದ್ದವು. ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಮೊದಲ ಸೆಷನ್‌ನಲ್ಲಿಯೇ ಬೆನ್ ಡಕೆಟ್ ಮತ್ತು ಓಲಿ ಪೋಪ್ ಅವರನ್ನು ಔಟ್ ಮಾಡುವ ಮೂಲಕ ಟೀಂ ಇಂಡಿಯಾದ ಭರವಸೆಯನ್ನು ಹೆಚ್ಚಿಸಿದ್ದರು.

ಎಡವಟ್ಟು ಮಾಡಿದ್ದ ಸಿರಾಜ್

ಹೀಗಾಗಿ ಇಂಗ್ಲೆಂಡ್ ಕೇವಲ 106 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇಲ್ಲಿಂದ ಜೋ ರೂಟ್‌ಗೆ ಸಾಥ್ ನೀಡಿದ ಹ್ಯಾರಿ ಬ್ರೂಕ್ ಮುಂದಿನ 3 ಗಂಟೆಗಳ ಟೀಂ ಇಂಡಿಯಾ ವೇಗಿಗಳನ್ನು ಇನ್ನಿಲ್ಲದಂತೆ ಕಾಡಿದರು. ಇವರಿಬ್ಬರು 195 ರನ್‌ಗಳ ಜೊತೆಯಾಟವನ್ನಾಡುವ ಮೂಲಕ ಇಂಗ್ಲೆಂಡ್ ತಂಡವನ್ನು ಗೆಲುವಿನ ಹತ್ತಿರಕ್ಕೆ ತಂದರು. ಆದಾಗ್ಯೂ, 35 ನೇ ಓವರ್‌ನಲ್ಲಿ ಮೊಹಮ್ಮದ್ ಸಿರಾಜ್ ತಪ್ಪು ಮಾಡದಿದ್ದರೆ ಪರಿಸ್ಥಿತಿ ವಿಭಿನ್ನವಾಗುತ್ತಿತ್ತು. ಪ್ರಸಿದ್ಧ್ ಕೃಷ್ಣ ಅವರ ಬೌಲಿಂಗ್​ನಲ್ಲಿ ಬ್ರೂಕ್ ನೀಡಿದ ಕ್ಯಾಚ್ ಅನ್ನು ಹಿಡಿದ ಬಳಿಕ ಮೈಮರೆತ ಸಿರಾಜ್ ತಮ್ಮ ಕಾಲನ್ನು ಬೌಂಡರಿ ಗೆರೆಗೆ ತಾಗಿಸಿದರು. ಆ ಸಮಯದಲ್ಲಿ ಬ್ರೂಕ್ 19 ರನ್‌ಗಳಿಸಿದ್ದರೆ, ಇಂಗ್ಲೆಂಡ್ ಸ್ಕೋರ್ 137 ರನ್‌ಗಳಾಗಿತ್ತು.

IND vs ENG: ಭಾರತ ಓವಲ್ ಟೆಸ್ಟ್ ಗೆದ್ದರೆ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ ಯಾರ ಕೈ ಸೇರಲಿದೆ?

ಶತಕ ಬಾರಿಸಿದ ಬ್ರೂಕ್- ರೂಟ್

ಇದರ ಲಾಭವನ್ನು ಪಡೆದುಕೊಂಡ ಬ್ರೂಕ್ ತಮ್ಮ 10 ನೇ ಟೆಸ್ಟ್ ಶತಕವನ್ನು ಬಾರಿಸಿದರು. ಈ ಸರಣಿಯಲ್ಲಿ ಇದು ಅವರ ಎರಡನೇ ಶತಕವಾಗಿತ್ತು. ಇಂಗ್ಲೆಂಡ್‌ನ ಸ್ಕೋರ್ 300 ದಾಟಿದಾಗ, ಬ್ರೂಕ್ ಅವರನ್ನು ಆಕಾಶ್ ದೀಪ್ ಔಟ್ ಮಾಡಿದರು. ನಂತರ ಸ್ವಲ್ಪ ಸಮಯದೊಳಗೆ ಜೋ ರೂಟ್ ಸರಣಿಯಲ್ಲಿ ಸತತ ಮೂರನೇ ಶತಕ ಮತ್ತು ಅವರ ವೃತ್ತಿಜೀವನದ 39 ನೇ ಶತಕವನ್ನು ಸಿಡಿಸಿದರು.

ಸಿರಾಜ್- ಪ್ರಸಿದ್ಧ್ ಮಾರಕ ದಾಳಿ

ಆದರೆ ಆ ನಂತರ ಸಿರಾಜ್ ಮತ್ತು ಪ್ರಸಿದ್ಧ್ ಮಾರಕ ರಿವರ್ಸ್ ಸ್ವಿಂಗ್ ಮತ್ತು ಬೌನ್ಸ್ ಮೂಲಕ ಇಂಗ್ಲೆಂಡ್ ಬ್ಯಾಟರ್​ಗಳನ್ನು ಕಾಡಲಾರಂಭಿಸಿದರು. ಪ್ರಸಿದ್ಧ್ ಸತತ ಎರಡು ಓವರ್‌ಗಳಲ್ಲಿ ಜಾಕೋಬ್ ಬೆಥೆಲ್ ಮತ್ತು ನಂತರ ರೂಟ್ ಅವರನ್ನು ಔಟ್ ಮಾಡಿದರು. ಇದ್ದಕ್ಕಿದ್ದಂತೆ ಇಂಗ್ಲೆಂಡ್‌ನ ಸ್ಕೋರ್ 332/4 ರಿಂದ 337/6 ಕ್ಕೆ ಏರಿತು. ಆದಾಗ್ಯೂ, ಮಳೆಯಿಂದಾಗಿ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಆದರೆ ಐದನೇ ದಿನದಾಟ ಆರಂಭವಾದ ಕೂಡಲೇ ಮ್ಯಾಜಿಕ್ ಮಾಡಿದ ಟೀಂ ಇಂಡಿಯಾ ವೇಗಿಗಳು ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ ಸರಣಿಯನ್ನು ಡ್ರಾದಲ್ಲಿ ಕೊನೆಗೊಳಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:26 pm, Mon, 4 August 25