AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

INDW vs SAW: ಆಫ್ರಿಕಾ ವಿರುದ್ಧದ ಏಕೈಕ ಟೆಸ್ಟ್ ಪಂದ್ಯವನ್ನು 10 ವಿಕೆಟ್​ಗಳಿಂದ ಗೆದ್ದ ಭಾರತ..!

INDW vs SAW: ಚೆನ್ನೈನ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಭಾರತ ಮಹಿಳಾ ತಂಡ ಹಾಗೂ ದಕ್ಷಿಣ ಆಫ್ರಿಕಾ ಮಹಿಳಾ ತಂಡಗಳ ನಡುವಿನ ಏಕೈಕ ಟೆಸ್ಟ್ ಪಂದ್ಯವನ್ನು ಭಾರತ ವನಿತಾ ಪಡೆ 10 ವಿಕೆಟ್​ಗಳಿಂದ ಗೆದ್ದುಕೊಂಡಿದೆ. ಆಫ್ರಿಕಾ ನೀಡಿದ 37 ರನ್‌ಗಳ ಸಾಧಾರಣ ಗುರಿಯನ್ನು ಭಾರತ ವನಿತಾ ಪಡೆ 9.2 ಓವರ್‌ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ ಸಾಧಿಸಿತು.

INDW vs SAW: ಆಫ್ರಿಕಾ ವಿರುದ್ಧದ ಏಕೈಕ ಟೆಸ್ಟ್ ಪಂದ್ಯವನ್ನು 10 ವಿಕೆಟ್​ಗಳಿಂದ ಗೆದ್ದ ಭಾರತ..!
ಭಾರತ ವನಿತಾ ಪಡೆ
ಪೃಥ್ವಿಶಂಕರ
|

Updated on:Jul 01, 2024 | 4:23 PM

Share

ಚೆನ್ನೈನ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಭಾರತ ಮಹಿಳಾ ತಂಡ ಹಾಗೂ ದಕ್ಷಿಣ ಆಫ್ರಿಕಾ ಮಹಿಳಾ ತಂಡಗಳ ನಡುವಿನ ಏಕೈಕ ಟೆಸ್ಟ್ ಪಂದ್ಯವನ್ನು ಭಾರತ ವನಿತಾ ಪಡೆ 10 ವಿಕೆಟ್​ಗಳಿಂದ ಗೆದ್ದುಕೊಂಡಿದೆ. 232 ರನ್​​ಗಳಿಗೆ 2 ವಿಕೆಟ್​ ಕಳೆದುಕೊಂಡು ಸೋಮವಾರ ತನ್ನ ಎರಡನೇ (ಫಾಲೋ-ಆನ್) ಇನ್ನಿಂಗ್ಸ್ ಮುಂದುವರೆಸಿದ ದಕ್ಷಿಣ ಆಫ್ರಿಕಾ ತಂಡ 373 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಭಾರತಕ್ಕೆ 37 ರನ್‌ಗಳ ಸಾಧಾರಣ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾ 9.2 ಓವರ್‌ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ ಗೆಲುವಿನ ದಡ ಮುಟ್ಟಿತು. ತಂಡದ ಪರ ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮಾ ಅಜೇಯ 24 ರನ್ ಹಾಗೂ ಶುಭಾ ಸತೀಶ್ ಅಜೇಯ 13 ರನ್ ಬಾರಿಸಿದರು.

ಭಾರತದ ಇನ್ನಿಂಗ್ಸ್

ಟಾಸ್ ಗೆದ್ದು ಮೊದಲ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾಕ್ಕೆ ಆರಂಭಿಕ ಆಟಗಾರ್ತಿಯಾರದ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧಾನ ತಲಾ ಶತಕ ಸಿಡಿಸುವ ಮೂಲಕ ಭರ್ಜರಿ ಓಪನಿಂಗ್ ನೀಡಿದರು. ಅಲ್ಲದೆ ಈ ಇಬ್ಬರು ಮೊದಲ ವಿಕೆಟ್​ಗೆ ಬರೋಬ್ಬರಿ 292 ರನ್​ಗಳ ದಾಖಲೆಯ ಜೊತೆಯಾಟ ನಡೆಸಿದರು. ಈ ವೇಳೆ ಸ್ಮೃತಿ 161 ಎಸೆತಗಳಲ್ಲಿ 26 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 149 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದರು. ಶಫಾಲಿ ವರ್ಮಾ ಕೂಡ 197 ಎಸೆತಗಳಲ್ಲಿ 23 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ ದಾಖಲೆಯ ದ್ವಿಶತಕ ಸಿಡಿಸಿ ಮಿಂಚಿದರು. ಈ ಇಬ್ಬರನ್ನು ಹೊರತುಪಡಿಸಿ ಮಧ್ಯಮ ಕ್ರಮಾಂದಕಲ್ಲಿ ಜೆಮಿಮಾ ರಾಡ್ರಿಗಸ್ 55 ರನ್, ನಾಯಕಿ ಹರ್ಮನ್​ಪ್ರೀತ್ ಕೌರ್ 69 ರನ್, ರಿಚಾ ಘೋಷ್ 86 ರನ್​ಗಳ ಇನ್ನಿಂಗ್ಸ್ ಆಡಿದರು. ಹೀಗಾಗಿ ಭಾರತ ತಂಡ ಬರೋಬ್ಬರಿ 603 ರನ್​ ಕಲೆಹಾಕಿ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

ದಕ್ಷಿಣ ಆಫ್ರಿಕಾ ಇನ್ನಿಂಗ್ಸ್

ಬೃಹತ್ ಮೊತ್ತದೆದುರು ಮೊದಲ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ ಕೇವಲ 299 ರನ್​ಗಳಿಗೆ ಆಲೌಟ್ ಆಯಿತು. ತಂಡದ ಪರ ಸುನೆ ಲೂಸ್ 65 ರನ್ ಹಾಗೂ ಮರಿಜಾನ್ನೆ ಕಪ್ 74 ರನ್​​ಗಳ ಇನ್ನಿಂಗ್ಸ್ ಆಡಿದರು. ಉಳಿದಂತೆ ಯಾರಿಂದಲೂ ಅರ್ಧಶತಕದ ಇನ್ನಿಂಗ್ಸ್ ಕಂಡುಬರಲಿಲ್ಲ. ಹೀಗಾಗಿ ಭಾರತ, ದಕ್ಷಿಣ ಆಫ್ರಿಕಾದ ಮೇಲೆ ಫಾಲೋ ಆನ್ ಹೇರಿತು. ಅದರಂತೆ ಎರಡನೇ ಇನ್ನಿಂಗ್ಸ್ ಆರಂಭಿದ ಆಫ್ರಿಕಾ ತಂಡ 373 ರನ್​ಗಳಿಗೆ ಆಲೌಟ್ ಆಗಿ ಭಾರತಕ್ಕೆ ಕೇವಲ 37 ರನ್​ಗಳ ಟಾರ್ಗೆಟ್ ನೀಡಿತು. ಎರಡನೇ ಇನ್ನಿಂಗ್ಸ್​ನಲ್ಲಿ ಆಫ್ರಿಕಾ ಪರ ನಾಯಕಿ ಲಾರಾ ವೊಲ್ವಾರ್ಡ್ಟ್ 122 ರನ್, ಸುನೆ ಲೂಸ್ 109 ರನ್​ಗಳ ಶತಕದ ಇನ್ನಿಂಗ್ಸ್ ಆಡಿದರೆ, ನಾಡಿನ್ ಡಿ ಕ್ಲರ್ಕ್ 61 ರನ್​ಗಳ ಕಾಣಿಕೆ ನೀಡಿದರು.

ಸ್ನೇಹಾಗೆ 8 ವಿಕೆಟ್

ಇನ್ನು ಮೊದಲ ಇನ್ನಿಂಗ್ಸ್​ನಲ್ಲಿ ಭಾರತದ ಪರ ಬೌಲಿಂಗ್​ನಲ್ಲಿ ಮಿಂಚಿದ ಸ್ನೇಹಾ ರಾಣಾ ಬರೋಬ್ಬರಿ 8 ವಿಕೆಟ್​ ಕಬಳಿಸಿ ದಾಖಲೆ ನಿರ್ಮಿಸಿದರು. ಹೀಗಾಗಿ ಮೊದಲ ಇನ್ನಿಂಗ್ಸ್​ನಲ್ಲಿ ಭಾರತ ಮೇಲುಗೈ ಸಾಧಿಸಲು ಸಾಧ್ಯವಾಯಿತು. ಹಾಗೆಯೇ ಎರಡನೇ ಇನ್ನಿಂಗ್ಸ್​ನಲ್ಲಿ ಸ್ನೇಹಾ, ದೀಪ್ತಿ, ರಾಜೇಶ್ವರಿ ತಲಾ 2 ವಿಕೆಟ್ ಪಡೆದರೆ, ಪೂಜಾ, ಶಫಾಲಿ, ಹರ್ಮನ್​ಪ್ರೀತ್ ಕೌರ್ ತಲಾ 1 ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:10 pm, Mon, 1 July 24